ಬಸವಣ್ಣನ ಆರ್ಥಿಕ ಚಿಂತನೆಗಳು ಪ್ರಸ್ತುತ: ಪ್ರೊ.ಗುರಯ್ಯ ಮಠಪತಿ ಅಭಿಮತ

7

ಬಸವಣ್ಣನ ಆರ್ಥಿಕ ಚಿಂತನೆಗಳು ಪ್ರಸ್ತುತ: ಪ್ರೊ.ಗುರಯ್ಯ ಮಠಪತಿ ಅಭಿಮತ

Published:
Updated:
Prajavani

ಬೆಳಗಾವಿ: ಕಾಯಕ, ದಾಸೋಹ ಪರಿಕಲ್ಪನೆಗಳ ಮೂಲಕ ಮನುಕುಲಕ್ಕೆ ಬಹುಮೌಲಿಕ ಕೊಡುಗೆ ನೀಡಿದವರು ಬಸವಾದಿ ಶರಣರು. ಅವರ ಆರ್ಥಿಕ ಸಿದ್ಧಾಂತಗಳು ಇಂದಿಗೂ ದಾರಿದೀಪವಾಗಿವೆ ಹಾಗೂ ಪ್ರಸ್ತುತವಾಗಿವೆ ಎಂದು ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಗುರಯ್ಯ ಮಠಪತಿ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕ ಏರ್ಪಡಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಣ್ಣನ ವಿಸ್ತರಿಸಿದ ಕಾಯಕ-ದಾಸೋಹ ಸಿದ್ಧಾಂತಗಳು ಮನುಕುಲಕ್ಕೆ ಮುನ್ನಡಿ ಬರೆದವು. ಪ್ರತಿಯೊಬ್ಬ ವ್ಯಕ್ತಿಯು ದುಡಿಯಬೇಕು; ಗಳಿಸಿದ ಸಂಪತ್ತನ್ನು ಸಮಾಜಕ್ಕೂ ವಿನಿಯೋಗಿಸಬೇಕು. ಯಾರೂ ಮೇಲಲ್ಲ; ಕೀಳಲ್ಲ ಎಂಬ ಸಮತಾವಾದವನ್ನು ಅಭಿವ್ಯಕ್ತಿಪಡಿಸಿದರು. ಅಂತೆಯೇ 18ನೇ ಶತಮಾನದಲ್ಲಿ ಕಾರ್ಲ್‌ ಮಾರ್ಕ್ಸ್‌ ಕೂಡ ವರ್ಗ ತಾರತಮ್ಯಗಳನ್ನು ತೊಡೆದುಹಾಕಲು ಹೋರಾಡಿದರು. ಅವರ ಸಮತಾವಾದವು ಅಂದು ರಷ್ಯಾ ಮೊದಲಾದ ದೇಶಗಳಲ್ಲಿ ಕ್ರಾಂತಿಯನ್ನೇ ಉಂಟು ಮಾಡಿತು’ ಎಂದು ತಿಳಿಸಿದರು.

‘ಶರಣರು ಕಾರ್ಲ್‌ ಮಾರ್ಕ್ಸ್‌ ಪೂರ್ವದಲ್ಲಿಯೇ ಸಮಾಜ ಹಾಗೂ ಅರ್ಥ ವ್ಯವಸ್ಥೆ ಮೇಲೆ ಬೆಳಕು ಚೆಲ್ಲಿದ್ದನ್ನು ಅಲ್ಲಗಳೆಯುವಂತಿಲ್ಲ. ಸಮಾಜಮುಖಿಯಾದ ಅವರ ವಿಚಾರಗಳನ್ನು ಜಗತ್ತಿನಾದ್ಯಂತ ಮುಟ್ಟಿಸುವ ಕೆಲಸ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಸ್. ಪಾಟೀಲ, ‘18ನೇ ಶತಮಾನದಲ್ಲಿ ಆದ ಕೈಗಾರಿಕಾ, ಸಾಮಾಜಿಕ ಕ್ರಾಂತಿಗಳಿಗೂ ಮುನ್ನ ಕರ್ನಾಟಕದಲ್ಲಿ ನಮ್ಮ ಶರಣರು ಸಾಮಾಜಿಕ, ಧಾರ್ಮಿಕ ಕ್ರಾಂತಿ ಆರಂಭಿಸಿದರು. ಅವರ ವಿಚಾರಗಳು ಪ್ರಖರವಾಗಿದ್ದವು. ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಡುವ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದವು. ಅವರ ಸಾಮಾಜಿಕ ಸಮಾನತೆಯ ವಿಚಾರಗಳು ಇಂದಿಗೂ ಆದರ್ಶ ಹಾಗೂ ಅನುಕರಣೀಯವಾಗಿವೆ. ವೀರಶೈವ ಲಿಂಗಾಯತ ಸಮಾಜ ಅಂತಹ ಸಾಂಘಿಕ ವಿಚಾರಗಳನ್ನೇ ವ್ಯಕ್ತಪಡಿಸುತ್ತದೆ’ ಎಂದು ತಿಳಿಸಿದರು.

ಹಿರಿಯ ವೈದ್ಯ ಡಾ.ಎಚ್.ಬಿ. ರಾಜಶೇಖರ, ಕೆಎಲ್‌ಇ ಸಂಸ್ಥೆ ನಿವೃತ್ತ ಕಾರ್ಯದರ್ಶಿ ಡಾ.ಎಫ್.ವಿ. ಮಾನ್ವಿ, ರಾಜ್ಯ ಸರ್ಕಾರದ ರೈತ ಸಲಹಾ ಸಮಿತಿ ಸದಸ್ಯರಾದ ವೈ.ಎಚ್. ಪಾಟೀಲ, ರಕ್ತದಾನಿ ಸುನೀಲ ಕಿತ್ತೂರ ಅವರನ್ನು ಸತ್ಕರಿಸಲಾಯಿತು.

ಮುಖಂಡರಾದ ಸಿದ್ದನಗೌಡ ಪಾಟೀಲ, ಕಲ್ಯಾಣರಾವ ಮುಚಳಂಬಿ, ರತ್ನಪ್ರಭಾ ಬೆಲ್ಲದ, ವೀಣಾ ಚಿಣ್ಣನವರ, ಸುಜಾತಾ ಮನವಾಡೆ ಇದ್ದರು.

ಶಂಕರ ಚೊಣ್ಣದ ಪ್ರಾರ್ಥಿಸಿದರು. ಗುರುದೇವಿ ಹುಲೆಪ್ಪನವರಮಠ ಹಾಗೂ ಗೀತಾ ಗುಂಡಕಲ್ಲೆ ಪರಿಚಯಿಸಿದರು. ವಕೀಲ ವಿ.ಕೆ. ಪಾಟೀಲ ಸ್ವಾಗತಿಸಿದರು. ಮಹೇಶ ಗುರನಗೌಡರ ನಿರೂಪಿಸಿದರು. ಜ್ಯೋತಿ ಭಾವಿಕಟ್ಟಿ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !