ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಮರಳಿ ಪಡೆಯಲು ಕ್ರಮ

ಲ್ಯಾಪ್ಸ್ ಆಗಿದ್ದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರಿಂದ ತರಾಟೆ
Last Updated 18 ಸೆಪ್ಟೆಂಬರ್ 2020, 13:17 IST
ಅಕ್ಷರ ಗಾತ್ರ

ಬೆಳಗಾವಿ: ‘ಲ್ಯಾಪ್ಸ್ ಆಗಿರುವ ಕಳೆದ ವರ್ಷದ ಅನುದಾನ ಮರಳಿ ಪಡೆಯುವ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸುವುದು ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್‌ ಎಚ್.ವಿ. ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಲ್ಯಾಪ್ಸ್‌ ಆಗಿರುವ ಅನುದಾನದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಇದಕ್ಕೆ ಕಾರಣವಾದ ಅಧಿಕಾರಿಗಳ ಮೇಲೆ ಕ್ರಮ‌ ಕೈಗೊಳ್ಳಲಾಗುವುದು. ಮತ್ತೆ ಒದಗಿಸುವಂತೆ ಕೋರಿ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಬಹುದು. ಆಗ ಮಾತ್ರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು. ಈ ವಿಷಯದಲ್ಲಿ ಖಜಾನೆ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು’ ಎಂದು ತಿಳಿಸಿದರು.

ತನಿಖೆಗೆ ಸಮಿತಿ:‘ಅನುದಾನ ವಾಪಸ್‌ ಹೋಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಲು ಉಪ ಕಾರ್ಯದರ್ಶಿ ನೇತೃತ್ವದಲ್ಲಿ ಮೂವರು ಅಧಿಕಾರಿಗಳ ಸಮಿತಿ ರಚಿಸಲಾಗುವುದು. ಸಮಿತಿಯು ಸಮಗ್ರ ಮಾಹಿತಿಯನ್ನು ಕಲೆ ಹಾಕುವ ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಿದೆ. ಇದಾದ ಬಳಿಕ ಅಧಿಕಾರಿಗಳ ತಪ್ಪು ಕಂಡುಬಂದರೆ ನಿಯಮಾವಳಿ ಪ್ರಕಾರ ಕ್ರಮ ವಹಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಮಾರ್ಚ್ ಅಂತ್ಯದೊಳಗೆ ಬಿಲ್‌ಗಳನ್ನು ಖಜಾನೆಗೆ ಸಲ್ಲಿಸಲಾಗಿದೆ. ವಿಳಂಬದಿಂದಾಗಿ ಅನುದಾನ ಲ್ಯಾಪ್ಸ್ ಆಗಿದೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಮಾಹಿತಿ ನೀಡಿದರು.

‘ಮಾರ್ಚ್ 24ರಂದು ಸಲ್ಲಿಸಿರುವ ಬಿಲ್‌ಗಳನ್ನು ಪಾಸ್ ಮಾಡದೆ ಅನುದಾನ ಲ್ಯಾಪ್ಸ್ ಆಗಲು ಕಾರಣರಾದ ಹಾಗೂ ಕರ್ತವ್ಯಲೋಪ ಎಸಗಿದ ಖಜಾನೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯರಾದ ಶಂಕರ ಮಾಡಲಗಿ ಹಾಗೂ ರಮೇಶ್ ದೇಶಪಾಂಡೆ ಒತ್ತಾಯಿಸಿದರು.

ವರದಿ ಸಲ್ಲಿಸಲಾಗುವುದು:‘ಅನುದಾನ ಕಳೆದುಕೊಂಡ ಬಗ್ಗೆ ಸರ್ಕಾರಕ್ಕೆ ಇದುವರೆಗೂ ವರದಿ ಸಲ್ಲಿಸಿಲ್ಲವೇಕೆ?’ ಎಂದು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಅನುದಾನ ಬಳಕೆ ಬಗ್ಗೆ ತಪ್ಪು ಮಾಹಿತಿ ನೀಡಿರುವ ಹಾಗೂ ಅನುದಾನ ಹಿಂದಿರುಗಲು ಕಾರಣರಾದ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಣವಿಲ್ಲದೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಇಲಾಖೆಗಳಿಂದ ಸಮಗ್ರ ಮಾಹಿತಿ ಕ್ರೋಢೀಕರಿಸಲಾಗಿದೆ. ಕೂಡಲೆ ಸರ್ಕಾರಕ್ಕೆ ವರದಿಯನ್ನು ಕಳುಹಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ತಿಳಿಸಿದರು.

ಉಪಾಧ್ಯಕ್ಷ ಅರುಣ ಕಟಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT