ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಚೇತರಿಕೆ: ನಿಟ್ಟುಸಿರು ಬಿಟ್ಟ ರೈತರು

Last Updated 7 ಜುಲೈ 2021, 19:30 IST
ಅಕ್ಷರ ಗಾತ್ರ

ಘಟಪ್ರಭಾ (ಬೆಳಗಾವಿ ಜಿಲ್ಲೆ): ಕೋವಿಡ್–19 ಹರಡುವಿಕೆ ನಿರ್ವಹಣೆಗಾಗಿ ಕೈಗೊಂಡ ಲಾಕ್‌ಡೌನ್ ಸಡಿಲಿಕೆ ನೀಡಲಾಗಿದೆ. ಇಲ್ಲಿಯ ಪ್ರಸಿದ್ಧ ತರಕಾರಿ ಮಾರುಕಟ್ಟೆ ಈಗಷ್ಟೆ ಚೇತರಿಸಿಕೊಳ್ಳುತ್ತಿದ್ದು, ಇದನ್ನೇ ನಂಬಿದ ಕೂಲಿ ಕಾರ್ಮಿಕರು ಮತ್ತು ರೈತರು ಹಾಗೂ ವರ್ತಕರು ನಿಟ್ಟುಸಿರು ಬಿಟ್ಟಿದ್ದಾರೆ.

ಸಮೀಪದ ಮಲ್ಲಾಪೂರ ಪಿ.ಜಿ.ಯಲ್ಲಿರುವ ತರಕಾರಿ ಮಾರುಕಟ್ಟೆಯಿಂದ ರಾಜ್ಯದ ಹಲವೆಡೆಗೆ ತರಕಾರಿ ರವಾನೆಯಾಗುತ್ತದೆ. ನೆರೆಯ ಮಹಾರಾಷ್ಟ್ರದ ಮುಂಬೈ, ಗೋವಾ ಕೂಡ ಇಲ್ಲಿನ ತರಕಾರಿಯನ್ನೇ ನಂಬಿವೆ. ಘಟಪ್ರಭೆಯ ಒಡಲಲ್ಲಿ ನೂರಾರು ಚಿಕ್ಕ ಪುಟ್ಟ ಹೊಲಗಳಲ್ಲಿ ಬೆಳೆದ ರೈತರು ವಿವಿಧ ತರಕಾರಿಗಳನ್ನು ಬೆಳೆದು ಈ ಮಾರುಕಟ್ಟೆಗೆ ತರುವುದು ಸಾಮಾನ್ಯ. ತಾಜಾ ತರಕಾರಿಗೆ ಹೆಸರುವಾಸಿಯಾಗಿದೆ. ವರ್ಷವೀಡಿ ಈ ಮಾರುಕಟ್ಟೆ ಹಸಿರಿನಿಂದ ಕಂಗೊಳಿಸುತ್ತದೆ; ಅಷ್ಟೊಂದು ತರಕಾರಿ ಇಲ್ಲಿ ದೊರೆಯುತ್ತದೆ.

ಪ್ರತಿ ದಿನ ನೂರಾರು ವಾಹನಗಳು ತರಕಾರಿ ಹೊತ್ತೊಯ್ಯುತ್ತವೆ. ಆದರೆ, ಮಹಾರಾಷ್ಟ್ರದಲ್ಲಿ ಕೋವಿಡ್ ಹರಡುವಿಕೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದಾಗಿ, ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯ್ತಿಯು ತರಕಾರಿ ವ್ಯಾಪಾರಿಗಳಿಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಿದೆ. ಈ ಕಟ್ಟುನಿಟ್ಟಿನ ಕ್ರಮದಿಂದ ಹೆಚ್ಚಿನ ಜನಜಂಗುಳಿ ತಪ್ಪಿದೆ. ಅಂತರ ಕಾಯ್ದುಕೊಳ್ಳವುಂತೆಯೂ ಸೂಚಿಸಲಾಗಿದೆ.

ಕೋವಿಡ್ ಹರಡುವಿಕೆ ಭೀತಿಗೊಳಗಾಗಿದ್ದ ರೈತರು ಬೆಳೆದ ತರಕಾರಿ ಮಾರಾಟವಾಗದೆ ಕೊಳೆತು ಅಪಾರ ಹಾನಿ ಅನುಭವಿಸಿದ್ದರು. ದಲಾಲರು, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡಿದ್ದರು. ಜನರು ತರಕಾರಿಗೆ ಅಧಿಕ ಹಣ ಕೊಟ್ಟು ಪಡೆಯಬೇಕಾಯಿತು. ತರಕಾರಿಗಾಗಿ ಪರದಾಡುವ ಸ್ಥಿತಿಯೂ ನಿರ್ಮಾಣವಾಗಿತ್ತು.

‘ಪ್ರವಾಹ, ಅತಿವೃಷ್ಟಿ, ಕೋವಿಡ್ ಲಾಕ್‌ಡೌನ್‌, ಬೆಲೆ ಏರಿಕೆ ಹೀಗೆ... ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿರುವ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಅವರ ಸಹಾಯಕ್ಕೆ ಬರಬೇಕು. ತರಕಾರಿ ಮಾರುಕಟ್ಟೆಗೆ ಅಗತ್ಯ ಸೌಲಭ್ಯಗಳನ್ನಾದರೂ ಒದಗಿಸಬೇಕು’ ಎಂದು ಗುಡಸ್‌ ಗ್ರಾಮದ ರೈತ ಅರುಣ ದೇಸಾಯಿ ಕೋರಿದರು.

‘ತರಕಾರಿ ಮಾರುಕಟ್ಟೆ ಸುಧಾರಣೆ ವಿಷಯದಲ್ಲಿ ಕೇವಲ ಆಶ್ವಾಸನೆಯಷ್ಟೆ ಸಿಕ್ಕಿದೆ. ಸಂಬಂಧಿಸಿದವರು ಕ್ರಮ ವಹಿಸಿಲ್ಲ’ ಎಂದು ಸಂಜಯ ಗುಂಡವಗೋಳ ಆರೋಪಿಸಿದರು.

‘ಪ್ರಸ್ತುತ ಕೋವಿಡ್ ಲಸಿಕಾ ಅಭಿಯಾನ ನಡೆದಿದೆ. ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿ ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT