ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಜಾನಪದ ವಿದ್ವಾಂಸನಿಗೆ ಗ್ರಂಥ ಅರ್ಪಣೆ

Last Updated 26 ಮಾರ್ಚ್ 2023, 8:43 IST
ಅಕ್ಷರ ಗಾತ್ರ

ಮೂಡಲಗಿ: ‘ಘಟಪ್ರಭೆ ಧಬಧಬೆಗೆ ಜೀವಜಲ ದಡಗುಟ್ಟಿ ಹರಿದಿರುವಂತೆ, ಭರವಸೆಯ ತೂಗು ಸೇತುವೆ ದಾಟಿ’ ಕವಿ ಚನ್ನವೀರ ಕಣವಿ ಅವರು ಗೋಕಾಕದ ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಅವರ ಕುರಿತು ಬರೆದಿರುವ ಸುನೀತದ ಸಾಲು ಇದು. ಈ ಸಾಲುಗಳಿಗೆ ಅರ್ಥ ಬರುವಂತೆ ಬಾಳಿದವರು ಈ ಸಾಹಿತಿ.

ಸಿ.ಕೆ. ನಾವಲಗಿ ಅವರು ಮೂರೂವರೆ ದಶಕಗಳ ಅಧ್ಯಯನ, ಪರಿಶ್ರಮದ ಮುಪ್ಪರಿಗೊಂಡ ಪರಿಪಕ್ವತೆಯ ವ್ಯಕ್ತಿತ್ವ. ಓದು, ಬರವಣಿಗೆ, ಅಧ್ಯಾಪನಗಳೊಂದಿಗೆ ಜಾನಪದ ಸಾಹಿತ್ಯದಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದಾರೆ.

‘ನನ್ನ ನಂತರ ನನ್ನ ರೀತಿಯಲ್ಲಿ ಆಲೋಚಿಸುವ ಗೋಕಾಕ ಪರಿಸರದ ಏಕೈಕ ವ್ಯಕ್ತಿ ಸಿ.ಕೆ. ನಾವಲಗಿ’ ಎಂದು ಚಂದ್ರಶೇಖರ ಕಂಬಾರ ಅವರ ಹೇಳಿಕೆ ಅನ್ವರ್ಥ.

ಚನ್ನಬಸಪ್ಪ ಕಲ್ಲಪ್ಪ ನಾವಲಗಿ ಕಿತ್ತೂರು ತಾಲ್ಲೂಕು ಬಸರಕೋಡದಲ್ಲಿ ಹುಟ್ಟಿದವರು. ಅಪ್ಪ ಕಲ್ಲಪ್ಪ, ಅವ್ವ ಬಸಲಿಂಗವ್ವ ಅವರು ಹೇಳುತ್ತಿದ್ದ ತ್ರಿಪದಿ, ಜಾನಪದ ಕತೆಗಳಿಂದ ಚನ್ನಬಸಪ್ಪ ದೇಸೀಯತೆಗೆ ಪ್ರಭಾವಿತರಾಗಿದ್ದರು.

1985ರಲ್ಲಿ ಗೋಕಾಕದ ಜೆಎಸ್ಎಸ್ ಪದವಿ ಕಾಲೇಜುದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿ, ಕೆಲವು ವರ್ಷ ಪ್ರಾಚಾರ್ಯರಾಗಿ 2016ರಲ್ಲಿ ನಿವೃತ್ತರಾಗಿದ್ದಾರೆ.

ಜಾನಪದ, ವಚನಸಾಹಿತ್ಯ, ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ಸಂಪಾದನೆ ಹೀಗೆ 60ಕ್ಕೂ ಅಧಿಕ ಮೌಲಿಕ ಗ್ರಂಥಗಳನ್ನು ಬರೆದಿದ್ದಾರೆ. ‘ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು- ಒಂದು ಅಧ್ಯಯನ’ ವಚನ ಸಾಹಿತ್ಯವನ್ನು ಜಾನಪದ ಹಿನ್ನೆಲೆಯಲ್ಲಿ ಉನ್ನತ ಸಂಶೋಧನೆಗೆ ಒಳಪಡಿಸಿದ ಮೊದಲ ಪಿಎಚ್.ಡಿ. ಗ್ರಂಥ’ ಎಂದು ಸಂಶೋಧಕ ವೀರಣ್ಣ ರಾಜೂರ ಅವರ ಮನದಾದಳ ಅನಿಸಿಕೆ.

ಗ್ರಾಮೀಣ ಗ್ರಹಿಕೆ, ಜಾನಪದ ಚಿಂತನ, ಜಾನಪದ ಸಮಾಲೋಕ, ಜಾನಪದ ಕಥಾಲೋಕ ಸಂಚಯ, ಜಾನಪದ ಸಡಗರ ಹೀಗೆ ಜಾನಪದ ಕುರಿತಾದ ಹಲವಾರು ಕೃತಿಗಳಲ್ಲಿ ಇಡೀ ಜಾನಪದ ಲೋಕ ಅನಾವರಣಗೊಂಡಿದೆ. ಉತ್ತರ ಕರ್ನಾಟಕದ ಅನೇಕ ಜಾನಪದ ಸಂಗತಿಗಳನ್ನು ಸಿಕೆಎನ್ ತಮ್ಮ ಬರಹಗಳ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಜಾನಪದ ಸಿರಿ, ಜಾನಪದ ವಿದ್ವತ್ ಗೌರವ, ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ.ಬಿ.ಎಸ್. ಗದ್ದಗಿಮಠ ಜಾನಪದ ತಜ್ಞ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸಿಕೆಎನ್ ಅವರನ್ನು ಅರಿಸಿ ಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT