ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮೇವು ಬ್ಯಾಂಕ್‌, ಗೋಶಾಲೆಗೆ ರೈತರ ಬೇಡಿಕೆ

Published 4 ಮಾರ್ಚ್ 2024, 4:48 IST
Last Updated 4 ಮಾರ್ಚ್ 2024, 4:48 IST
ಅಕ್ಷರ ಗಾತ್ರ

ಬೆಳಗಾವಿ: 'ಜಿಲ್ಲೆಯ ಎಲ್ಲ 15 ತಾಲ್ಲೂಕುಗಳಲ್ಲಿ ಈಗ ಬರದ ಛಾಯೆ ಆವರಿಸಿದೆ. ಬೇಸಿಗೆ ಆರಂಭದಲ್ಲೇ ಬಿಸಿಲಿನ ಕಾವು ಏರುತ್ತಲೇ ಇದೆ. ‘ಸದ್ಯ ಮೂರು ತಿಂಗಳಿಗಾಗುವಷ್ಟು ಮೇವು ದಾಸ್ತಾನಿದೆ. ರೈತರು ಆತಂಕಪಡಬೇಕಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಮಹಾರಾಷ್ಟ್ರದ ಗೌಳಿ ಹಾಗೂ ರೈತ ಸಮುದಾಯದವರು ಜಿಲ್ಲೆಯಿಂದ ಹೆಚ್ಚಿನ ಮೇವು ಖರೀದಿಸುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ಕೊರತೆ ಆಗಬುದು ಎಂಬುದು ರೈತರ ಆತಂಕ.

ಈ ವರ್ಷ ಸಕಾಲದಲ್ಲಿ ಮುಂಗಾರು ಮಳೆ ಕೈಹಿಡಿಯದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಲಿದೆ. ಆಗ ಜಾನುವಾರುಗಳಿಗೆ ಎದುರಾಗುವ ಸಮಸ್ಯೆ ತಪ್ಪಿಸಲು, ಜಿಲ್ಲೆಯಲ್ಲಿ 66 ಮೇವು ಬ್ಯಾಂಕ್‌ಗಳ ಸ್ಥಾಪನೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸ್ಥಳ ಗುರುತಿಸಿದೆ. ಈ ಪೈಕಿ 23 ಬ್ಯಾಂಕ್‌ ಅಥಣಿ, ಕಾಗವಾಡ ತಾಲ್ಲೂಕುಗಳಲ್ಲೇ ಸ್ಥಾಪನೆಯಾಗಲಿವೆ.

ನಾಲ್ಕೈದು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿರಲಿಲ್ಲ. ಮೇವಿನ ಸಂಕಷ್ಟವೂ ಅಷ್ಟಾಗಿ ಬಾಧಿಸಿರಲಿಲ್ಲ. ಪ್ರಸಕ್ತ ವರ್ಷ ಮುಂಗಾರು ಕೈಕೊಟ್ಟ ಕಾರಣ, ಸಪ್ತನದಿಗಳು ಹರಿಯುವ ಜಿಲ್ಲೆಯಲ್ಲೂ ಬರದ ಕಾರ್ಮೋಡ ಕವಿದಿದೆ.

ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಮತ್ತಿತರ ತಾಲ್ಲೂಕುಗಳಲ್ಲಿ ಈಗ ಕಬ್ಬಿನ ಕಟಾವು ಪ್ರಕ್ರಿಯೆ ನಡೆದಿದೆ. ಕೆಲವೆಡೆ ಜೋಳದ ರಾಶಿಯೂ ನಡೆಯುತ್ತಿದೆ. ಸದ್ಯಕ್ಕೆ ಮೇವಿನ ಕೊರತೆ ಗಂಭೀರವಾಗಿಲ್ಲ. ಆದರೆ, ಮೇ ಮತ್ತು ಜೂನ್‌ನಲ್ಲಿ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ.

ಮುನ್ನೆಚ್ಚರಿಕೆ ಕ್ರಮ: ‘ಜಿಲ್ಲೆಯಲ್ಲಿ 13.92 ಲಕ್ಷ ಜಾನುವಾರುಗಳಿವೆ. ಅವುಗಳಿಗೆ ಮೂರ್ನಾಲ್ಕು ತಿಂಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಆದರೆ, ಮುಂದೆ ಸಮಸ್ಯೆಯಾಗಬಾರದೆಂದು 66 ಮೇವು ಬ್ಯಾಂಕ್‌ ಸ್ಥಾಪಿಸುತ್ತಿದ್ದೇವೆ. ಇದಕ್ಕಾಗಿ ಸ್ಥಳ ಗುರುತಿಸಿದ್ದು, ಮೇವು ಸರಬರಾಜು ಮಾಡಲು ಟೆಂಡರ್‌ ಕರೆದಿದ್ದೇವೆ. ಇ–ಪ್ರೊಕ್ಯೂರ್‌ಮೆಂಟ್‌ ಮೂಲಕ ಮೇವು ಖರೀದಿಸಿ, ಪ್ರತಿ ಕೆ.ಜಿಗೆ ₹2 ದರದಲ್ಲಿ ರೈತರಿಗೆ ಪೂರೈಸಲಿದ್ದೇವೆ’ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ರಾಜೀವ್‌ ಕೊಲೇರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲಿಯೂ ಮೇವಿನ ಸಮಸ್ಯೆಯೇ ಇಲ್ಲ’ ಎಂದು ಹೇಳುತ್ತಿರುವ ಅಧಿಕಾರಿಗಳಿಗೆ ವಾಸ್ತವ ಪರಿಸ್ಥಿತಿಯೇ ಗೊತ್ತಿಲ್ಲ. ಕಬ್ಬಿನ ಕಟಾವು ಮುಗಿದರೆ, ಚಿಕ್ಕೋಡಿಯಲ್ಲಿ ಇದೇ ತಿಂಗಳು ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡಲಿದೆ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ಒಣಮೇವು ಸಿಗುತ್ತಲಿದೆ. ಆದರೆ, ಹಸಿಮೇವಿನ ಕೊರತೆ ರೈತರನ್ನು ಕಾಡುತ್ತಿದೆ. ಇದರಿಂದಾಗಿ ಹಾಲಿನ ಉತ್ಪಾದನೆ ಪ್ರಮಾಣವೂ ಇಳಿಕೆಯಾಗಲಿದೆ.

ನೆರೆಯ ತಾಲ್ಲೂಕು ಅವಲಂಬನೆ:

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ರೈತರು ಮೇವಿಗಾಗಿ ನೆರೆಯ ತಾಲ್ಲೂಕುಗಳನ್ನು ಅವಲಂಬಿಸಿದ್ದಾರೆ. ಪಕ್ಕದ ಖಾನಾಪುರ ಮತ್ತು ಧಾರವಾಡ ತಾಲ್ಲೂಕಿಗೆ ಹೋಗಿ, ಟ್ರ್ಯಾಕ್ಟರ್‌ನಲ್ಲಿ ಮೇವು ಖರೀದಿಸಿಕೊಂಡು ಬರುತ್ತಿದ್ದಾರೆ. ಭತ್ತ, ಕಣಿಕೆ ಮೇವು ನೆರೆಯ ತಾಲ್ಲೂಕು ಆಶ್ರಯಿಸಿದ್ದೇವೆ ಎಂದು ರೈತರು ಹೇಳುತ್ತಾರೆ.

ಸವದತ್ತಿ ಹೋಬಳಿಯಲ್ಲಿ 27 ವಾರ, ಮುನವಳ್ಳಿಯಲ್ಲಿ 34 ವಾರ, ಮುರಗೋಡದಲ್ಲಿ 40 ವಾರ ಮತ್ತು ಯರಗಟ್ಟಿಯಲ್ಲಿ 40 ವಾರಕ್ಕೆ ಸಾಕಾಗುವಷ್ಟು ಮೇವು ಲಭ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಡಂಚಿನ ಖಾನಾಪುರ ತಾಲ್ಲೂಕಿನಲ್ಲಿ 26 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಭತ್ತದ ಹುಲ್ಲನ್ನೇ ಜಾನುವಾರುಗಳಿಗೆ ಆಹಾರವಾಗಿ ರೈತರು ನೀಡುತ್ತಿದ್ದಾರೆ. ಸದ್ಯಕ್ಕೆ ಅಲ್ಲಿ ಮೇವಿನ ಸಮಸ್ಯೆ ಕಾಡಿಲ್ಲ. ಅಥಣಿ, ಕಾಗವಾಡದಲ್ಲಿ ಸದ್ಯಕ್ಕೆ ಮೇವು ಲಭ್ಯವಿದ್ದರೂ, ಮುಂದಿನ ಪರಿಸ್ಥಿತಿ ತ್ರಾಸದಾಯಕವಾಗಿದೆ.

ರಾಮದುರ್ಗ ತಾಲ್ಲೂಕಿನ ಸುರೇಬಾನ ಭಾಗದಲ್ಲಿ ಕೃಷಿಕರು ಮುಖ್ಯಬೆಳೆಯಾಗಿ ಕಬ್ಬು ಬೆಳೆದಿದ್ದಾರೆ. ಅಲ್ಲಿನ ಸಮಸ್ಯೆ ಕಂಡುಬಂದಿಲ್ಲ. ಆದರೆ, ಮಳೆಯಾಶ್ರಿತ ಭೂಮಿಗಳಲ್ಲೇ ರೈತರು ಹೆಚ್ಚಾಗಿ ಹೊಂದಿರುವ ಹುಲಕುಂದ ಭಾಗದಲ್ಲಿ ಮೇವಿನ ಸಮಸ್ಯೆ ಕಂಡುಬರುತ್ತಿದೆ.

ಯಾರು ಏನಂದರು?

ಈಗ ಮೇವಿನ ಲಭ್ಯತೆ ಇರಬಹುದು. ಆದರೆ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ಮುಂಜಾಗತ್ರಾ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ– ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

ಜಿಲ್ಲೆಯ ಕೆಲವೆಡೆ ಹೊರರಾಜ್ಯದವರೂ ಮೇವು ಖರೀದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೊರತೆ ಉ‌ಂಟಾಗದಂತೆ ಅಧಿಕಾರಿಗಳು ಮುಂಚಿತವಾಗಿ ಮೇವು ಖರೀದಿಸಿ ದಾಸ್ತಾನು ಇಟ್ಟುಕೊಳ್ಳಬೇಕು – ಮಹಾಂತೇಶ ಕೌಜಲಗಿ ಶಾಸಕ

ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಕಳುಹಿಸುವ ಮುನ್ನ ಸರ್ಕಾರ ಬೇಡಿಕೆಯಂತೆ ಮೇವು ವಿತರಿಸಬೇಕು. ಬೇಡಿಕೆ ಇರುವೆಡೆ ಗೋಶಾಲೆ ತೆರೆಯಲು ಕ್ರಮ ವಹಿಸಬೇಕು – ಮುರುಗೇಶ ಗುಂಡ್ಲೂರ ರೈತ ಬೈಲಹೊಂಗಲ

ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಮೇವಿನ ಸಮಸ್ಯೆ ಹೆಚ್ಚಾಗಿದೆ. ಶೀಘ್ರ ಗೋಶಾಲೆ ತೆರೆಯಬೇಕು – ಟಿ.ಎಸ್.ಮೋರೆ ಜಿಲ್ಲಾ ಘಟಕದ ಅಧ್ಯಕ್ಷ ಕೃಷಿಕ ಸಮಾಜ ಬೆಳಗಾವಿ

ಅಥಣಿ ತಾಲ್ಲೂಕಿನ ಮೇವಿನ ಸಮಸ್ಯೆ ಇನ್ನೂ ಗಂಭೀರತೆ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಬೇಡಿಕೆಯಷ್ಟು ಮೇವು ಪೂರೈಸದಿದ್ದರೆ ರೈತರಿಗೆ ತೊಂದರೆಯಾಗಲಿದೆ – ಭರಮಾ ನಾಯಿಕ ಚಿಕ್ಕೋಡಿ ಜಿಲ್ಲಾ ಘಟಕದ ಕಾರ್ಯದರ್ಶಿ ಭಾರತೀಯ ಕಿಸಾನ ಸಂಘದ

ಎಷ್ಟು ಮೇವು ಲಭ್ಯವಿದೆ? (ತಾಲ್ಲೂಕು;ಮೇವು(ಟನ್‌ಗಳಲ್ಲಿ))

ಅಥಣಿ;141296

ಕಾಗವಾಡ;50264

ಬೈಲಹೊಂಗಲ;74452

ಚನ್ನಮ್ಮನ ಕಿತ್ತೂರು;31233

ಬೆಳಗಾವಿ;156448

ಚಿಕ್ಕೋಡಿ;172438

ನಿಪ್ಪಾಣಿ;96167

ಗೋಕಾಕ:119703

ಮೂಡಲಗಿ;135979

ಹುಕ್ಕೇರಿ;153120

ಖಾನಾಪುರ;101308

ರಾಯಬಾಗ;167762

ರಾಮದುರ್ಗ;130695

ಸವದತ್ತಿ;88591

ಯರಗಟ್ಟಿ;42979

ಒಟ್ಟು:1662465

(ಪೂರಕ ಮಾಹಿತಿ: ಚಂದ್ರಶೇಖರ ಚಿನಕೇಕರ್‌, ಪ್ರದೀಪ ಮೇಲಿನಮನಿ, ಬಸವರಾಜ ಶಿರಸಂಗಿ, ಪರಶುರಾಮ ನಂದೇಶ್ವರ, ಚನ್ನಪ್ಪ ಮಾದರ, ರವಿಕುಮಾರ ಹುಲಕುಂದ, ಪ್ರಸನ್ನ ಕುಲಕರ್ಣಿ, ವಿಜಯಮಹಾಂತೇಶ ಅರಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT