ಬುಧವಾರ, ನವೆಂಬರ್ 13, 2019
17 °C

ಪ್ರವಾಹ ಸಂತ್ರಸ್ತರಿಗೆ ಪರಿಹಾರ| ಡಿ.ಸಿ ಭರವಸೆ; ಪ್ರತಿಭಟನೆ ಹಿಂದಕ್ಕೆ ಪಡೆದ ರೈತರು

Published:
Updated:
Prajavani

ಬೆಳಗಾವಿ: ಉಪಮುಖ್ಯಮಂತ್ರಿ ಅಥವಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸದ್ಯದಲ್ಲಿಯೇ ರೈತರ ಸಭೆ ಕರೆದು, ಬೇಡಿಕೆ ಈಡೇರಿಸುವ ಬಗ್ಗೆ ತೀರ್ಮಾನಿಸಲಾಗುವುದೆಂದು ಜಿಲ್ಲಾಧಿಕಾರಿ ಅವರು ನೀಡಿದ ಭರವಸೆಯ ಮೇರೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಅಹೋರಾತ್ರಿ ಪ್ರತಿಭಟನೆಯನ್ನು ಮಂಗಳವಾರ ರಾತ್ರಿ ಹಿಂದಕ್ಕೆ ಪಡೆದಿದೆ.

ಅತಿವೃಷ್ಠಿ ಹಾಗೂ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಮನೆ ಕಲ್ಪಿಸಬೇಕು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಈಗ ನೀಡಲಾಗುತ್ತಿರುವ ಪ್ರಾಣ ಹಾನಿಯ ಪರಿಹಾರವನ್ನು ಹೆಚ್ಚಿಸಬೇಕೆಂದು ರೈತರು ಎರಡು ದಿನಗಳಿಂದ ನಿರಂತರ ಪ್ರತಿಭಟನೆ ನಡೆಸಿದ್ದರು.

ಸಂಘಟನೆಯ ಮುಖಂಡರಾದ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ್‌ ಹಾಗೂ ಇತರರ ಜೊತೆ ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅವರು ಸಂಜೆ ಪುನಃ ಮಾತುಕತೆ ನಡೆಸಿ, ಮನವೊಲಿಸಿದರು.

ಶೆಟ್ಟರ್‌ ಜೊತೆ ಚರ್ಚೆ:

ಬೆಳಿಗ್ಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚೂನಪ್ಪ ಪೂಜೇರಿ ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ದೂರವಾಣಿಯಲ್ಲಿ ಮಾತನಾಡಿದರು. ಬುಧವಾರ ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಇದೆ. ಇದಾದ ನಂತರ ಬೆಳಗಾವಿಗೆ ಬಂದು ನಿಮ್ಮ (ರೈತರು) ಜೊತೆ ಮಾತನಾಡುತ್ತೇನೆ. ಸಮಸ್ಯೆಗಳನ್ನು ಬಗೆಹರಿಸೋಣ ಎಂದು ಭರವಸೆ ನೀಡಿದ್ದರು.

7 ಜನ ರೈತರು ಅಸ್ವಸ್ಥ: 

ಸತತ ಎರಡು ದಿನಗಳ ಕಾಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಾಲ್ಕು ಜನ ರೈತ ಮಹಿಳೆಯರು ಹಾಗೂ ಮೂವರು ಪುರುಷರು ಸೇರಿದಂತೆ ಒಟ್ಟು 7 ಜನರು ಅಸ್ವಸ್ಥರಾಗಿದ್ದರು. ತೀವ್ರ ಜ್ವರ ಹಾಗೂ ರಕ್ತದ ಒತ್ತಡಕ್ಕೆ ಸಿಲುಕಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಡಿ.ಸಿ ಆವರಣದಲ್ಲಿಯೇ ಊಟ– ವಸತಿ:

ಎರಡು ದಿನಗಳ ಕಾಲ ರೈತರು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿಯೇ ಒಲೆ ಹಚ್ಚಿ, ಅಡುಗೆ ಮಾಡಿದರು. ಊಟವನ್ನೂ ಅಲ್ಲಿಯೇ ಸವಿದರು. ರಾತ್ರಿ ವೇಳೆ ಆವರಣದಲ್ಲಿ ಹಾಸಿಗೆ ಹೊದ್ದು, ಮಲಗಿದ್ದರು.

ಪ್ರತಿಕ್ರಿಯಿಸಿ (+)