ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ‘ಕೈಗಾರಿಕೆಗಳ ಪುನರಾರಂಭಕ್ಕೆ ಹಸಿರು ನಿಶಾನೆ’

Last Updated 2 ಮೇ 2020, 14:57 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್‌– 19 ಸೋಂಕು ಕಂಡುಬಂದಿರುವ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಇನ್ನುಳಿದ ಕಡೆ ಕೈಗಾರಿಕೆಗಳನ್ನು ಪುನರಾರಂಭಿಸಲು ಮುಖ್ಯಮಂತ್ರಿ ಅವರು ಸಮ್ಮತಿ ನೀಡಿದ್ದಾರೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಉದ್ಯಮಿಗಳು ಸ್ವಯಂ ಘೋಷಣಾಪತ್ರ ಸಲ್ಲಿಸಿ ಕೈಗಾರಿಕೆ ಆರಂಭಿಸಬಹುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್ ತಿಳಿಸಿದರು.

ಉದ್ಯಮಬಾಗದ ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಶನಿವಾರ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕಾರ್ಮಿಕರಿಗೆ ಪಾಸ್ ಅಗತ್ಯವಿಲ್ಲ. ಕೈಗಾರಿಕೆಗಳ ಆರಂಭಕ್ಕೆ ಎಲ್ಲ ರೀತಿಯ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆ ಕ್ರಮ ಕೈಗೊಂಡು ಕೈಗಾರಿಕೆಯನ್ನು ಆರಂಭಿಸಬಹುದು’ ಎಂದು ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿಕೊಂಡರು.

ವಿಶೇಷ ಪ್ಯಾಕೇಜ್–ಚರ್ಚೆ:

‘ಸಣ್ಣ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಚರ್ಚೆ ನಡೆದಿದೆ. ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಕೂಡ ಸಲ್ಲಿಸಲಾಗಿದೆ. ಪ್ರಧಾನಮಂತ್ರಿಗಳು ಇದರ ಬಗ್ಗೆ ಘೋಷಣೆ ಮಾಡಬಹುದು’ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಸಕ್ಕರೆ ಕಾರ್ಖಾನೆ ಸೇರಿದಂತೆ ಕೆಲವು ಕಾರ್ಖಾನೆಗಳು 24 ಗಂಟೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆದ್ದರಿಂದ ನಿರಂತರ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಬೇಕು’ ಎಂದು ಹೇಳಿದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ‘ಕಾರ್ಮಿಕರಿಗೆ ಪಾಸ್‌ಗಳ ಅಗತ್ಯವಿಲ್ಲದಿರುವುದರಿಂದ ದ್ವಿಚಕ್ರ ವಾಹನಗಳಲ್ಲಿ ಒಬ್ಬರೆ ಬರಬಹುದು. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಿಂದ ಕಾರ್ಮಿಕರು ಮುಕ್ತವಾಗಿ ಸಂಚರಿಸಬಹುದು’ ಎಂದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀಧರ ಉಪ್ಪಿನ ಮಾತನಾಡಿ, ‘ಕೈಗಾರಿಕಾ ಕಾರ್ಮಿಕರಿಗೆ ಅಗತ್ಯವಿರುವ ಪಾಸ್‌ಗಳನ್ನು ವಿತರಿಸಬೇಕು ಹಾಗೂ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಕೆಲಸದ ಅವಧಿಯನ್ನು ನಾಲ್ಕು ಗಂಟೆಗಳ ಕಾಲ ವಿಸ್ತರಿಸಬೇಕು’ ಎಂದು ಮನವಿ ಮಾಡಿಕೊಂಡರು.

ಉದ್ಯಮಿಗಳಿಗೆ ಶೇ 3ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲಸೌಲಭ್ಯ ನೀಡಬೇಕು ಎಂದು ಕೋರಿದರು.

ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ ಜವಳಿ ಮಾತನಾಡಿ, ‘ಕೈಗಾರಿಕೆಗಳ ಜೊತೆಗೆ ಕಚ್ಚಾಸಾಮಗ್ರಿ ಪೂರೈಕೆ ಘಟಕಗಳನ್ನು ಆರಂಭಿಸಿದರೆ ಮಾತ್ರ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು’ ಎಂದು ಹೇಳಿದರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ಶಾಸಕರಾದ ಪಿ.ರಾಜೀವ, ಅನಿಲ ಬೆನಕೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಕೋವಿಡ್-19 ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ‌.ಎಸ್. ಲೋಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರಾದ ದೊಡ್ಡಬಸವರಾಜ್, ‘ಕೃಷಿ ಮತ್ತಿತರ ಅವಶ್ಯಕ ಕೈಗಾರಿಕೆಗಳಿಗೆ ಈಗಾಗಲೇ ಮಾರ್ಗಸೂಚಿ ಅನ್ವಯ ಕೈಗಾರಿಕೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT