ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಚಳಿಜ್ವರ: ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಭರ್ತಿ

Published 1 ಜನವರಿ 2024, 8:52 IST
Last Updated 1 ಜನವರಿ 2024, 8:52 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ತಾಪಮಾನ ಇಳಿಮುಖವಾಗಿ ಸಾಗಿದೆ. ಪರಿಣಾಮ, ದಿನದಿಂದ ದಿನಕ್ಕೆ ಚಳಿ ಹೆಚ್ಚಾಗಿದೆ. ಈ ತಂಪಿನ ವಾತಾವರಣದ ಕಾರಣ ಸಹಜವಾಗಿಯೇ ಕೆಮ್ಮು, ನೆಗಡಿ, ಜ್ವರ, ಮೈಕೈ ನೋವು ಮುಂತಾದ ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುವವರ ಸಂಖ್ಯೆಯೂ ಹೆಚ್ಚಾಗಿದೆ.

ಹೌದು. ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋದರೂ ಈಗ ಗಂಭೀರವಲ್ಲದ; ಆದರೆ ಪೀಡಿಸುವ ಕಾಯಿಲೆಗಳಿಂದ ಬಳಲುವವರೇ ಹೆಚ್ಚಾಗಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಂತೂ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಇಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರತಿಯೊಬ್ಬರಿಗೂ ಕೆಮ್ಮು, ಶೀತ, ಜ್ವರ, ಚಳಿ ಮುಂತಾದ ಸಾಮಾನ್ಯ ಕಾಯಿಲೆಗಳೇ ಕಾಡುತ್ತಿವೆ.

ಬೆಳಗಾವಿ ಜಿಲ್ಲೆಯನ್ನು ‘ಕರ್ನಾಟಕದ ಕಾಶ್ಮೀರ’ ಎಂದೂ ಕರೆಯುವ ರೂಢಿ ಇದೆ. ರಾಜ್ಯದ ಉತ್ತರ ತುದಿಯ ಜಿಲ್ಲೆ ಎಂಬುದು ಒಂದು ಕಾರಣವಾದರೆ, ಇಲ್ಲಿನ ಮೈ ಕೊರೆಯುವ ಚಳಿಯ ವಾತಾವರಣ ಕೂಡ ಈ ಹೆಸರು ಬರಲು ಕಾರಣ. ಹೇಳಿಕೇಳಿ ಚಳಿಗೆ ಹೆಸರಾದ ಊರಲ್ಲಿ ಈಗ ತಾಪಮಾನ ಕೂಡ ಕಡಿಮೆಯಾಗಿದೆ. ಇದರಿಂದ ಕಳೆದೊಂದು ತಿಂಗಳಿಂದ ಚಳಿ ಸಂಬಂಧಿ ಕಾಯಿಲೆಗಳು ಹೆಚ್ಚಾಗಿವೆ.

ಜರ್ಕಿನ್‌ಗೆ ಮೊರೆ ಹೋದ ಜನ: ಜನ ಈಗ ಚುಮುಚುಮು ಚಳಿಗೆ ಮೈಯೊಡ್ಡಿದ್ದಾರೆ. ನೌಕರರು, ವಿದ್ಯಾರ್ಥಿಗಳು, ರೈತರು, ಗೃಹಿಣಿಯರು ನಸುಕಿನಲ್ಲೇ ಎದ್ದು ಕೆಲಸಕ್ಕೆ ಹಾಜರಾಗುವವರು ಥರಗುಟ್ಟುತ್ತಿದ್ದಾರೆ. ಇಷ್ಟು ದಿನ ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಸ್ವೇಟರ್, ಜರ್ಕಿನ್, ಮಫ್ಲರ್, ಉಲನ್‌ ಟೊಪ್ಪಿಗೆ, ಸ್ಕಾರ್ಪ್‌, ಕಿವಿ ಪಟ್ಟಿ, ಮಂಕಿಕ್ಯಾಪ್‌ ಮೈ ಕೊಡವಿಕೊಂಡು ಎದ್ದಿವೆ.

ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರು, ರೈಲು– ಬಸ್‌ ಮೂಲಕ ಪ್ರಯಾಣಿಸುವವರು ದಪ್ಪನಾದ ಜರ್ಕಿನ್‌ಗಳಿಗೆ ಮೊರೆ ಹೋಗಿದ್ದಾರೆ. ದ್ವಿಚಕ್ರ ವಾಹನ ಸವಾರರು ಕೂಡ ಮುಖಗವಸು ಹಾಕಿಕೊಳ್ಳುವ ಮೂಲಕ ಶೀತಗಾಳಿ ದೇಹ ಹೊಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ನಸುಕಿನಲ್ಲಿ ಸ್ವಚ್ಛತೆಗೆ ಬರುತ್ತಿದ್ದ ಪೌರ ಕಾರ್ಮಿಕರು ಈಗ ಬೆಂಕಿಯ ಮುಂದೆ ಕೈ ಕಾಯಿಸಿಕೊಳ್ಳುತ್ತ ಕುಳಿತಿರುತ್ತಾರೆ. ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಎಲ್ಲ ಕಡೆಯೂ ವಾಯು ವಿಹಾರಿಗಳ ಸಂಖ್ಯೆ ಬೆರಳೆಣಿಕೆಗೆ ಇಳಿದಿದೆ. ಬೆಳಿಗ್ಗೆ 7ರವರೆಗೂ ಚಾದರ್‌ನೊಳಗೆ ಕಾಲುತೂರಿಸಿ ಬೆಚ್ಚಗೆ ಮಲಗುವುದೇ ಒಂಥರದ ಹಿತ...

ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕೆಮ್ಮು, ನೆಗಡಿ, ಜ್ವರ, ಕೊರೊನಾದಂತಹ ಕಾಯಿಲೆಗಳ ಬಗ್ಗೆ ಜನರು ಸದಾ ಎಚ್ಚರ ವಹಿಸಬೇಕು ಎಂಬ ಸಂದೇಶವನ್ನೇ ಈಗ ಎಲ್ಲ ವೈದ್ಯರೂ ನೀಡುತ್ತಿದ್ದಾರೆ.

ಜಿಲ್ಲೆಯಲ್ಲಿ ಕೆಮ್ಮು, ನೆಗಡಿ, ಜ್ವರ ಸೇರಿ ಸಾಂಕ್ರಾಮಿಕ ರೋಗಗಳಾದ ಡೆಂಗಿ, ಮಲೇರಿಯಾ ಪ್ರಕರಣಗಳು ಅಲ್ಲಲ್ಲಿ ಕಾಣಸಿಗುತ್ತಿವೆ. ಹಳ್ಳಿಗಳಲ್ಲಿ ಜನ ಸ್ವಚ್ಛತೆ, ಬಿಸಿನೀರು ಸೇವನೆಗೆ ಆದ್ಯತೆ ನೀಡಬೇಕು ಎಂದೂ ವೈದ್ಯರು ಹೇಳುತ್ತಾರೆ.

ನಮ್ಮೂರಿನಲ್ಲಿ ಹಲವು ಜನರಿಗೆ ಶೀತ ಕೆಮ್ಮು ಜ್ವರ ಕಾಣಸಿಕೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳೇ ತುಂಬಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಜಾಗೃತಿ ಕಾರ್ಯಕ್ರಮ ಮಾಡಬೇಕು
ಶ್ರೀಮಂತ ಪಾಟೀಲ ನಿವಾಸಿ ಹಾರೂಗೊಪ್ಪ
ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೊಳಚೆ ನೀರು ನಿಲ್ಲದಂತೆ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕ್ರಿಮಿನಾಶಕ ಸಿಂಪಡಿಸಬೇಕು
ಭಾವನಾ ಜೋಡೆತ್ತಿನ ನೆಹರೂ ನಗರ ಬೆಳಗಾವಿ
ದಿನವೂ 300 ಮಂದಿ ತಪಾಸಣೆ
‘ಜಿಲ್ಲೆಯಲ್ಲಿ ಜೆಎನ್‌–1 ಕೋವಿಡ್‌ ಲಕ್ಷಣಗಳು ಇದೂವರೆಗೆ ಯಾರಲ್ಲೂ ಕಂಡುಬಂದಿಲ್ಲ. ಒಬ್ಬ ವ್ಯಕ್ತಿಗೆ ವಾರದ ಹಿಂದೆ ಸಾಮಾನ್ಯ ಕೋವಿಡ್‌ ಪಾಸಿಟಿವ್‌ ಬಂದಿತ್ತು. ಅವರನ್ನು ಈಗಾಗಲೇ ಐಸೋಲೇಷನ್‌ ಮಾಡಲಾಗಿದೆ. ನೆರೆಯ ರಾಜ್ಯದಿಂದ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಅಲ್ಲಿಯೂ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಸೋಂಕುಗಳು ಕಂಡುಬಂದಿಲ್ಲ. ಪ್ರತಿದಿನ ಕನಿಷ್ಠ 300 ಮಂದಿ ಶಂಕಿತ ಕೋವಿಡ್‌ ರೋಗಿಗಳನ್ನು ತಪಾಸಣೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣೆ ತಿಳಿಸಿದ್ದಾರೆ. ಬಿಮ್ಸ್‌ ಜಿಲ್ಲಾ ಆಸ್ಪತ್ರೆ ಕೆಎಲ್‌ಇಎಸ್‌ ಆಸ್ಪತ್ರೆ ಡಯಗ್ನಾಸ್ಟಿಕ್‌ ಸೆಂಟರ್‌ ಸೇರಿ ನಾಲ್ಕು ವಿಆರ್‌ಡಿಎಲ್‌ (ವೈರಸ್‌ ರಿಸರ್ಜ್ ಅಂಡ್‌ ಡಯಾಗ್ನಾಸ್ಟಿಕ್‌ ಲ್ಯಾಬ್‌) ಪ್ರಯೋಗಾಲಯಗಳು ಇವೆ. ವೈರಾಣು ಪರೀಕ್ಷೆ ನಿರಂತರವಾಗಿ ಸಾಗಿದೆ ಎಂದೂ ಅವರು ಹೇಳಿದ್ದಾರೆ.
ಬೆಚ್ಚಗಿರುವುದು ಮುಖ್ಯ: ಡಾ.ಜ್ಯೋತಿ
ಚಳಿಗಾಲದಲ್ಲಿ ವೈರಾಣುಗಳು ಕ್ರಿಯಾಶೀಲವಾಗುತ್ತವೆ. ಸಹಜವಾಗಿಯೇ ಕೆಮ್ಮು ಶೀತ ಜ್ವರ ಫ್ಲೂ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳು ಬರುತ್ತವೆ. ಇದರಿಂದ ಪಾರಾಗಲು ಜನರು ಯಾವಾಗಲೂ ಆರೋಗ್ಯವನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು. ಕಾಯಿಲೆ ಬಂದ ಮೇಲೆ ಔಷಧೋಪಚಾರ ಮಾಡಿಕೊಳ್ಳುವ ಬದಲು ಮುಂಚಿತವಾಗಿಯೇ ಜಾಗ್ರತೆ ವಹಿಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೊಧನಾ ಕೇಂದ್ರದ ಶ್ವಾಸಕೋಶ ತಜ್ಞೆ ಜೆಎನ್‌ಎಂಸಿಯ ಅಸೋಸಿಯೇಟ್‌ ಪ್ರೊಫೆಸರ್‌ ಡಾ.ಜ್ಯೋತಿ ಹಟ್ಟಿಹೊಳಿ ಸಲಹೆ ನೀಡಿದ್ದಾರೆ. ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು. ಬಿಸಿಯಾದ ಊಟ ನೀರು ಬಳಸಬೇಕು. ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಬೇಕು. ಚಿಕ್ಕ ಮಕ್ಕಳು ಹಾಗೂ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಬೇಗ ಸೋಂಕಿಗೆ ಒಳಗಾಗುತ್ತಾರೆ. ಅಂಥವರ ಬಗ್ಗೆ ಕಾಳಜಿ ವಹಿಸಬೇಕು. ಆಯಾ ಕಾಲಕ್ಕೆ ತಕ್ಕಂತೆ ಲಸಿಕೆಗಳೂ ಇವೆ. ಅಗತ್ಯವಿದ್ದವರು ಮುಂಜಾಗ್ರತೆಯಿಂದ ಲಸಿಕೆ ಪಡೆದುಕೊಳ್ಳಬೇಕು ಎಂದೂ ಅವರು ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜನಸಂದಣಿಯಲ್ಲಿ ಭಾಗವಹಿಸಬಾರದು. ಯಾರಿಗೇ ಸೋಂಕು ಇದ್ದರೂ ಎಲ್ಲರಿಗೂ ತಗಲುತ್ತದೆ. ಯಾರಿಗಾದರೂ ಶೀತ ಜ್ವರಗಳು ಇದ್ದರೆ ತಮ್ಮನ್ನು ತಾವು ‘ಐಸೋಲೇಟ್‌’ ಮಾಡಿಕೊಳ್ಳಬೇಕು ಎಂದೂ ಡಾ.ಜ್ಯೋತಿ ಕಿವಿಮಾತು ಹೇಳಿದ್ದಾರೆ.

ಸೋಕಿನಿಂದ ರಕ್ಷಣೆ ಹೇಗೆ?

* ಮಕ್ಕಳಿಗೆ ಉದ್ದ ತೋಳಿನ ಉಲನ್‌ ಬಟ್ಟೆ ಹಾಕಿದರೆ ಸೊಳ್ಳೆ ಕಚ್ಚುವುದಿಲ್ಲ * ಮಲಗುವಾಗ ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸಿ * ಪ್ರತಿದಿನ ಬೇವಿನ ತಪ್ಪಲು ಲೋಬಾನ ಹೊಗೆ ಅಥವಾ ಸೊಳ್ಳೆ ಬತ್ತಿಗಳನ್ನು ಉರಿಸಿ * ಮನೆಯ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ * ಮನೆಯಲ್ಲಿ ವಾಟರ್‌ ಫಿಲ್ಟರ್‌ ಬಕೀಟ್‌ ಟ್ಯಾಂಕ್‌ ಪೂಜೆಯ ಜಗಲಿಕಟ್ಟೆ ಡ್ರಮ್‌ಗಳನ್ನು ಎರಡು ದಿನಕ್ಕೊಮ್ಮೆ ಚೆನ್ನಾಗಿ ಉಜ್ಜಿ ತೊಳೆಯಿರಿ * ವಾಹನಗಳ ಮೇಲೆ ಸಂಚರಿಸುವಾಗ ಕುಲಾಯಿ ಕೊಂಚಗಿ ಟೊಪ್ಪಿಗೆ ಸ್ವೆಟರ್‌ ಧರಿಸಿ ಓಡಾಡಬೇಕು * ತಣ್ಣನೆಯ ಆಹಾರಗಳನ್ನು ತಿನ್ನದೇ ಬಿಸಿ ಪದಾರ್ಥ ಮಾತ್ರ ಬಳಸಬೇಕು. * ಶಾಲೆಯಿಂದ ಆಟದಿಂದ ಮನೆಗೆ ಬರುವ ಮಕ್ಕಳಿಗೆ ಸಾಬೂನಿನಿಂದ ತಕ್ಷಣ ಕೈ–ಕಾಲು ತೊಳೆಸಬೇಕು. * ಡೆಂಗಿ ಮಲೇರಿಯಾ ಚಿಕುನ್‌ ಗುನ್ಯದಂಥ ರೊಗಾಣು ಸೊಳ್ಳೆಗಳು ನಿಂತ ನೀರಿನಲ್ಲಿ ಹೆಚ್ಚಾಗಿ ಹುಟ್ಟುತ್ತವೆ. ಎಲ್ಲಿ ಈ ಪ್ರಕರಣ ಕಾಣಿಸಿಕೊಳ್ಳುತ್ತವೆಯೋ ಅಲ್ಲಿನ ಗ್ರಾಮ ಪಂಚಾಯಿತಿಗೆ ಸಂವಹನ ಬೆಳೆಸಿ ಕೀಟನಾಶಕಗಳ ಸಿಂಪಡಣೆ ಮಾಡಬೇಕು. * ಸೊಳ್ಳೆ ನಿಯಂತ್ರಣಕ್ಕಾಗಿ ಜೈವಿಕ ಕೀಟನಾಶಕವಾಗಿ ಗಪ್ಪಿ ಮತ್ತು ಗಂಬೂಷಿಯಾ ಎಂಬ ಮೀನು ಮರಿಗಳನ್ನು ಬಳಸಬೇಕು. ಅಲ್ಲದೇ ಮನೆಯಲ್ಲಿನ ಡ್ರಮ್‌ ನೀರಿನ ತೊಟ್ಟಿ ಅಕ್ವೇರಿಯಂಗಳನ್ನು ಆಗಾಗ ಸ್ವಚ್ಛ ಮಾಡಿ ಒಣಗಿಸಬೇಕು.

ಕುಸಿದ ತಾಪಮಾನ
ಬೆಳಗಾವಿಯಲ್ಲಿ ಡಿ.31ರವರೆಗೂ ವಾಡಿಕೆಯಂತೆ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ ಇರಬೇಕು. ಆದರೆ ವಾಯುಭಾರ ಕುಸಿತದಿಂದ ಈ ವರ್ಷ ಕನಿಷ್ಠ ತಾಪಮಾನ 12ರಿಂದ 14 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಗರಿಷ್ಠ ತಾಪಮಾನ ಕೂಡ ಸರಾಸರಿ 30ಕ್ಕೆ ಇಳಿದಿದೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ ಎಂದು ಇಂಡಿಯನ್‌ ಮೆಟ್ರಾಲಾಜಿಕಲ್‌ ವಿಭಾಗ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT