ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ | ಹಳ್ಳಿ ಮಕ್ಕಳಿಗೆ ಸರ್ಕಾರಿ ಶಾಲೆಯ ಜ್ಞಾನಸಿಂಚನ

ಸಸ್ಯ ಕಾಶಿ ಎನಿಸಿರುವ ಕೊಪದಟ್ಟಿ ಸರ್ಕಾರಿ ಶಾಲೆ; ಹಾಜರಾತಿಯಲ್ಲಿ ನೂರಕ್ಕೆ ನೂರು  
ಬಾಲಶೇಖರ ಬಂದಿ
Published 28 ಜನವರಿ 2024, 5:13 IST
Last Updated 28 ಜನವರಿ 2024, 5:13 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಕೊಪದಟ್ಟಿ ಸರ್ಕಾರಿ ಪ್ರೌಢಶಾಲೆಯ ಆವರಣ ಪ್ರವೇಶ ಮಾಡುತ್ತಿದ್ದಂತೆ ಎಲ್ಲಿ ನೋಡಿದರಲ್ಲಿ ಸಾಲು, ಸಾಲು ಗಿಡಗಳಿಂದ ಹಚ್ಚಹಸುರಿನಿಂದ ಕಣ್ಮನ ಸೆಳೆಯುತ್ತದೆ. ಸುಸಜ್ಜಿತವಾದ ಕಟ್ಟಡ, ಆವರಣದಲ್ಲಿ ಗ್ರಾಮ ಪಂಚಾಯ್ತಿಯವರು ವಿಶೇಷ ಅನುದಾನದಲ್ಲಿ ಪೇವರ್ಸ್ ಹಾಕಿಸಿದ್ದಾರೆ. ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, 4 ಸಾವಿರಕ್ಕೂ ಅಧಿಕ ಪುಸ್ತಕಗಳಿರುವ ಗ್ರಂಥಾಲಯವಿದೆ.

‘12 ಕೊಠಡಿಗಳ ಪೈಕಿ 3 ಕೊಠಡಿಗಳಲ್ಲಿ ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಎಲ್ಲ ವಿಷಯಗಳಲ್ಲಿ ಪಾಠ ಮಾಡುವ ವ್ಯವಸ್ಥೆ ಇದ್ದು, ಇದರಿಂದ ಮಕ್ಕಳು ವಿಷಯಗಳಲ್ಲಿ ಹೆಚ್ಚಿನ ಆಸಕ್ತಿವಹಿಸುತ್ತಿದ್ದಾರೆ’ ಎಂದು ಮುಖ್ಯಶಿಕ್ಷಕ ಬಿ.ಎಚ್. ಮೋರೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

5 ಎಕರೆಯಲ್ಲಿ ನಿರ್ಮಿಸಿರುವ ಶಾಲೆಯ ಆವರಣವು ವೈಶಿಷ್ಟ್ಯದಿಂದ ಕೂಡಿದೆ. ರಾಷ್ಟ್ರ ಪಕ್ಷಿ ನವಿಲು, ಹುಲಿ, ಕಮಲದ ಹೂವು, ರಾಷ್ಟ್ರ ಲಾಂಛನ ಇವೆಲ್ಲಗಳ ಪ್ರತಿರೂಪಗಳನ್ನು ಸಿಮೆಂಟ್‌ಗಳಲ್ಲಿ ನಿರ್ಮಿಸಿದ್ದಾರೆ. ಗ್ರಾಮದ ಶಿಕ್ಷಣ ಪ್ರೇಮಿಗಳು ಮತ್ತು ಶಿಕ್ಷಕರು ನೀಡಿದ ದೇಣಿಗೆಯಲ್ಲಿ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ವಿದ್ಯಾದೇವತೆ ಸರಸ್ವತಿ ಮಂದಿರವು ಶಾಲೆಗೆ ವಿಶೇಷ ಮೆರುಗು ನೀಡಿದೆ. ಶಾಲೆಯ ಆವರಣದ ರಕ್ಷಾ ಗೋಡೆಯ ತುಂಬೆಲ್ಲ ಚಿತ್ರಕಲಾ ಶಿಕ್ಷಕ ಬಿ.ಐ. ಬಡಿಗೇರ ಬಿಡಿಸಿರುವ ವಿಜ್ಞಾನ ವಿಷಯಾಧಾರಿತ ಪೇಟಿಂಗ್ಸ್ ಗಮನಸೆಳೆಯುತ್ತವೆ.

ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರ ವಿಶೇಷ ಪ್ರಯತ್ನದಿಂದ ಈ ಶಾಲೆಯು ಕೇಂದ್ರ ಸರ್ಕಾರದ ಅಟಲ್‌ ಟಿಂಕರಿಂಗ್ ಲ್ಯಾಬ್‌ (ಎಟಿಎಲ್‌) ಹೊಂದಿದೆ. 8 ಜನ ಶಿಕ್ಷಕರಿದ್ದು ಅವರಲ್ಲಿ ಇಬ್ಬರು ಎಂ.ಎಸ್‌ಸಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಹೀಗಾಗಿ ವಿಜ್ಞಾನ ವಿಷಯದಲ್ಲಿ ಮಕ್ಕಳಿಗೆ ಪ್ರಯೋಗಗಳ ಮೂಲಕ ಪರಿಣಾಮಕಾರಿಯಾಗಿ ಪಾಠ ಮಾಡುವುದು ಇಲ್ಲಿ ವಿಶೇಷ.

‘ಗ್ರಾಮೀಣ ಮಕ್ಕಳು ಪ್ರೌಢ ಶಿಕ್ಷಣದಿಂದ ವಂಚಿತರಾಗಬಾರದು ಎಂದು 2007ರಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಆಸಕ್ತಿ ವಹಿಸಿ ಸರ್ಕಾರದಿಂದ ಕೊಪದಟ್ಟಿಗೆ ಸರ್ಕಾರಿ ಪ್ರೌಢಶಾಲೆ ಅನುಮತಿ ಕೊಡಿಸಿ, ಕಟ್ಟಡ ನಿರ್ಮಾಣದ ಕೊರತೆ ಹಣವನ್ನು ತಾವೇ ಕೊಟ್ಟಿದ್ದಾರೆ. ಈಗ ಶಾಲೆಯನ್ನು ಕರ್ನಾಟಕ ಪಬ್ಲಿಲಿಕ್‌ ಶಾಲೆ ಸ್ಥಾನಮಾನಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಪ್ರತಿಕ್ರಿಯಿಸಿದರು.

ಔಷಧಿ ಸಸ್ಯಗಳು: ಶಾಲೆಯ ಆವರಣದಲ್ಲಿ ಪ್ರತಿ ಹೆಜ್ಜೆಗೊಂದರಂತೆ ಹೂವಿನ ಕುಂಡಲಿಗಳು ಇಟ್ಟಿದ್ದಾರೆ. 600ಕ್ಕೂ ಅಧಿಕ ಹೂವಿನ ಕುಂಡಲಿಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾಣಿಕೆ ರೂಪದಲ್ಲಿ ನೀಡಿದ್ದಾರೆ. 30ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ನೆಟ್ಟಿದ್ದಾರೆ.

‘ತೊಟ್ಟಿಯಲ್ಲಿ ಕಮಲದ ಹೂವು ಬೆಳೆಸಿದ್ದು, ನಿತ್ಯ ಕಮಲದ ಹೂವಿನ ಅರಳುವಿಕೆಯು ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸುತ್ತದೆ’ ಎನ್ನುತ್ತಾರೆ ಬಿ.ಎಚ್. ಮೋರೆ.

ನೂರಕ್ಕೆ ನೂರು ಹಾಜರಾತಿ: 8ರಿಂದ 10ನೇ ತರಗತಿಯವರೆಗೆ ಇರುವ ಶಾಲೆಯಲ್ಲಿ ಹಲವು ವರ್ಷಗಳಿಂದ 221 ಮಕ್ಕಳ ದಾಖಲಾತಿ ಇದೆ. ಹೊಲಪಟ್ಟಿಗಳಿಂದ ಬರುವ ಮಕ್ಕಳಿರುವ ಇಲ್ಲಿ ನಿತ್ಯ ನೂರಕ್ಕೆ ನೂರು ಹಾಜರಾತಿ ಇರುತ್ತದೆ. ಪ್ರತಿಭಾನ್ವೇಷನೆ ಪರೀಕ್ಷೆಯಾದ ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ಪ್ರತಿ ವರ್ಷ 3ರಿಂದ 4 ಮಕ್ಕಳು ಉತ್ತೀರ್ಣರಾಗಿ ಶಿಷ್ಯವೇತನಕ್ಕೆ ಅರ್ಹರಾಗುತ್ತಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನೂರಕ್ಕೆ ನೂರು ಫಲಿತಾಂಶವಿದೆ. 2021ರಲ್ಲಿ ಇದೇ ಶಾಲೆಯ ಅಶ್ವಿನಿ ಕರಿತಮ್ಮ ವಿದ್ಯಾರ್ಥಿನಿ 623 ಅಂಕ ಪಡೆದು ಮೂಡಲಗಿ ವಲಯಕ್ಕೆ ಪ್ರಥಮಳಾಗಿದ್ದು, 2022ರಲ್ಲಿ ಗಾಯತ್ರಿ ಛಾಯಪ್ಪಗೋಳ 623 ಅಂಕ ಪಡೆದು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಬರೆದಿದ್ದಾರೆ. ಪ್ರತಿ ನಿತ್ಯ ಬೆಳಿಗ್ಗೆ ಎಲ್ಲ ವಿಷಗಳ ವಿಶೇಷ ತರಗತಿ, ಸಂಜೆ ಗುಂಪು ಚರ್ಚೆ ಮಾಡಿಸಲಾಗುವುದು. ‘ಆಯಾ ವಿಷಯಗಳಲ್ಲಿ ಮೇಲಿಂದ ಮೇಲೆ ಪರೀಕ್ಷೆಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಬೆಳೆಸಲಾಗುತ್ತದೆ. ಪ್ರತಿ ನಿತ್ಯ ಮಗ್ಗಿಗಳ ಬಾಯಿಪಾಠ ಒಪ್ಪಿಸುವುದು, ಕನ್ನಡ ಮತ್ತು ಇಂಗ್ಲಿಷ್‌ ಶುದ್ಧ ಬರವಣಿಗೆ ರೂಢಿಸುವುದು ಇಲ್ಲಿ ವರ್ಷವಿಡೀ ನಡೆಯುತ್ತದೆ.

‘ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಿಂಗನಗೌಡ ಪಾಟೀಲ ಸೇರಿದಂತೆ ಗ್ರಾಮಸ್ಥರು ಶಾಲೆಯನ್ನು ದೇವಾಲಯದಂತೆ ಕಾಣುತ್ತಾರೆ. ಶಾಲೆಯ ಪ್ರಗತಿಗಾಗಿ ನಿರಂತರ ಸ್ಪಂದಿಸುತ್ತಾರೆ’ ಎನ್ನುತ್ತಾರೆ ಮೋರೆ ಅವರು. (ಸಂಪರ್ಕ ಮೊಬೈಲ್‌ ಫೋನ್‌ 9972078568).

ಮೂಡಲಗಿ ತಾಲ್ಲೂಕಿನ ಯಾದವಾಡದ ಕೊಪದಟ್ಟಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ಲಘು ವ್ಯಾಯಾಮ ಮಾಡುತ್ತಿರುವ ಚಿತ್ರ 
ಮೂಡಲಗಿ ತಾಲ್ಲೂಕಿನ ಯಾದವಾಡದ ಕೊಪದಟ್ಟಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ಲಘು ವ್ಯಾಯಾಮ ಮಾಡುತ್ತಿರುವ ಚಿತ್ರ 
ಬಿ.ಎಚ್. ಮೋರೆ 
ಬಿ.ಎಚ್. ಮೋರೆ 
ನಿಂಗನಗೌಡ ಪಾಟೀಲ ಎಸ್‌ಡಿಎಂಸಿ ಅಧ್ಯಕ್ಷರು
ನಿಂಗನಗೌಡ ಪಾಟೀಲ ಎಸ್‌ಡಿಎಂಸಿ ಅಧ್ಯಕ್ಷರು
ಕ್ರಿಯಾಶೀಲ ಶಿಕ್ಷಕರ ಜತೆ ಶೈಕ್ಷಣಿಕ ಗುಣಮಟ್ಟ ಶಿಸ್ತು ಮಾದರಿ ಚಟುವಟಿಕೆಗಳಿಂದ ಪಕ್ಕದ ಮುಧೋಳ ತಾಲ್ಲೂಕಿನ ಮಕ್ಕಳೂ ಈ ಶಾಲೆಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ
ನಿಂಗನಗೌಡ ಪಾಟೀಲ ಅಧ್ಯಕ್ಷ ಎಸ್‌ಡಿಎಂಸಿ

‘ಔಷಧಿ ಸಸ್ಯಗಳ ಕಣಜ’ ‘ಶುಂಠಿ ಗುಲಗಂಜಿ ಕಾಡುತುಳಸಿ ಜೀರಗಿ ಅಮೃತಬಳ್ಳಿ ದೊಡ್ಡ ಪತ್ರಿ ಕಾಡುಕರಿಬೇವು ತುಳಸಿ ಕರಿಮೆಣಸು ಹೀಗೆ 30ಕ್ಕೂ ಅಧಿಕ ಔಷಧಿಗಳ ಕಣಜ ಈ ಶಾಲೆಯಲ್ಲಿದೆ. ನಿತ್ಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೀರೂಣಿಸಿ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳಿಗೆ ಔಷಧಿ ಸಸ್ಯಗಳ ಅರಿವು ಮೂಡಿಸಲಾಗುತ್ತಿದೆ ಎಂದು ಮುಖ್ಯಶಿಕ್ಷಕ ಬಿ.ಎಚ್. ಮೋರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT