ಮಂಗಳವಾರ, ನವೆಂಬರ್ 29, 2022
29 °C
ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ಕ್ರಾಸ್‌ ಬಳಿ ಘಟನೆ; ಲಾರಿ, ಕಾರ್‌, ಬೈಕ್‌ ಸರಣಿ ಅಪಘಾತ

ಬೆಳಗಾವಿ | ಸರಣಿ ಅಪಘಾತ: ಎಎಸ್‌ಐ ಕುಟುಂಬ ಸೇರಿ ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬೂದಿಗೊಪ್ಪ ಕ್ರಾಸ್‌ ಬಳಿ, ರಾಜ್ಯ ಹೆದ್ದಾರಿ ಮೇಲೆ ಭಾನುವಾರ ಮಧ್ಯಾಹ್ನ ಲಾರಿ, ಕಾರ್‌ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಎಎಸ್‌ಐ ಕುಟುಂಬದ ಇಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಕುಡಚಿ ಎಎಸ್ಐ ಪರಶುರಾಮ ಹಲಕಿ ಅವರ ಪತ್ನಿ ರುಕ್ಮಿಣಿ ಹಲಕಿ (48), ಪುತ್ರಿ ಅಕ್ಷತಾ (22) ಕಾರ್‌ ಚಾಲಕ ನಿಖಿಲ್ ಕದಂ (24) ಸ್ಥಳದಲ್ಲೇ ಸಾವನ್ನಪ್ಪಿದರು. ಹಣಮವ್ವ ಚಿಪ್ಪಲಕಟ್ಟಿ ಎನ್ನುವವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಎಎಸ್ಐ ಪರಶುರಾಮ ಅವರು ವಾಹನದಲ್ಲಿ ಇರಲಿಲ್ಲ. ಅವರ ಪತ್ನಿ, ಪುತ್ರಿ ಕಾರಿನಲ್ಲಿ ಯರಗಟ್ಟಿ ಕಡೆಗೆ ಹೊರಟಿದ್ದರು. ಇದೇ ವೇಳೆ ಯರಗಟ್ಟಿ ಕಡೆಯಿಂದ ಬೆಳಗಾವಿ ಮಾರ್ಗವಾಗಿ ಸಂಚರಿಸುತ್ತಿದ್ದ ಸಿಮೆಂಟ್‌ ತುಂಬಿದ್ದ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿತು. ಕಾರಿನ ಹಿಂದೆಯೇ ಹೊರಟಿದ್ದ ಬೈಕ್‌ ಸವಾರರಿಗೂ ಈ ವಾಹನಗಳು ಗುದ್ದಿದವು. ಅಪಘಾತದ ರಭಸಕ್ಕೆ ಕಾರ್‌, ಬೈಕ್‌ ಸಂಪೂರ್ಣ ನಜ್ಜುಗುಜ್ಜಾದವು.

ರುಕ್ಮಿಣಿ, ಅಕ್ಷತಾ ಹಾಗೂ ನಿಖಿಲ್‌ ಸ್ಥಳದಲ್ಲೇ ಕೊನೆಯುಸಿರೆಳೆದರು. ಬೈಕಿನಲ್ಲೂ ಮೂವರು ಸಂಚರಿಸುತ್ತಿದ್ದರು. ಅವರಲ್ಲಿ ಹಣಮವ್ವ ಎನ್ನುವ ವೃದ್ಧೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೈಕ್‌ ಸವಾರ ಹಾಗೂ ಹಿಂಬದಿಯಲ್ಲಿ ಕುಳತವರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ನಗರದ ಆಸ್ಪತ್ರೆಗೆ ಸಾಗಿಸಲಾಗಿದೆ.

ಲಾರಿ ಅಡಿಗೆ ಸಿಲುಕಿದ ಕಾರಿನಲ್ಲಿದ್ದ ದೇಹಗಳನ್ನು ತೆಗೆಯಲು ಸಾಕಷ್ಟು ಸಂಕಷ್ಟ ಪಡಬೇಕಾಯಿತು.

ಸಂಚಾರ ವ್ಯತ್ಯಯ: ಸರಣಿ ಅಪಘಾತದಿಂದಾಗಿ ಬಾಚಿ– ರಾಯಚೂರು ರಾಜ್ಯ ಹೆದ್ದಾರಿ ಸಂಚಾರ ಬಂದ್‌ ಆಯಿತು. ಎರಡು ತಾಸಿನ ನಂತರ ಪೊಲೀಸರು ವಾಹನಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಿದರು.

ಮುರಗೋಡ, ನೇಸರಗಿ, ಯರಗಟ್ಟಿ ಠಾಣೆಗಳ ಪೊಲೀಸರು ಕೂಡ ಸ್ಥಳಕ್ಕೆ ಬಂದರು. ಈ ಬಗ್ಗೆ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು