ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ 20 ಸಾವಿರ ವಸತಿ ಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ: ಆರಗ

ಕೆಎಸ್ಆರ್‌ಪಿ 4ನೇ ತಂಡದ ನಿರ್ಗಮನ ಪಥಸಂಚಲನದಲ್ಲಿ ಆರಗ
Last Updated 12 ಏಪ್ರಿಲ್ 2022, 13:23 IST
ಅಕ್ಷರ ಗಾತ್ರ

ಬೆಳಗಾವಿ: ‘ಪೊಲೀಸ್ ಇಲಾಖೆ ರಾಜ್ಯದಲ್ಲಿ ಉತ್ತಮ ಸೇವೆ ಒದಗಿಸುತ್ತಿದೆ. ಸಿಬ್ಬಂದಿಯು ನೆಮ್ಮದಿಯಿಂದ ಜೀವನ ನಡೆಸುವಂತಾಗಲೆಂದು 20 ಸಾವಿರ ವಸತಿಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ 10ಸಾವಿರ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತಾಲ್ಲೂಕಿನ ಮಚ್ಚೆಯಲ್ಲಿರುವ ಕೆಎಸ್‌ಆರ್‌ಪಿ 2ನೇ ಪಡೆಯ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಕೆಎಸ್ಆರ್‌ಪಿ ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ (216 ಮಂದಿ) 4ನೇ ತಂಡದ ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಸಮಯದಲ್ಲಿ, ಭಾರತೀಯರಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಾಮರ್ಥ್ಯವಿಲ್ಲ ಎಂದು ಹೇಳಿದ್ದರು. ಪ್ರಸ್ತುತ ನಮ್ಮ ದೇಶದಲ್ಲಿ ಪೊಲೀಸ್ ಪಡೆ ಶಿಸ್ತು, ಪ್ರಾಮಾಣಿಕತೆಯಿಂದ ಶಾಂತಿ ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುತ್ತಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ. ಚುನಾವಣೆ ವೇಳೆ ಸೇರಿದಂತೆ ಎಲ್ಲ ಸಮಯದಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆಯು ಶೌರ್ಯ, ಸಾಹಸ, ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ಆಂತರಿಕ ಭದ್ರತೆ ಕಾಪಾಡಲು:

‘ಕೆಲವು ಸಮಾಜಘಾತಕರು ವಿದೇಶಿ ಏಜೆಂಟರ ಜೊತೆಗೆ ಕೈಜೋಡಿಸಿ ಆಂತರಿಕ ಶಾಂತಿ ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಂಥವರನ್ನು ಎದುರಿಸಿ ಆಂತರಿಕ ಭದ್ರತೆ ಕಾಪಾಡಲು ಇಲಾಖೆ ಗಟ್ಟಿಯಾಗಿ ನಿಂತಿದೆ’ ಎಂದು ತಿಳಿಸಿದರು.

‘ಒಂದೂವರೆ ವರ್ಷದಿಂದ ಪೊಲೀಸ್ ಠಾಣೆಗಳ ಉನ್ನತಿಗೆ ಕ್ರಮ ಕೈಗೊಳ್ಳಲಾಗಿದೆ. ₹ 200 ಕೋಟಿ ಮೀಸಲಿಟ್ಟು 100 ಪೊಲೀಸ್ ಠಾಣೆಗಳನ್ನು ಉನ್ನತ ದರ್ಜೆಯಲ್ಲಿ ನಿರ್ಮಾಣ ಮಾಡಲಾಗಿದೆ’ ಎಂದರು.

‘ರಾಜ್ಯದಲ್ಲಿ 950 ಎಸ್‌ಐ ಹುದ್ದೆಗಳು ಖಾಲಿ ಇವೆ. ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಮಾಡಲಾಗುವುದು. ಪ್ರತಿ ವರ್ಷ 4ಸಾವಿರ ಪೊಲೀಸ್ ನೇಮಕಾತಿ ಮಾಡಲಾಗುತ್ತಿದೆ. ಲಕ್ಷ ಸಿಬ್ಬಂದಿಯಲ್ಲಿ 35ಸಾವಿರ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.

ಕ್ರೀಡಾಪಟುಗಳಿಗೆ ಉತ್ತೇಜನ:

‘ಕ್ರಿಡಾಪಟುಗಳಿಗೆ ಉತ್ತೇಜನ ನೀಡಲು, ರಾಜ್ಯ ಮಟ್ಟದ ಕ್ರಿಡೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಶೇ 2ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ’ ಎಂದರು.

ಕೆಎಸ್‌ಆರ್‌ಪಿ ಎಡಿಜಿಪಿ ಆಲೋಕ್‌ಕುಮಾರ್, ‘ಹೊಸದಾಗಿ ಕೆಲಸಕ್ಕೆ ಸೇರಿದ ಸಿಬ್ಬಂದಿಗೆ ಉತ್ತಮ ತರಬೇತಿ ನೀಡಿದ್ದೇವೆ. ಪ್ರವಾಹ ಭೀತಿ ಸಮಯದಲ್ಲಿ ವಿಪತ್ತು ನಿರ್ವಹಣೆ ಸಮಿತಿ ಜೊತೆಗೆ ಸೇರಿ ತರಬೇತಿ ಕೊಡಲಾಗಿದೆ’ ಎಂದು ತಿಳಿಸಿದರು.

ತರಬೇತಿಯಲ್ಲಿ ಉತ್ತಮ ಪ್ರದರ್ಶನ ತೋರಿ ಹೆಚ್ಚು ಅಂಕ ಪಡೆದ ಪ್ರಶಿಕ್ಷಾರ್ಥಿಗಳಿಗೆ ಸಚಿವರು ಬಹುಮಾನ ವಿತರಿಸಿದರು.

ಹೆಚ್ಚುವರಿ ತರಬೇತಿ ಶಾಲೆ ಕೆ.ಎಸ್.ಆರ್.ಪಿ. 2ನೇ ಪಡೆಯ ಪ್ರಾಂಶುಪಾಲ ಹಂಜಾ ಹುಸೇನ್ ಪ್ರಶಿಕ್ಷಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವರದಿ ವಾಚಿಸಿದರು.

ಕೆಎಸ್ಆರ್‌ಪಿ ಪೊಲೀಸ್ ಮಹಾನಿರೀಕ್ಷಕ ರವಿ ಎಸ್., ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಎಸ್ಪಿ ಲಕ್ಷ್ಮಣ ನಿಂಬರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT