ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ, ಮೂಡಲಗಿ: 10 ದಿನ ಲಾಕ್‌ಡೌನ್‌

ನಾಳೆಯಿಂದಲೇ ಜಾರಿ: ಉಸ್ತುವಾರಿ ಸಚಿವರ ಸಭೆಯಲ್ಲಿ ನಿರ್ಧಾರ
Last Updated 12 ಜುಲೈ 2020, 11:12 IST
ಅಕ್ಷರ ಗಾತ್ರ

ಗೋಕಾಕ: ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಜುಲೈ 14ರಂದು ರಾತ್ರಿ 8ರಿಂದ ಜುಲೈ 24ರವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲು ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವರ್ತಕರು ಹಾಗೂ ನಾಗರಿಕರ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದಕ್ಕೂ ಮುನ್ನ ಸಚಿವರು ಮಾತನಾಡಿ, ‘ಕೊರೊನಾ ವೈರಾಣು ಪಸರಿಸದಂತೆ ಮುಂಜಾಗ್ರತೆ ವಹಿಸುವುದು ಮಾತ್ರ ನಮ್ಮ ಮುಂದಿರುವ ದಾರಿಯಾಗಿದೆ. ಹೀಗಾಗಿ, ಕನಿಷ್ಠ 8-10 ದಿನಗಳ ಲಾಕ್‌ಡೌನ್‌ ಅನಿವಾರ್ಯವಾಗಿದೆ ಎಂಬುದು ತಜ್ಞರ ಸಲಹೆಯಾಗಿದೆ. ಅದನ್ನು ಯಥಾವತ್ ಜಾರಿಗೊಳಿಸುವ ಮೂಲಕ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಆದ್ದರಿಂದ ವರ್ತಕರು ಹಾಗೂ ನಾಗರಿಕರು ಈ ಸಭೆಯ ನಿರ್ಣಯದಂತೆ ನಡೆದುಕೊಳ್ಳುವುದು ಅತ್ಯವಶ್ಯ ಮತ್ತು ಅನಿವಾರ್ಯವಾಗಿದೆ’ ಎಂದರು.

‘ಜೀವ ಇದ್ದರೆ ಮಾತ್ರ ಜೀವನ. ಹೀಗಾಗಿ, ಕೊರೊನಾ ಸೋಂಕು ನಿವಾರಿಸಲು ಅನಿವಾರ್ಯವಾಗಿ ಲಾಕ್ ಡೌನ್ ಘೋಷಿಸಬೇಕಾಗಿದೆ. ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಲಹೆ ಪಡೆಯಲಾಗಿದೆ. ಜನರು ಸಹಕರಿಸಬೇಕು. ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ಅಗತ್ಯವಿರುವ ಸಾಮಗ್ರಿಗಳು ದೊರೆಯಲಿವೆ. ಎಲ್ಲರೂ ಅಂತರ ಕಾಯ್ದುಕೊಳ್ಳಬೇಕು. ಕಾರಣವಿಲ್ಲದೆ ಯಾರೂ‌ ಮನೆಯಿಂದ ಹೊರಗೆ ಬರಬಾರದು. ಸೋಂಕು ಕಡಿಮೆ‌ ಮಾಡಲು ಇದೊಂದೇ ದಾರಿ. ಆದ್ದರಿಂದ ಸರ್ಕಾರದ ನಿರ್ಧಾರವನ್ನು ಪಾಲಿಸಬೇಕು’ ಎಂದು ಕೋರಿದರು.

ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಮಗದುಮ್, ‘ಲಾಕ್‌ಡೌನ್‌ ಅನುಷ್ಠಾನ ಕಟ್ಟುನಿಟ್ಟಿನಿಂದ ಕೂಡಿದ್ದರೆ ಮಾತ್ರ ಅದಕ್ಕೊಂದು ಅರ್ಥವಿದೆ. ಇಲ್ಲದಿದ್ದಲ್ಲಿ ಜನಸಾಮಾನ್ಯರ ಬೆಂಬಲವಿಲ್ಲದೆ ಗೋಳು ತಪ್ಪಿದ್ದಲ್ಲ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಕುಂಟು ನೆಪಗಳನ್ನು ಒಡ್ಡಿಕೊಂಡು ಬೀದಿಗಿಳಿಯುವುದನ್ನು ತಪ್ಪಿಸಬೇಕು’ ಎಂದು ಹೇಳಿದರು.

ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ‘ಬಂದ್ ವೇಳೆ ನಾಗರಿಕರ ಮನೆಗೆ ಜೀವನಾವಶ್ಯ ವಸ್ತುಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಜನರು ತಾಳ್ಮೆಯಿಂದ ವರ್ತಿಸಿದರೆ ಮಾತ್ರ ಲಾಕ್‌ಡೌನ್‌ ಉದ್ದೇಶ ಸಫಲವಾಗಲು ಸಾಧ್ಯ’ ಎಂದರು.

ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ, ಪ್ರಭಾರ ಡಿವೈಎಸ್ಪಿ ಮನೋಜಕುಮಾರ ನಾಯಿಕ ಮತ್ತು ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಹೆಗ್ಗನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT