ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಗ್ರಾಮೀಣ ಉತ್ಸವ, ಲಕ್ಷ್ಮಿ ಅವಾರ್ಡ್ಸ್‌: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜನ್ಮ ನೀಡಿ, ತುತ್ತು ತಿನ್ನಿಸಿ ದೊಡ್ಡವಳನ್ನಾಗಿ ಮಾಡಿದ ತಾಯಿಯ ಋಣ ದೊಡ್ಡದು. ಪ್ರೀತಿ, ವಿಶ್ವಾಸದಿಂದ ಕಂಡು ಗೆಲ್ಲಿಸಿ ಸ್ವಾಭಿಮಾನದ ಬದುಕು ಕೊಟ್ಟ ಗ್ರಾಮೀಣ ಕ್ಷೇತ್ರದ ಜನರ ಋಣ ಅದಕ್ಕಿಂತಲೂ ದೊಡ್ಡದು. ಈ ಋಣ ತೀರಿಸಲು ಸಾಧ್ಯವಿಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿ ಭಾನುವಾರ ಕ್ಷೇತ್ರದ ಜನರು ಹಾಗೂ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಎರಡು ಬಾರಿ ಚುನಾವಣೆಗಳಲ್ಲಿ ಸೋತು ಕಂಗೆಟ್ಟಿದ್ದೆ. ಇನ್ನೊಂದು ಚುನಾವಣೆಯಲ್ಲಿ ಸೋಲುವ ಶಕ್ತಿ ಇರಲಿಲ್ಲ. ಹುಟ್ಟಿನಿಂದಲೇ ಧೈರ್ಯವಂತೆಯಾದರೂ ಬದುಕುವ ಶಕ್ತಿ ಇರಲಿಲ್ಲ. ಇನ್ನೊಮ್ಮೆ ಸೋತರೆ ಏನಾದರೂ ಮಾಡಿಕೊಳ್ಳುವೆ ಎಂದು ತಾಯಿಗೆ ಹೇಳಿದ್ದೆ. ಆದರೆ, ಕ್ಷೇತ್ರದ ಜನ ಕೈಹಿಡಿದರು. ಗೆಲ್ಲಿಸಿ ಮರುಜನ್ಮ ನೀಡಿದರು. ಸ್ವಾಭಿಮಾನದ ಮರು ಜನ್ಮ ನೀಡಿದ ಅವರ ಉಪಕಾರ ಮರೆಯಲಾರೆ’ ಎಂದು ತಿಳಿಸಿದರು.

‘ನನ್ನನ್ನು ಶಾಸಕಿಯಾಗಿ ನೋಡಬೇಡಿ. ಅಕ್ಕ, ತಂಗಿ, ಮನೆ ಮಗಳು, ತಾಯಿಯಂತೆ ಕಾಣಿರಿ. ನಿಮ್ಮ ಪ್ರೀತಿ–ವಿಶ್ವಾಸವನ್ನು ನನ್ನ ಹೃದಯದಲ್ಲಿ ಸದಾ ಜೋಪಾನವಾಗಿ ಇಟ್ಟುಕೊಳ್ಳುತ್ತೇನೆ. ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶದ ಆಸ್ತಿ. ಅವರಿಗೆ ಬೇಕಾದ ಎಲ್ಲ ರೀತಿಯ ನೆರವು ನೀಡುತ್ತೇನೆ. ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು’ ಎಂದರು.

ಲಕ್ಷ್ಮಿ ಅವಾರ್ಡ್ಸ್‌

‘ಮರುಹುಟ್ಟು ನೀಡಿದ ಈ ದಿನವನ್ನು ಜನ್ಮ ದಿನವನ್ನಾಗಿ ಪ್ರತಿ ವರ್ಷವೂ ಆಚರಿಸುತ್ತೇನೆ. ಮುಂದಿನ ವರ್ಷ ಮೇ 11 ಹಾಗೂ 12ರಂದು ಇದಕ್ಕೂ ಅದ್ಧೂರಿ ಕಾರ್ಯಕ್ರಮ ಆಯೋಜಿಸುವೆ. 2 ದಿನಗಳವರೆಗೆ ಬೆಳಗಾವಿ ಗ್ರಾಮೀಣ ಉತ್ಸವ ನಡೆಸುವೆ.  ಪ್ರತಿ ವರ್ಷ ‘ಲಕ್ಷ್ಮಿ ಅವಾರ್ಡ್ಸ್‌’ ಹೆಸರಲ್ಲಿ ಸಾಧಕರನ್ನು ಸನ್ಮಾನಿಸಲು ನಿರ್ಧರಿಸಿದ್ದೇನೆ’ ಎಂದು ಪ್ರಕಟಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ‘ಜನರ ಪ್ರೀತಿ ವಿಶ್ವಾಸ ಗಳಿಸಿರುವ ಲಕ್ಷ್ಮಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ. ರಾಜ್ಯ ಹಾಗೂ ದೇಶಕ್ಕೆ ಅವರ ಸೇವೆ ಲಭಿಸುವಂತಾಗಲಿ’ ಎಂದು ಹಾರೈಸಿದರು.‌

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ತಾಯಿ ಗರ್ಭದಿಂದ ಜನಿಸಿದ ದಿನದ ಬದಲಿಗೆ ಜನರು ಆಶೀರ್ವಾದ ಮಾಡಿದ ದಿನವನ್ನೇ ಹುಟ್ಟುಹಬ್ಬವಾಗಿ ಅಚರಿಸಿಕೊಳ್ಳುತ್ತಿರುವ ಏಕೈಕ ಮಹಿಳೆ ಲಕ್ಷ್ಮಿ ಆಗಿದ್ದಾರೆ. ಒಂದೇ ವರ್ಷದಲ್ಲಿ ₹ 750 ಕೋಟಿ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿದ್ದಾರೆ. 860 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. ದೇವರು ಅವರಿಗೆ ಇನ್ನಷ್ಟು ಶಕ್ತಿ ನೀಡಲಿ’ ಎಂದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಪ್ರಸ್ತುತ ಬಹುತೇಕ ರಾಜಕಾರಣಿಗಳು ತಮ್ಮ ಕ್ಷೇತ್ರದ ಜನರನ್ನು ದೂರವಿಟ್ಟೇ ಅಧಿಕಾರ ನಡೆಸುತ್ತಾರೆ. ಆದರೆ ಈ ಶಾಸಕಿ ಕ್ಷೇತ್ರದ ಜನರೊಂದಿಗೆ ಬೆರೆತು, ಅವರೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಮುಂದೆಯೂ ಜನ ಅವರನ್ನು ಬೆಂಬಲಿಸಲಿ, ರಾಜ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗುವಂತೆ ಮಾಡಲಿ’ ಎಂದು ಆಶಿಸಿದರು.

ಕ್ಷೇತ್ರದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಮುಖಂಡರಾದ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ ಇದ್ದರು. ಬಸವರಾಜ ಮ್ಯಾಗೋಟಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು