ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಗಾ–ಮಚ್ಛೆ ಬೈಪಾಸ್ ರಸ್ತೆ: ಪ್ರತಿಭಟನೆ ನಡುವೆಯೇ ಕಾಮಗಾರಿ ಮುಂದುವರಿಕೆ

Last Updated 13 ನವೆಂಬರ್ 2021, 11:24 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಹಲಗಾ–ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಯು ರೈತರ ವಿರೋಧದ ನಡುವೆಯೂ ಮುಂದುವರಿದಿದೆ. ಎನ್‌ಎಚ್‌ಎಐನಿಂದ ಕೇವಲ ಎರಡು ದಿನಗಳಲ್ಲಿ ಸುಮಾರು ಐದು ಕಿ.ಮೀ.ವರೆಗೆ ಕಚ್ಚಾ ರಸ್ತೆ ನಿರ್ಮಿಸಲಾಗಿದೆ.

ತಾಲ್ಲೂಕಿನ ಮಚ್ಛೆ ಗ್ರಾಮದಿಂದ ಯಳ್ಳೂರು ರಸ್ತೆವರೆಗೂ ರಸ್ತೆ ಸಮತಟ್ಟು ಮಾಡಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ನಡೆದಿದೆ.

ಈ ನಡುವೆ, ಬೆಳೆ ಇರುವ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಕೆಲವು ರೈತರು ತಿಳಿಸಿದ್ದಾರೆ. ಭತ್ತದ ಗದ್ದೆಯಲ್ಲಿ ಬೆಳೆಯ ಮಧ್ಯೆ ಕುಳಿತು ವಡಗಾವಿ ಗ್ರಾಮದ ರೈತರು ಧರಣಿ ನಡೆಸಿದರು. ಮಕ್ಕಳು, ಮಹಿಳೆಯರು ಸೇರಿ ಕುಟುಂಬದವರು ಕೂಡ ಬಂದಿದ್ದರು.

‘ಯಾವುದೇ ಕಾರಣಕ್ಕೂ ನಮ್ಮ ಜಮೀನು ನೀಡುವುದಿಲ್ಲ’ ಎಂದು ವಡಗಾವಿಯ ರೈತ ಮಹಿಳೆ ಸವಿತಾ ಬಿರ್ಜೆ ಕಣ್ಣೀರು ಹಾಕದರು. ಹಸುಗೂಸಿನೊಂದಿಗೆ ಬಂದಿದ್ದ ಅವರು, ‘ಮೂರು ಎಕರೆಯಲ್ಲಿ ಕೇವಲ ಒಂದು ಗುಂಟೆ ಬಿಟ್ಟು ಉಳಿದುದೆಲ್ಲಾ ರಸ್ತೆಗೆ ಹೋಗುತ್ತದೆ. ಭತ್ತ ಮತ್ತು ಕಬ್ಬು ಬೆಳೆದಿದ್ದೇವೆ. ಭೂಸ್ವಾಧೀನ ಮಾಡಿಕೊಂಡರೆ ನಮಗೆ ಬಹಳ ತೊಂದರೆ ಆಗುತ್ತದೆ. ಜಮೀನು ಕಳೆದುಕೊಂಡು ನಾವು ಹೇಗೆ ಜೀವನ ಸಾಗಿಸುವುದು? ಪರ್ಯಾಯವಾಗಿ ಫಲವತ್ತಾದ ಜಮೀನನ್ನೇ ನಮಗೆ ನೀಡಬೇಕು’ ಎಂದು ಒತ್ತಾಯಿಸಿದರು.

‘ತಮ್ಮ ಗದ್ದೆಗೆ ಜೆಸಿಬಿ ನುಗ್ಗಲು ಬಿಡುವುದಿಲ್ಲ. ಕಾಮಗಾರಿ ವಿರೋಧಿಸಿ ಹೈಕೋರ್ಟ್ ಮೊರೆ ಹೋಗಿದ್ದೇವೆ. ಹೀಗಿದ್ದರೂ ಕಾಮಗಾರಿ ನಡೆಸುತ್ತಿದ್ದು, ಇದರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಹಾಗೂ ಪಿಐಎಲ್ ಹಾಕಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT