ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗನೂರಿನ ಗೀತಾಗೆ ‘ಏಕಲವ್ಯ’ ಗರಿ

ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ತೋರಿದ ಗ್ರಾಮೀಣ ಪ್ರತಿಭೆ
Last Updated 4 ನವೆಂಬರ್ 2020, 14:17 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ನಾಗನೂರದ ಗೀತಾ ಕೆಂಚಪ್ಪ ದಾನಪ್ಪಗೋಳ ಜುಡೋ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆಗೆ 2018–19ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಕೊಡಮಾಡುವ ‘ಏಕಲವ್ಯ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಇದರೊಂದಿಗೆ ತಾಲ್ಲೂಕಿನಲ್ಲಿ ಕ್ರೀಡೆಯಲ್ಲಿ ರಾಜ್ಯ ಮಟ್ಟದ ಬಹುದೊಡ್ಡ ಪ್ರಶಸ್ತಿ ಪಡೆದ ಮೊದಲ ಯುವತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ₹2 ಲಕ್ಷ ಚೆಕ್‌, ಫಲಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.

ನಾಗನೂರದ ಅರಣ್ಯಸಿದ್ಧೇಶ್ವರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಕಲಿತಿರುವ ಗೀತಾಗೆ ಅಲ್ಲಿಯ ಶಿಕ್ಷಕ ಪರುಶರಾಮ ಎಸ್. ಹಂಚಾಟಿ ಕ್ರೀಡೆ ಬಗ್ಗೆ ಅಭಿರುಚಿ ಮೂಡಿಸಿದ್ದರು.

‘ಬೆಳೆಯವ ಸಿರಿ ಮೊಳಕೆ’ಯಲ್ಲಿ ಎನ್ನುವಂತೆ ಅವರಲ್ಲಿದ್ದ ಕ್ರೀಡಾ ಉತ್ಸಾಹ ಗಮನಿಸಿ ಬೆಳಗಾವಿಯ ಸರ್ಕಾರಿ ಕ್ರೀಡಾ ವಸತಿ ನಿಲಯಕ್ಕೆ ಪ್ರವೇಶ ದೊರಕಿಸಿಕೊಟ್ಟರು. ಅಲ್ಲಿನ ಕೋಚ್‌ ತ್ರೀವೇಣಿ ಹಾಗೂ ಜಿತೇಂದ್ರ ಸಿಂಗ್‌ ಅವರಿಂದ ಜುಡೋ ಪಟ್ಟುಗಳನ್ನು ಕಲಿಸಿದ್ದರು. ಅದನ್ನು ಕರಗತ ಮಾಡಿಕೊಂಡ ಗೀತಾ ಸಾಧನೆ ತೋರಿದ್ದಾರೆ.

ಶಾಲಾ ಹಂತದಿಂದ ಪದವಿವರೆಗೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಶಾಲೆಯಲ್ಲಿದ್ದಾಗ ರಾಜ್ಯ, ರಾಷ್ಟ್ರಮಟ್ಟದಿಂದ ಹಿಡಿದು ಸೀನಿಯರ್‌ ಕಾಮನ್‌ವೆಲ್ತ್‌ ಅಂತರರಾಷ್ಟ್ರೀಯ ಮಟ್ಟದವರೆಗೆ ಹೋಗಿದ್ದಾರೆ. ಬಂಗಾರ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡು ಗಮನನೆಳೆದಿದ್ದಾರೆ.

2009, 2011, 2012, 2015ರಲ್ಲಿ ರಾಷ್ಟ್ರಮಟ್ಟದ ಶಾಲಾ ಜುಡೋದಲ್ಲಿ ಚಿನ್ನದ ಪದಕ, 2016ರಲ್ಲಿ ಟರ್ಕಿಯಲ್ಲಿ ನಡೆದ ವಿಶ್ವ ಮಟ್ಟದ ಶಾಲಾ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ, 2018ರಲ್ಲಿ ಕಾಮನ್‌ವೆಲ್ತ್‌ ಜುಡೋ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, ಪದವಿಯಲ್ಲಿ ಅಂತರ ವಿ.ವಿ. ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 12 ವರ್ಷಗಳ ಸಾಧನೆಯನ್ನು ಸರ್ಕಾರ ಗುರುತಿಸಿದೆ.

‘ಸ್ಪರ್ಧೆಯಲ್ಲಿ ಗೀತಾ ಪ್ರದರ್ಶನ ಹಾಗೂ ಎದುರಾಳಿಯ ಮೇಲೆ ಮಾಡುವ ದಾಳಿಯು ಅಪೂರ್ವವಾಗಿದೆ’ ಎನ್ನುತ್ತಾರೆ ಅವರ ಕೋಚ್‌ ರವಿ.

‘ಹೈಸ್ಕೂಲ್‌ನಲ್ಲಿದ್ದಾಗ ಈ ಆಟ ಬಿಡಾಕ ನಿಂತಿದ್ದೆ. ತಾಯಿ ಬಿಡಬ್ಯಾಡ ಸಾಧನೆ ಮಾಡಿ ತೋರಿಸು ಎಂದಿದ್ದರು. ಈಗ ಏಕಲವ್ಯ ಪ್ರಶಸ್ತಿ ಬಂದಿದ್ದಕ್ಕ ಎಲ್ಲರಿಗೂ ಖುಷಿಯಾಗಿದೆ’ ಎಂದು ಗೀತಾ ‘ಪ್ರವಾವಾಣಿ‘ಯೊಂದಿಗೆ ಸಂತಸ ಹಂಚಿಕೊಂಡರು. ಮೂರು ವರ್ಷಗಳಿಂದ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಆರ್ಥಿಕವಾಗಿ ನೆವವಾಗಿ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ’ ಎಂದು ನೆನೆದರು.

ಕೆಎಲ್‌ಇ ಸಂಸ್ಥೆಯಲ್ಲಿ ಬಿ.ಎ. ಪದವಿ ಮುಗಿಸಿರುವ ಅವರು, ಕ್ರೀಡಾ ಕೋಟಾದಲ್ಲಿ ಸರ್ಕಾರಿ ನೌಕರಿ ಪಡೆದು, ಜುಡೋದಲ್ಲಿ ಮತ್ತಷ್ಟು ಸಾಧನೆಯ ಗುರಿ ಹೊಂದಿದ್ದಾರೆ. ಸಂಪರ್ಕಕ್ಕೆ ಮೊ: 93534 99575.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT