ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವ ಸುರೇಶ ಅಂಗಡಿಗೆ ಅಭೂತಪೂರ್ವ ಸ್ವಾಗತ

Last Updated 1 ಜೂನ್ 2019, 14:22 IST
ಅಕ್ಷರ ಗಾತ್ರ

ಸಾಂಬ್ರಾ/ ಬೆಳಗಾವಿ: ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ನಗರಕ್ಕೆ ಮರಳಿದ ಸುರೇಶ ಅಂಗಡಿ ಅವರಿಗೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ಕೋರಿದರು.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಅಂಗಡಿ ಪರವಾಗಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಪರವಾಗಿಯೂ ಘೋಷಣೆಗಳು ಮೊಳಗಿದವು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಆನಂದ ಮಾಮನಿ, ಅನಿಲ ಬೆನಕೆ, ಮುಖಂಡರಾದ ಎಂ.ಬಿ. ಝಿರಲಿ, ಈರಣ್ಣಾ ಕಡಾಡಿ, ಸೇರಿದಂತೆ ಹಲವರು ಹೂಗುಚ್ಛ ನೀಡಿ ಸ್ವಾಗತಿಸಿದರು.

ಟೆಂಪಲ್‌ ರನ್‌

ಸಾಂಬ್ರಾದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಅಂಗಡಿ ತಮ್ಮ ಪತ್ನಿ ಮಂಗಲಾ ಸಮೇತ ತೆರಳಿದರು. ಪೂಜೆ ಸಲ್ಲಿಸಿದರು. ನಂತರ ಬಸವೇಶ್ವರ ಹಾಗೂ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬೆಳಗಾವಿಯ ಆರ್‌ಟಿಒ ವೃತ್ತದಲ್ಲಿರುವ ಮಾರುತಿ ಹಾಗೂ ಗಣಪತಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಾಣಿ ಚನ್ನಮ್ಮ ವೃತ್ತದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಪ್ರತಿಗೆ ಮಾಲಾರ್ಪಣೆ ಮಾಡಿದರು. ನಾಗನೂರು ರುದ್ರಾಕ್ಷಿಮಠದ ಹಾಗೂ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿಯಾದರು.

ಸ್ವಾಗತ ಕೋರುವ ಫ್ಲೆಕ್ಸ್‌

ಸಾಂಬ್ರಾ ವಿಮಾನ ನಿಲ್ದಾಣದ ಬಳಿ, ಬೆಳಗಾವಿ ಪ್ರವೇಶದ ಬಳಿ, ರಾಣಿ ಚನ್ನಮ್ಮ ವೃತ್ತದಲ್ಲಿ ಹಾಗೂ ಸುರೇಶ ಅಂಗಡಿ ಅವರ ನಿವಾಸದ ಬಳಿ ಸ್ವಾಗತ ಕೋರಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಕೇಂದ್ರ ಸಚಿವರಾಗಿ ಆಗಮಿಸುತ್ತಿರುವುದಕ್ಕೆ ಅಭಿನಂದನೆಗಳನ್ನು ಕೋರಲಾಗಿತ್ತು.

ಹುಟ್ಟು ಹಬ್ಬ ಆಚರಣೆ

ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಮನೆಯಲ್ಲಿ ಸುರೇಶ ಅಂಗಡಿಯವರು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಕುಟುಂಬ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಕೇಕ್‌ ಕತ್ತರಿಸಿದ ಸುರೇಶ ಅವರು ತಮ್ಮ ಮಗಳು ಸ್ಪೂರ್ತಿ ಹಾಗೂ ಶ್ರದ್ಧಾ ಅವರಿಗೆ, ಪತ್ನಿ ಮಂಗಲಾ ಅವರಿಗೆ ತಿನಿಸಿದರು. ಅಭಿಮಾನಿಗಳು ಮನೆಯ ಮುಂದೆ ಪಟಾಕಿ ಸಿಡಿಸಿ, ಸಂಭ್ರಮಿಸಿದರು.

ಅಧಿಕಾರಿಗಳ ಜೊತೆ ಚರ್ಚೆ

‘ಜನರ ಆಶೀರ್ವಾದದಿಂದ ಈ ಹುದ್ದೆ ನನಗೆ ದೊರೆತಿದೆ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಹೊಸ ಯೋಜನೆ ಪ್ರಕಟಿಸುವುದಕ್ಕಿಂತ ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡುತ್ತೇನೆ’ ಎಂದು ಸುರೇಶ ಅಂಗಡಿ ಸುದ್ದಿಗಾರರಿಗೆ ತಿಳಿಸಿದರು.

‘ಸವದತ್ತಿಗೆ ರೈಲು ಸಂಪರ್ಕ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ರಾಜ್ಯ ಸರ್ಕಾರ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಸಹಕಾರ ನೀಡಿದರೆ ಇನ್ನಷ್ಟು ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT