ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಬೆಳಗಾವಿ ನಗರದ 9 ಸ್ಥಳಗಳಲ್ಲಿ ’ಚತುರ ಕಂಬ’

ಬೆಳಗಾವಿ: 62 ಬಸ್‌ಗಳಿಗೆ ಜಿಪಿಎಸ್ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ನಗರದಲ್ಲಿ ಸಂಚರಿಸುವ 62 ಬಸ್‌ಗಳಲ್ಲಿ ಜಿಪಿಎಸ್ ಅಳವಡಿಸಲಾಗಿದೆ. ಇದರಿಂದಾಗಿ ಅವುಗಳ ಸಂಚಾರದ ಕುರಿತು ನಿಖರ ಮಾಹಿತಿ ಲಭಿಸಲಿದೆ’ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ತಿಳಿಸಿದರು.

ಇಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

‘10 ಬಸ್ ತಂಗುದಾಣ(ಶೆಲ್ಟರ್)ಗಳಲ್ಲಿ ಡಿಸ್‌ಪ್ಲೇ ಫಲಕ ಹಾಗೂ ಬಸ್ ವೇಳಾಪಟ್ಟಿ ಅಳವಡಿಸಲಾಗಿದೆ. 7 ಬಸ್ ತಂಗುದಾಣಗಳಲ್ಲಿ ವೈಫೈ ಸೌಲಭ್ಯ ಒದಗಿಸಲಾಗಿದೆ. ಸಿಟಿಜನ್ ಮೊಬೈಲ್‌ ಆ್ಯಪ್ ಮೂಲಕ ಕೂಡ 62 ಬಸ್‌ಗಳ ಸಂಚಾರದ (ಜಿಪಿಎಸ್ ಅಳವಡಿಸಿದ) ಬಗ್ಗೆ ಮಾಹಿತಿ ಪಡೆಯಬಹುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ತಂಗುದಾಣಗಳಲ್ಲೂ ಈ ಸೌಲಭ್ಯ ವಿಸ್ತರಿಸಲಾಗುವುದು’ ಎಂದರು.

‘ನಗರದ 9 ಸ್ಥಳಗಳಲ್ಲಿ ಇಂಟೆಲಿಜೆಂಟ್ ಪೋಲ್ (ಚತುರ ಕಂಬ) ಅಳವಡಿಸಲಾಗಿದೆ. ಇದರಲ್ಲಿ ಸಿಸಿಟಿವಿ ಕ್ಯಾಮೆರಾ, ವಾಯುಮಾಲಿನ್ಯ ಕುರಿತ ಮಾಹಿತಿ, ತುರ್ತು ಸಂದರ್ಭದಲ್ಲಿ ಅನುಕೂಲ ಆಗುವಂತೆ ಒತ್ತುವುದಕ್ಕಾಗಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಪೊಲೀಸ್, ಮಹಾನಗರ ಪಾಲಿಕೆ ಸೇರಿದಂತೆ ಸಂಬಂಧಿಸಿದ ಇಲಾಖೆಯ ತರಬೇತಿ ಪಡೆದ ಸಿಬ್ಬಂದಿ ನಿಯಂತ್ರಣ ಕೊಠಡಿಯಲ್ಲಿ ಇರುತ್ತಾರೆ. ಅವರು ಈ ವ್ಯವಸ್ಥೆ ನಿರ್ವಹಿಸುತ್ತಾರೆ. ಗಣ್ಯರ ಸಂಚಾರ, ಆಂಬುಲೆನ್ಸ್‌ ಇತರ ತುರ್ತು ಸಂದರ್ಭದಲ್ಲಿ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನೂ ಕಲ್ಪಿಸಬಹುದು’ ಎಂದು ಮಾಹಿತಿ ನೀಡಿದರು.

ನಗರದ ವಿವಿಧ ವೃತ್ತಗಳಲ್ಲಿ ಅಳವಡಿಸಲಾಗಿರುವ ಎಲ್.ಇ.ಡಿ. ಫಲಕಗಳ ಕಾರ್ಯನಿರ್ವಹಣೆ ಕುರಿತು ತಿಳಿಸಿದರು.

‘ಕ್ಲೋರಿನ್ ವಿಶ್ಲೇಷಣೆ, ಪಿ.ಎಚ್.‌ ಮೀಟರ್ ಅಳವಡಿಕೆ, ಬಲ್ಕ್ ಫ್ಲೋ ಮೀಟರ್ ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಗರದಲ್ಲಿ ನಿರಂತರ ನೀರು ಸರಬರಾಜು ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ ಬಳಸಬಹುದಾಗಿದೆ. ಸದ್ಯಕ್ಕೆ ಕೆಲವು ಮಾಹಿತಿಯನ್ನು ಕಮಾಂಡ್ ಕೇಂದ್ರದಿಂದ ನೀರು ಸರಬರಾಜು ಮಂಡಳಿ ಜೊತೆ ಹಂಚಿಕೊಳ್ಳಲಾಗುತ್ತಿದೆ. ಇದಲ್ಲದೇ ಘನತ್ಯಾಜ್ಯ ನಿರ್ವಹಣೆ, ಕಸ ವಿಲೇವಾರಿ ಮೇಲೆ ನಿಗಾ ವಹಿಸಲಾಗುತ್ತಿದೆ. ಕಸ ವಿಲೇವಾರಿ ವಾಹನಗಳಿಗೆ ಕೂಡ ಜಿಪಿಎಸ್ ಅಳವಡಿಸಿ ನಿಗಾ ವಹಿಸಲಾಗಿದೆ. ಕಸ ಎಸೆಯುವುದನ್ನು ತಡೆಯಲು ಇಪ್ಪತ್ತು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತದೆ’ ಎಂದು ವಿವರಿಸಿದರು.

‘ಆರು ತಿಂಗಳ ನಂತರ ಆರ್.ಎಫ್.ಐ.ಡಿ. ಟ್ಯಾಗ್‌ ವ್ಯವಸ್ಥೆ ನಿರ್ವಹಣೆಯನ್ನು ಪಾಲಿಕೆಗೆ ಹಸ್ತಾಂತರಿಸಲಾಗುತ್ತದೆ. ಆದ್ದರಿಂದ ಆರ್.ಎಫ್.ಐ.ಡಿ. ರೀಡರ್ ಬಳಕೆ ಹೆಚ್ಚಿಸಬೇಕು. ಆಂಬುಲೆನ್ಸ್‌ ಹಾಗೂ‌ ಅಗ್ನಿಶಾಮಕ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಕಮಾಂಡ್ ಅಂಡ್ ಕಂಟ್ರೋಲ್ ಕೇಂದ್ರದಿಂದಲೇ ನಿರ್ವಹಿಸಲಾಗುತ್ತದೆ’ ಎಂದರು.

‘ಸರ್ಕಾರಿ ಸೇವೆಗಳು, ಬಸ್ ಸಂಚಾರ, ಬಸ್ ನಿಲ್ದಾಣಗಳು, ಹವಾಮಾನ, ಸಮೀಪದ ಸ್ಥಳಗಳು, ದೂರು ಕೋಶ ಮತ್ತಿತರ ಸೌಲಭ್ಯಗಳನ್ನು ‘ಮೈ ಬೆಳಗಾವಿ ಮೊಬೈಲ್ ಆ್ಯಪ್‌ನಲ್ಲಿ ಅಳವಡಿಸಲಾಗಿದೆ. ಯಾವುದೇ ಇಲಾಖೆಗೆ ಸಂಬಂಧಿಸಿದ ದೂರುಗಳು ಆ್ಯಪ್‌ನಲ್ಲಿ ದಾಖಲಾದಾಗ ಸಂಬಂಧಿಸಿದ ಇಲಾಖೆಯ ಫೀಲ್ಡ್  ಆಫೀಸರ್‌ಗಳಿಗೆ ಮಾಹಿತಿ ಹೋಗುತ್ತದೆ. ಅವರು ದೂರು ನಿವಾರಣೆಗೆ ಕ್ರಮ ವಹಿಸುತ್ತಾರೆ. ಬೆಂಕಿ ಅನಾಹುತ, ಅಪಘಾತ, ಸಾರಿಗೆ ಸಮಸ್ಯೆ ಮತ್ತಿತರ ತುರ್ತು ಸಂದರ್ಭದಲ್ಲಿ ತಕ್ಷಣವೇ ಮಾಹಿತಿ ಒದಗಿಸಲು ಈ ಆ್ಯಪ್ ಉಪಯುಕ್ತವಾಗಿದೆ’ ಎಂದು ವಿವರ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.