ಬುಧವಾರ, ಜನವರಿ 22, 2020
26 °C
ಮತ ಚಲಾಯಿಸಲು ಬರುವವರಿಗೆ ವಾಹನದ ವ್ಯವಸ್ಥೆ

ಬೆಳಗಾವಿ: ಸಂಕಷ್ಟ ಮರೆತು ಹಕ್ಕು ಚಲಾಯಿಸಿದ ಸಂತ್ರಸ್ತರು

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನೆರೆಯಿಂದ ಉಂಟಾಗಿದ್ದ ಸಂಕಷ್ಟಗಳನ್ನು ಮರೆತು ಹಕ್ಕು ಚಲಾಯಿಸಿದ ಸಂತ್ರಸ್ತರು. ಪಟ್ಟಣಗಳಿಗಿಂತಲೂ ಹಳ್ಳಿಗಳಲ್ಲಿ ಕಂಡುಬಂದ ಹೆಚ್ಚಿನ ಉತ್ಸಾಹ. ಮತ ಚಲಾಯಿಸಲು ಬರುವವರಿಗೆ ವಾಹನದ ವ್ಯವಸ್ಥೆ. ಮತಗಟ್ಟೆಗಳಿಂದ ಸ್ವಲ್ಪ ದೂರದಲ್ಲಿ, ಮತದಾರರ ಮನವೊಲಿಕೆಗೆ ಕೊನೆಯ ಹಂತದ ಕಸರತ್ತು. ಬಲ–ಬೆಂಬಲದ ಚರ್ಚೆ. ಪ್ರಜಾತಂತ್ರದ ಹಬ್ಬದ ಸಂಭ್ರಮ.

– ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಗುರುವಾರ ನಡೆದ ಮತದಾನ ಸಂದರ್ಭದ ನೋಟಗಳಿವು. ತಮ್ಮ ಹಕ್ಕು ಚಲಾಯಿಸುವ ಮೂಲಕ ಅಭ್ಯರ್ಥಿಗಳ ಭವಿಷ್ಯ ಬರೆದಿರುವ ಮತದಾರರ ಮನದಾಳ ತಿಳಿಯಲು ಡಿ.9ರವರೆಗೆ ಕಾಯಬೇಕು. ಅಂದು ಇಲ್ಲಿನ ಆರ್‌ಪಿಡಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

ಅಥಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಹೇಶ ಕುಮಠಳ್ಳಿ, ಕಾಂಗ್ರೆಸ್‌ನ ಗಜಾನನ ಮಂಗಸೂಳಿ, ಕೆಪಿಜೆಪಿಯ ವಿನಾಯಕ ಮಠಪತಿ ಸೇರಿದಂತೆ 8 ಅಭ್ಯರ್ಥಿಗಳು ಹಾಗೂ ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲ, ಕಾಂಗ್ರೆಸ್‌ನ ಭರಮಗೌಡ (ರಾಜು) ಕಾಗೆ, ಜೆಡಿಎಸ್‌ನ ಶ್ರೀಶೈಲ ತುಗೆಶೆಟ್ಟಿ ಸೇರಿದಂತೆ 9 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಲಾಗಿದೆ.

ತರಾಟೆಗೆ ತೆಗೆದುಕೊಂಡಿದ್ದರು: ಈ ಕ್ಷೇತ್ರಗಳ ಕೆಲವು ಹಳ್ಳಿಗಳ ಪ್ರವಾಹ ಸಂತ್ರಸ್ತರು, ತಮಗೆ ಸಮರ್ಪಕವಾಗಿ ಪರಿಹಾರ ದೊರೆಯದೇ ಇರುವುದರಿಂದ ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದರು. ಪ್ರತಿಭಟನೆ ನಡೆಸಿದ್ದರು. ವಿಶೇಷವಾಗಿ ಅಥಣಿ ಕ್ಷೇತ್ರದಲ್ಲಿ ಮತ ಕೇಳಲು ಬಂದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಮೊದಲಾದವರನ್ನು ತರಾಟೆಗೆ ತೆಗೆದುಕೊಂಡ ಘಟನೆಗಳು ನಡೆದಿದ್ದವು. ಅಂತೆಯೇ ಅನರ್ಹರಿಗೆ ಪ್ರವೇಶವಿಲ್ಲ ಎನ್ನುವ ಬೋರ್ಡ್‌ಗಳನ್ನು ತೆಲಸಂಗ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಹಾಕಲಾಗಿತ್ತು. ಇದರಿಂದಾಗಿ, ಸಂತ್ರಸ್ತರು ಮತದಾನದಿಂದ ದೂರ ಉಳಿಯುವ ಹಾಗೂ ಮತದಾನ ಪ್ರಮಾಣ ಕುಸಿಯುವ ಆತಂಕ ಎದುರಾಗಿತ್ತು. ಆದರೆ, ಅಭ್ಯರ್ಥಿಗಳು ಹಾಗೂ ಜಿಲ್ಲಾಡಳಿತ ನೀಡಿದ ಭರವಸೆ ಆಧರಿಸಿ ಜನರು ಮತ ಹಕ್ಕು ಚಲಾಯಿಸಿದ್ದಾರೆ. ಯಾವುದೇ ಗ್ರಾಮದವರು ಕೂಡ ಮತದಾನ ಬಹಷ್ಕರಿಸಿಲ್ಲ.

ಅಥಣಿ ಕ್ಷೇತ್ರದ ಸತ್ತಿ, ನದಿಇಂಗಳಗಾಂವ, ಜನವಾಡ, ನಾಗನೂರು ಪಿ.ಕೆ., ದೊಡ್ಡವಾಡ, ರಡ್ಡೇರಹಟ್ಟಿ, ಅವರಕೋಡ, ದರೂರ, ಹಳ್ಯಾಳ, ಕಾಗವಾಡ ವಿಧಾನಸಭಾ ಕ್ಷೇತ್ರದ ಜುಗುಳ, ಮಂಗಾವತಿ, ಶೇಡಬಾಳ ಮೊದಲಾದ ಪ್ರವಾಹಬಾಧಿತ ಪ್ರದೇಶಗಳಲ್ಲಿ ಸಂತ್ರಸ್ತರು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದರು.

ಭರವಸೆ ಮೇರೆಗೆ: ‘ಫಲಿತಾಂಶ ಬಂದ ನಂತರ ಪರಿಹಾರ ಕೊಡಲಾಗುವುದು’ ಎಂಬ ಭರವಸೆ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ಕೈಬಿಟ್ಟದ್ದೇವೆ ಎಂದು ಸಂತ್ರಸ್ತರು ತಿಳಿಸಿದರು. ನೆರೆಬಾಧಿತ ಪ್ರದೇಶಗಳಲ್ಲಿ ನಿರೀಕ್ಷೆಗೂ ಮೀರಿ ಮತದಾನ ನಡೆದಿದೆ! ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಅವರು ಉತ್ಸಾಹದಿಂದ ಮತ ಚಲಾಯಿಸಿದರು. ತೋಟಪಟ್ಟಿಗಳು ಹಾಗೂ ಮತಗಟ್ಟೆಯಿಂದ ದೂರದಲ್ಲಿರುವವರಿಗೆ ರಾಜಕೀಯ ಪಕ್ಷದವರು ವಾಹನಗಳ ವ್ಯವಸ್ಥೆ ಮಾಡಿಕೊಟ್ಟಿದ್ದುದು ಸಾಮಾನ್ಯವಾಗಿತ್ತು. ನೆರೆ ಬಂದಾಗ ಸಂಪೂರ್ಣ ಮುಳುಗಿದ್ದ ಶಾಲೆ, ಕಾಲೇಜುಗಳು ಮತಗಟ್ಟೆಗಳಾಗಿ ಕಾರ್ಯನಿರ್ವಹಿಸಿದವು.

ಕೃಷ್ಣಾ ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿದ್ದ ನಾಗನೂರು ಪಿ.ಕೆ. ಗ್ರಾಮದ ಸಂತ್ರಸ್ತ 20 ಕುಟುಂಬಗಳು ಮೂರು ತಿಂಗಳಿಂದಲೂ ರಡ್ಡೇರಹಟ್ಟಿ ಗ್ರಾಮದಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ.

‘ಮತ ನೀಡುವಂತೆ ಯಾವುದೇ ಪಕ್ಷದ ಅಭ್ಯರ್ಥಿಗಳೂ ನಮ್ಮ ಬಳಿ ಬಂದಿಲ್ಲ. ಪರಿಹಾರ ಸಿಕ್ಕಿಲ್ಲದಿರುವ ಬಗ್ಗೆ ನಾವು ಪ್ರಶ್ನಿಸುತ್ತೇವೆ ಎಂದು ಯಾರೂ ನಮ್ಮ ಬಳಿ ಬಂದಿಲ್ಲ ಎನಿಸುತ್ತದೆ. ತಾತ್ಕಾಲಿಕವಾಗಿ ₹ 10ಸಾವಿರ ಪರಿಹಾರ, ಪಡಿತರ ಕಿಟ್‌ ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಪರಿಹಾರ ಸಿಕ್ಕಿಲ್ಲ. ಊರಿನಲ್ಲಿರುವ (ನಾಗನೂರು ಪಿ.ಕೆ.) ಮನೆ ಬಿದ್ದು ಹೋಗಿವೆ. ಅವುಗಳ ದುರಸ್ತಿಗೆ ಹಣ ಬಂದಿಲ್ಲ. ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುತ್ತಾರಂತೆ. ನಂತರ ಪರಿಹಾರ ಕೊಡುತ್ತಾರಂತೆ. ಇನ್ನೂ ಅದೆಷ್ಟು ತಿಂಗಳುಗಳವರೆಗೆ ಇಲ್ಲಿರಬೇಕೋ ಗೊತ್ತಾಗುತ್ತಿಲ್ಲ’ ಎಂದು ಸಂತ್ರಸ್ತರಾದ ಆನಂದ ಕಾಂಬಳೆ, ರಮೇಶ ಕಾಂಬಳೆ ತಿಳಿಸಿದರು.

‘ಮಕ್ಕಳು ಏಳು ಕಿ.ಮೀ. ದೂರದಲ್ಲಿರುವ ನಾಗನೂರಿನ ಶಾಲೆಗೆ ಬಸ್‌ನಲ್ಲಿ ಹೋಗುತ್ತಾರೆ. ಅವರಿಗೆ ಹಣ ಹೊಂದಿಸುವುದು ಸಾಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಪರಿಹಾರ ಕಲ್ಪಿಸಿ ನೆರವಾಗಬೇಕು’ ಎಂದು ಕೋರಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು