ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರವಾದ ಹುಟ್ಟು ಹಾಕಿದವರು ಕಾಂಗ್ರೆಸ್‌‌ನವರು: ಕಾರಜೋಳ

Last Updated 12 ಮಾರ್ಚ್ 2022, 13:04 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದಲ್ಲಿ ಉಗ್ರವಾದ ಹುಟ್ಟು ಹಾಕಿದವರೆ ಕಾಂಗ್ರೆಸ್‌‌ನವರು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಗಂಭೀರ ಆರೋಪ ಮಾಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಉಗ್ರರು ಹುಟ್ಟಿದ್ದು ಕಾಂಗ್ರೆಸ್‌ ಆಡಳಿತದಲ್ಲಿಯೇ. ಈಗ ಬೇರೆಯವರ ಆಡಳಿತ ಬಂದ ಮೇಲೆ ಉಗ್ರರು ಕಡಿಮೆಯಾಗಿದ್ದಾರೆ’ ಎಂದು ಹೇಳಿದರು.

‘ಕಾಂಗ್ರೆಸ್‌ನವರು ಸುಳ್ಳು ಹೇಳುವುದನ್ನೇ ಬಂಡವಾಳ ಮಾಡಿಕೊಂಡು ಬಂದಿದ್ದಾರೆ. ಸುಸಂಸ್ಕೃತ ಭಾಷೆಯಲ್ಲಿ ಮಾತನಾಡುವುದನ್ನು ಅವರು ಕಲಿತಿಲ್ಲ. ಕಾಂಗ್ರೆಸ್‌ನ ಭಂಡತನಕ್ಕೆ ಜನರು ಪಾಠ ಕಲಿಸಿದ್ದಾರೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಆ ಪಕ್ಷವನ್ನು ತಿರಸ್ಕರಿಸಿದ್ದಾರೆ’ ಎಂದರು.

‘ಅಲ್ಪಸಂಖ್ಯಾತರನ್ನು ಭಯದ ವಾತಾವರಣದಲ್ಲಿ ಇಟ್ಟವರು ಕಾಂಗ್ರೆಸ್‌ನವರು. ದೇಶದಲ್ಲಿ ಅರವತ್ತು ವರ್ಷ ಮುಗ್ಧ ಜನರಿಗೆ ಮೋಸ ಮಾಡಿದರು. ಇನ್ಮುಂದೆ ಕಾಂಗ್ರೆಸ್‌ನ ಮೋಸದಾಟ ನಡೆಯುವುದಿಲ್ಲ. ಆ ಪಕ್ಷ ಗುಜರಿ ಸೇರಿದೆ, ಮೂಲೆಗುಂಪಾಗಿದೆ’ ಎಂದು ಟೀಕಿಸಿದರು.

‘ಜಾತಿ, ಮತೀಯ ಮತ್ತು ಧರ್ಮದ ಭಾವನೆಗಳನ್ನು ಎತ್ತಿ ಕಟ್ಟುವುದು, ಬಡವರು ಬಡವರಾಗಿಯೇ ಇರಬೇಕು ಎಂದು ಬಯಸುವುದು, ಅಲ್ಪಸಂಖ್ಯಾತರು ಅವಿದ್ಯಾವಂತರಾಗಿಯೇ ಇರುವಂತೆ ಮಾಡುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ. ಆಗಷ್ಟೆ ತಮ್ಮ ಬೇಳೆ ಬೇಯುತ್ತದೆ ಎಂದುಕೊಂಡು ಕೆಟ್ಟ ಕೆಲಸ ಮಾಡಿಕೊಂಡು ಬಂದಿದ್ದಾರೆ. 403 ಸ್ಥಾನಗಳಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ಗೆ ಕೇವಲ ಎರಡು ಸೀಟು ಬರುತ್ತದೆ ಎಂದರೆ ಆ ಪಕ್ಷದವರಿಗೆ ನಾಚಿಕೆಯಾಗಬೇಕು’ ಎಂದು ವಾಗ್ದಾಳಿ ನಡೆಸಿದರು.

‘ಪಂಚರಾಜ್ಯಗಳ ಚುನಾವಣೆಯಲ್ಲಿ ಯುವಕರು ಜಾತಿ ಮುಖ್ಯವಲ್ಲ; ದೇಶ ಭಕ್ತಿ ಮುಖ್ಯವೆಂದು ತಿಳಿದು ಬಿಜೆಪಿ ಬೆಂಬಲಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಟು ಯಶಸ್ವಿಯಾದವರು ಪ್ರಧಾನಿ ನರೇಂದ್ರ ಮೋದಿ. ಅವರನ್ನು ಜನರು ಬೆಂಬಲಿಸಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಮಾಡುವುದು ಮುಖ್ಯಮಂತ್ರಿ ಪರಮಾಧಿಕಾರ. ರಾಷ್ಟ್ರೀಯ ನಾಯಕರು ರಾಜಕೀಯ ಲೆಕ್ಕಾಚಾರ ಮುಂದಿಟ್ಟುಕೊಂಡು ಯಾವ ರೀತಿ ಮಾಡಬೇಕು ಎನ್ನುವುದನ್ನು ನಿರ್ಣಯಿಸುತ್ತಾರೆ. ಇಲ್ಲಿ ಓಡಾಡುತ್ತಿರುವುದೆಲ್ಲವೂ ಗಾಳಿ ಸುದ್ದಿ’ ಎಂದು ಪ್ರತಿಕ್ರಿಯಿಸಿದರು.

‘ನಾಯಕತ್ವ ಬದಲಾವಣೆಯೂ ಗಾಳಿ ಸುದ್ದಿ. ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT