ಗುರುವಾರ , ಡಿಸೆಂಬರ್ 1, 2022
21 °C
378 ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ -ವಿಸರ್ಜನೆಗಾಗಿ 9 ಹೊಂಡಗಳೂ ಸಿದ್ಧ

ಶತಮಾನದ ಇತಿಹಾಸ ಹೊಂದಿರುವ ಗಣೇಶೋತ್ಸವಕ್ಕೆ ಕುಂದಾನಗರಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಳಗಾವಿ: ಶತಮಾನದ ಇತಿಹಾಸ ಹೊಂದಿರುವ ಗಣೇಶೋತ್ಸವಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ. ವಿಘ್ನ ನಿವಾರಕನನ್ನು ಬುಧವಾರ ಜನರು ಅದ್ದೂರಿಯಾಗಿ ಬರಮಾಡಿಕೊಳ್ಳಲಿದ್ದಾರೆ.

1905ರಿಂದ ಇಲ್ಲಿ ಪ್ರತಿವರ್ಷ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಕಳೆದ ಎರಡು ವರ್ಷ ‘ಚೌತಿ’ ಮೇಲೆ ಕೋವಿಡ್‌–19 ಬರೆ ಎಳೆದಿತ್ತು. ಈ ಬಾರಿ ಕೊರೊನಾ ಉಪಟಳ ಇಲ್ಲದೇ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ. ಸರ್ವಭಾಷಿಕರು ಮತ್ತು ಸರ್ವಧರ್ಮೀಯರು ಸಡಗರದಿಂದ ಗಣೇಶ ಚತುರ್ಥಿ ಆಚರಣೆಗೆ ತಯಾರಿ ನಡೆಸಿದ್ದಾರೆ.

378 ಕಡೆ ಸಾರ್ವಜನಿಕ ಗಣೇಶ:
ನಗರದ ವಿವಿಧ ಬಡಾವಣೆಗಳಲ್ಲಿ 378 ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ಕೆಲ ಮಂಡಳದವರು 10ರಿಂದ 12 ಅಡಿ ಎತ್ತರದ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ದೂರದ ಊರುಗಳಲ್ಲಿ ತಯಾರಿಸಿದ ಮೂರ್ತಿಗಳನ್ನು ಹಲವು ಮಂಡಳದವರು ಬೆಳಗಾವಿಗೆ ತಂದು, ಮಂಟಪದ ಸನಿಹದಲ್ಲಿ ಇರಿಸಿದ್ದಾರೆ. ಬುಧವಾರ ಮೆರವಣಿಗೆ ಮಾಡಿ, ವಿಶೇಷ ಪೂಜೆಯೊಂದಿಗೆ ಮಂಟಪದಲ್ಲಿ ಪ್ರತಿಷ್ಠಾಪಿಸಲಿದ್ದಾರೆ. ಸೆ.9ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಪ್ರಕ್ರಿಯೆ ನಡೆಯಲಿದೆ. 

ಮನೆಗಳಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ಕೆಲವರು ಒಂದೇ ದಿನಕ್ಕೆ ಮೂರ್ತಿ ವಿಸರ್ಜಿಸಿದರೆ, ಇನ್ನೂ ಕೆಲವರು 5, 7, 9 ಮತ್ತು 10ನೇ ದಿನಗಳಂದು ಮೂರ್ತಿ ವಿಸರ್ಜಿಸಲಿದ್ದಾರೆ. ಇಲ್ಲಿನ ಗಣೇಶೋತ್ಸವ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಮಾತ್ರವಲ್ಲದೆ, ಮಹಾರಾಷ್ಟ್ರ ಮತ್ತು ಗೋವಾದಿಂದಲೂ ಸಾವಿರಾರು ಜನರ ದಂಡೇ ಹರಿದುಬರಲಿದೆ.

ವೈವಿಧ್ಯಮಯ ಮಂಟಪ: ನಗರದ ವಿವಿಧ ಬಡಾವಣೆಗಳಲ್ಲಿ ಹಲವು ಮಂಡಳದವರು ವೈವಿಧ್ಯಮಯ ಮಂಟಪ ನಿರ್ಮಿಸಿದ್ದಾರೆ. ಅದರಲ್ಲೂ, ಟಿಳಕವಾಡಿಯ ಶುಕ್ರವಾರ ಪೇಟೆಯ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ ರೂಪಿಸಿರುವ ಒಡಿಶಾದ ಧಾತಾ ಮಂದಿರ ಮಾದರಿ ಮಂಟಪ ಕಣ್ಮನ ಸೆಳೆಯುತ್ತಿದೆ.

‘70 ಅಡಿ ಎತ್ತರ ಮತ್ತು 45 ಅಡಿ ಅಗಲದ ಮಂಟಪವನ್ನು ಮುಂಬೈನ ಕಲಾವಿದರು ನಿರ್ಮಿಸಿದ್ದಾರೆ. ಅಲ್ಲದೆ, ಸಾಯಿಬಾಬಾ ಜೀವನಗಾಥೆ ಸಾರುವ 12 ನಿಮಿಷಗಳ ಕೀಲಿಮಣಿ ಗೊಂಬೆಗಳ ಪ್ರದರ್ಶನ (ಟ್ರಿಕ್‌ ಷೋ) ಸಿದ್ಧಪಡಿಸುತ್ತಿದ್ದೇವೆ. ಗಣೇಶೋತ್ಸವದಲ್ಲಿ 10 ದಿನಗಳ ನಿತ್ಯವೂ ಅದನ್ನು ಪ್ರದರ್ಶಿಸಲಿದ್ದೇವೆ'  ಎನ್ನುತ್ತಾರೆ ಮಂಡಳದ ಸದಸ್ಯರಾದ ಜಾಕೀಸರ್‌ ಎಂ.

9 ಹೊಂಡಗಳ ವ್ಯವಸ್ಥೆ: ‘ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಹಳೇ ಕಪಿಲೇಶ್ವರ ಹೊಂಡ, ಹೊಸ ಕಪಿಲೇಶ್ವರ ಹೊಂಡ, ಜಕ್ಕೇರಿ ಹೊಂಡ ಸೇರಿ 9 ಹೊಂಡಗಳನ್ನು ಸಿದ್ಧಗೊಳಿಸಲಾಗಿದೆ. ಮೆರವಣಿಗೆ ಸಾಗುವ ಮಾರ್ಗದ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದೆ. ಜನಸಂದಣಿ ಇರುವ ಕಡೆ ಫೋಕಸ್‌ ಲೈಟ್‌ ಅಳವಡಿಸಲಾಗುತ್ತಿದೆ. ನಾಲ್ಕು ಸಂಚಾರ ಹೊಂಡಗಳನ್ನು ಸಿದ್ಧಪಡಿಸಿದ್ದು, ಆ ವಾಹನಗಳು ವಿವಿಧ ಬಡಾವಣೆಗಳಿಗೆ ಸಂಚರಿಸಲಿವೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ಬಾರಿ ಗಣೇಶೋತ್ಸವದಲ್ಲಿ ಕೆಲ ಮಂಡಳದವರು ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಿದ್ದಾರೆ' ಎಂದು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ ಉಪಾಧ್ಯಕ್ಷ ಸತೀಶ ಗೌರಗೊಂಡಾ ತಿಳಿಸಿದರು.

ಮಳೆಯಲ್ಲೂ ಖರೀದಿ ಭರಾಟೆ:
ಗಣೇಶೋತ್ಸವ ಅಂಗವಾಗಿ ಬೆಳಗಾವಿಯ ಮಾರುಕಟ್ಟೆಗೆ ಮಂಗಳವಾರ ಬೆಳಿಗ್ಗೆಯಿಂದ ಜನಸಾಗರವೇ ಹರಿದುಬಂದಿತ್ತು. ಗಣಪತ ಗಲ್ಲಿ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಖಡೇಬಜಾರ್‌ ಮತ್ತಿತರ ಪ್ರದೇಶಗಳಲ್ಲಿ ಜನರು ಗಣೇಶ ಮೂರ್ತಿ ಮಂಟಪಗಳು, ಆಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಗಳು ಹಾಗೂ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದರು.

ಮಾರುಕಟ್ಟೆ ಸಂಪರ್ಕಿಸುವ ಮಾರ್ಗದ ರಸ್ತೆಗಳಲ್ಲಿ ಸಂಚಾರ ಸಮಸ್ಯೆ ಹೆಚ್ಚಿತ್ತು. ಜನರ ನಿಯಂತ್ರಣಕ್ಕೆ ಪೊಲೀಸರು  ಹರಸಾಹಸ ಪಟ್ಟರು. ಮಳೆ ಮಧ್ಯೆಯೂ ಖರೀದಿ ಭರಾಟೆ ಜೋರಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು