ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪಣ್ಣ ಬದುಕು ಪ್ರತಿಯೊಬ್ಬರಿಗೂ ಆದರ್ಶ’

ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
Last Updated 27 ಜುಲೈ 2018, 12:50 IST
ಅಕ್ಷರ ಗಾತ್ರ

ಬೆಳಗಾವಿ: ‘ಶಿವಶರಣ ಹಡಪದ ಅಪ್ಪಣ್ಣನವರ ಜೀವನ ಪ್ರತಿಯೊಬ್ಬರಿಗೂ ಆದರ್ಶವಾಗಿದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.‌

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಪಾಲಿಕೆ ವತಿಯಿಂದ ಇಲ್ಲಿನ ಕುಮಾರಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘ಅನುಭವ ಮಂಟಪ ಹಾಗೂ ಬಸವಣ್ಣನವರ ಕಾಯಕಕ್ಕೆ ಹಡಪದ ಅಪ್ಪಣ್ಣನವರು ಆಧಾರ ಸ್ತಂಭವಾಗಿದ್ದರು. ಬಸವಣ್ಣನವರ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಅವರೂ ಸಲಹೆಗಾರರಾಗಿದ್ದರು. ಅವರ ಕಾರ್ಯಭಾರದಲ್ಲಿ ತಮ್ಮದೇ ಆದ ಸೇವೆ ಮೂಲಕ ಪ್ರಸಿದ್ಧರಾಗಿದ್ದರು. ಬಸವಣ್ಣ ಅವರೊಂದಿಗೆ ಇರುತ್ತಿದ್ದರು. ಬಸವಣ್ಣನ ಭೇಟಿ ಮಾಡಲು ಬರುವವರು ಮೊದಲು ಅಪ್ಪಣ್ಣನವರ ಅನುಮತಿ ಪಡೆಯಬೇಕಿತ್ತು’ ಎಂದರು.

ಸಮಾಜಕ್ಕೆ ಕೊಡುಗೆ:‌‘ತಾತ್ವಿಕ ಚಿಂತನೆ ಒಳಗೊಂಡ ವಚನಗಳನ್ನು ಅಪ್ಪಣ್ಣನವರು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿ ಅಪ್ಪಣ್ಣನವರ 246 ವಚನಗಳನ್ನು ಪ್ರಕಟಿಸಲಾಗಿದೆ. ಮಾನವ ಹಕ್ಕುಗಳನ್ನು ಮನಗಂಡು ಅವುಗಳಿಗೆ ದಕ್ಕೆ ಬಾರದಂತೆ ಬದುಕಿದವರು ಶರಣರು. ಅವರಲ್ಲಿ ಅಪ್ಪಣ್ಣನವರು ಕೂಡ ಒಬ್ಬರು. ಅವರ ಬದುಕು ಪ್ರತಿಯೊಬ್ಬರಿಗೂ ಆದರ್ಶ’ ಎಂದು ತಿಳಿಸಿದರು.

‘ಮೌಢ್ಯತೆ ಇಂದಿಗೂ ಶಾಪವಾಗಿ ಪರಿಣಮಿಸಿದೆ. ಮೌಢ್ಯದಿಂದ ದೂರವಿರಲು ಶರಣರ ವಚನಗಳನ್ನು ಅರ್ಥೈಸಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಇಂದು ಇರುವ ಅನೇಕ ಹುದ್ದೆಗಳನ್ನು ಅಂದಿನ ಕಾಲದಲ್ಲಿಯೇ ಬಸವಣ್ಣನವರು ಅನುಭವ ಮಂಟಪದಲ್ಲಿ ರಚಿಸಿದ್ದರು’ ಎಂದು ಸ್ಮರಿಸಿದರು.

ಸಂಶೋಧನೆ ನಡೆಯಲಿ:‘ರಾಜ, ಮಹಾರಾಜರ ಕಾಲ ಹಾಗೂ ಹಿಂದಿನ ದಿನಗಳಲ್ಲಿ ಹಡಪದ ಸಮಾಜದ ಹಿರಿಮೆ ಗರಿಮೆಗಳ ಕುರಿತು, ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಆ ಸಮಾಜದ ಸಾಹಿತಿಗಳ ಕೊಡುಗೆಯ ಬಗ್ಗೆಯೂ ಸಂಶೋಧನೆ ನಡೆಯಬೇಕಿದೆ’ ಎಂದು ಪ್ರತಿಪಾದಿಸಿದರು.

ಸಮಾರಂಭ ಉದ್ಘಾಟಿಸಿದ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ‘ಹಡಪದ ಸಮಾಜ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸದೃಢವಾಗಬೇಕಿದೆ’ ಎಂದರು.

‘ಸಮಾಜದವರು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕೋರಿದ್ದಾರೆ. ಈ ಕುರಿತು ಪಾಲಿಕೆ ಅಥವಾ ಬುಡಾ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿವೇಶನ ಮಂಜೂರು ಮಾಡಿಸಿ ಸಮುದಾಯ ಭವನ ನಿರ್ಮಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್ ಮಧುಶ್ರೀ ಪೂಜಾರಿ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಸಮಾಜದ ಮುಖಂಡರು ಭಾಗವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ಕಲಾವಿದ ಶ್ರೀರಂಗ ಜೋಶಿ ನಾಡಗೀತೆ ಹಾಗೂ ವಚನ ಗಾಯನ ಪ್ರಸ್ತುತಪಡಿಸಿದರು. ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ನಿರೂಪಿಸಿದರು.

ಇದಕ್ಕೂ ಮುನ್ನ, ಅಶೋಕ ವೃತ್ತದಿಂದ ಆರಂಭಗೊಂಡ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆಗೆ ಎಡಿಸಿ ಡಾ.ಎಚ್.ಬಿ. ಬೂದೆಪ್ಪ ಚಾಲನೆ ನೀಡಿದರು. ಆರ್‌ಟಿಒ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತ, ಎಸ್ಪಿ ಕಚೇರಿ ಮಾರ್ಗವಾಗಿ ಕುಮಾರಗಂಧರ್ವ ರಂಗಮಂದಿರ ತಲುಪಿತು.

ಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ, ಸಮಾಜದ ಮುಖಂಡರು, ಮಹಿಳೆಯರು ಹಾಗೂ ಕಲಾತಂಡಗಳ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT