ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಇಡೀ ಕಾರ್ಖಾನೆಗೆ ಹೊತ್ತಿಕೊಂಡ ಬೆಂಕಿ: ಮೂವರ ಸ್ಥಿತಿ‌ ಚಿಂತಾಜನಕ

Published : 6 ಆಗಸ್ಟ್ 2024, 17:57 IST
Last Updated : 6 ಆಗಸ್ಟ್ 2024, 17:57 IST
ಫಾಲೋ ಮಾಡಿ
Comments

ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದ ಹೊರ ವಲಯದಲ್ಲಿರುವ ಟಿಕ್ಸೊ ಟೇಪ್‌ (ಅಂಟು) ಕಾರ್ಖಾನೆಯಲ್ಲಿ ಬೃಹತ್‌ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಮೂವರ ಸ್ಥಿತಿ‌ ಚಿಂತಾಜನಕವಾಗಿದ್ದು, ಒಬ್ಬ ಕಾರ್ಮಿಕ ಕಾಣೆಯಾಗಿದ್ದಾನೆ.

ಕಾರ್ಮಿಕರಾದ ಬೆಳಗಾವಿ ತಾಲ್ಲೂಕಿನ ಕವಳವಾಡಿಯ ಮಾರುತಿ ನಾರಾಯಣ ಕರವೇಕರ (32), ಜುನೇಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35), ರಾಝವಾಡಿಯ ರಂಜೀತ ದಶರಥ ಪಾಟೀಲ (39) ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೂವರ‌ ಸ್ಥಿತಿಯೂ ಚಿಂತಾಜನಕವಾಗಿದ್ದು, ಹೆಚ್ಚಿ‌ನ ಚಿಕಿತ್ಸೆಗೆ ಕೆಎಲ್ಇ ಆಸ್ಪತ್ರೆಗೆ ಸಾಗಿಸಲಾಗಿದೆ.

ಮಾರ್ಕಂಡೇಯ ನಗರದ ಯಲ್ಲಪ್ಪ (20) ಎಂಬ ಕಾರ್ಮಿಕ ಇನ್ನೂ ಕಾರ್ಖಾನೆ ಒಳಗೇ ಸಿಲುಕಿದ್ದಾರೆ ಎಂದು ಕಾರ್ಮಿಕರು‌ ಮಾಹಿತಿ‌ ನೀಡಿದ್ದಾರೆ.

ಯುವಕನ ಸಂಬಂಧಿಕರು ಕಾರ್ಖಾನೆ ಆವರಣದಲ್ಲಿ ಜಮಾಯಿಸಿದ್ದು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಮಗನನ್ನು ರಕ್ಷಿಸುವಂತೆ ದೇವರಲ್ಲಿ ಅಂಗಲಾಚುತ್ತಿದ್ದಾರೆ.

ಯುವಕನ ಸ್ಥಿತಿಗತಿ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ ಎಂದು ಸ್ಥಳದಲ್ಲಿರುವ ಪೊಲೀಸರು ಮಾಹಿತಿ‌ ನೀಡಿದರು.

ಬೆಂಕಿ ಅವಘಡದ ಮಾಹಿತಿ ಕಾಳ್ಗಿಚ್ಚಿನಂತೆ ಹರಡಿದ್ದು ಸುತ್ತಮುತ್ತಲಿನ ಅಪಾರ ಜನ ಸ್ಥಳಕ್ಕೆ ಧಾವಿಸಿದ್ದಾರೆ.

ಸ್ನೇಹಂ ಹೆಸರಿನ ಈ ಕಾರ್ಖಾನೆಯಲ್ಲಿ ಮೂರು ಶಿಫ್ಟ್‌ಗಳಲ್ಲಿ ತಲಾ 74 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಅವಘಡ ಸಂಭವಿಸಿದ್ದರಿಂದ ಒಳಗೆ ಎಷ್ಟು ಜನರಿದ್ದಾರೆ, ಎಷ್ಟು ಜನ ಪರಾರಿಯಾಗಿದ್ದಾರೆ ತಿಳಿಯುತ್ತಿಲ್ಲ ಎಂದು ನಾವಗೆ ಗ್ರಾಮಸ್ಥರು ತಿಳಿಸಿದ್ದಾರೆ.

ಬೆಂಕಿ ಕೆನ್ನಾಲಿಗೆ ಎಷ್ಟು ಭೀಕರವಾಗಿದೆ ಎಂದರೆ ಅಗ್ನಿಶಾಮಕ ವಾಹನಗಳು ಹತ್ತಿರ ಸುಳಿಯಲೂ ಆಗುತ್ತಿಲ್ಲ. ಪೊಲೀಸರು, ಗ್ರಾಮಸ್ಥರು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಕಾರ್ಖಾನೆಯ ಲಿಫ್ಟ್‌ನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗಿತ್ತು. ಅಲ್ಲಿ ಹೊತ್ತಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಕಾರ್ಖಾನೆ ಆವರಿಸಿತು. ಟಿಕ್ಸೊ ಟೇಪ್‌ಗೆ ಬಳಸಲು ಸಲಕರಣೆಗಳಲ್ಲಿ ಕೆಲವು ಅಗ್ನಿ ಹೆಚ್ಚಾಗಲು ಅನುಕೂಲಕರವಾಗಿದ್ದವು. ಬೆಂಕಿ ಕಂಡು ಕಾರ್ಮಿಕರು ದಿಕ್ಕಾಪಾಲಾಗಿ ಓಡಿದರು ಎಂದೂ ಗ್ರಾಮಸ್ಥರು ತಿಳಿಸಿದ್ದಾರೆ.

200 ಬೆಡ್ ಸಿದ್ಧಗೊಳಿಸಲಾಗಿದೆ: ಡಿ.ಸಿ

ಅಗ್ನಿ ಅವಘಡ ಸಂಭವಿಸಿದ ನಾವಗೆ ಗ್ರಾಮಕ್ಕೆ‌ ಧಾವಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಡರಾತ್ರಿ 12.30ರವರೆಗೂ ಸ್ಥಳದಲ್ಲಿದ್ದರು.

'ಸ್ನೇಹಂ ಕಾರ್ಖಾನೆಯ ಮಾಲೀಕರನ್ನು ವಶಕ್ಕೆ ಒಡೆಯಲಾಗಿದೆ. ಒಳಗೆ ಎಷ್ಟು ಜನ ಸಿಲುಕಿದ್ದಾರೆ ಎಂದು ಗೊತ್ತಾಗಿಲ್ಲ. ಇದೊಂದು ದೊಡ್ಡ ಅವಘಡ. ಮುಂಜಾಗೃತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 200 ಬೆಡ್ ಸಿದ್ಶಗೊಳಿಸಲಾಗಿದೆ' ಎಂದು ಅವರು‌ ಮಾಧ್ಯಮದವರಿಗೆ ಮಾಹಿತಿ‌ ನೀಡಿದರು.

'ಆರು ಅಗ್ನಿಶಾಮಕ ವಾಹನಗಳ ಸಮೇತ ಹಲವು ಸಿಬ್ಬಂದಿ ಬೆಂಕಿ‌ ನಂದಿಸುವಲ್ಲಿ ನಿರತರಾಗಿದ್ದಾರೆ. ಕಾರ್ಖಾನೆಯ ಸುತ್ತ ಮನೆಗಳಿದ್ದು, ಜನರು ಆತಂಕ ಪಡಬೇಕಾಗಿಲ್ಲ. ಕಾರ್ಖಾನೆಯಲ್ಲಿನ ಗ್ಯಾಸ್ ಸಿಲಿಂಡರುಗಳು ಸ್ಪೋಟಗೊಳ್ಳುವ ಸಾದ್ಯತೆ ಇಲ್ಲ ಎಂದು ಪರಿಣತರು‌ ಖಚಿತಪಡಿಸಿದ್ದಾರೆ' ಎಂದರು.

'ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಎಸ್ಪಿ ಡಾ.ಭೀಮಾಶಂಕರ‌ ಗುಳೇದ ನೇತೃತ್ವದಲ್ಲಿ ಸಾಕಷ್ಟು ಪೊಲೀಸರನ್ನೂ ನಿಯೋಜಿಸಲಾಗಿದೆ. ಹೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಎಲ್ಲ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿ ತೊಡಗಿದ್ದಾರೆ' ಎಂದೂ ಡಿ.ಸಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT