ಅಥಣಿ: ಹಸಿದು ಕಂಗಾಲಾಗಿದ್ದ ಅತಿಥಿ ಉಪನ್ಯಾಸಕರ ಹೊಟ್ಟೆಗೆ ಹಣಮಂತ ಗೌಡ ಕಲ್ಮನಿ ಹಾಗೂ ಪೀಟರ್ ವಿನೋದ್ ಚಂದ್ ಇವರಿಬ್ಬರ ನಾಯಕತ್ವದ ಹೋರಾಟಗಳು ಅನ್ನವನ್ನು ಹಾಕಿದ್ದು ಶಕ್ತಿ ತುಂಬಿದ್ದು ಎಂದಿಗೂ ಮರೆಯಲಾರದ ಸತ್ಯ. ಇಬ್ಬರು ರಾಜ್ಯದಾದ್ಯಂತ ಸಂಚರಿಸಿ ಸಂಘಟನೆಯನ್ನು ಗಟ್ಟಿಗೊಳಿಸಿದ್ದಾರೆ. ಹನಮಂತಗೌಡ ಕಲ್ಮನಿ ಮೇಲಿನ ಆರೋಪ ಖಂಡನೀಯವಾಗಿದೆ ಹಾಗೂ ವದಂತಿಗಳ ಬಗ್ಗೆ ಅತಿಥಿ ಉಪನ್ಯಾಸಕರು ತಲೆಕೆಡಿಸಿಕೊಳ್ಳಬೇಡಿ. ತನಿಖೆಯಿಂದ ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಹೊರಬರಲಿದೆ ಎಂದು ಅಥಣಿಯ ಅತಿಥಿ ಉಪನ್ಯಾಸಕರ ಮುಖಂಡ ಪಿ. ಎಲ್. ಪೂಜಾರಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗೆಯ ಸಾಗರದಲ್ಲಿ ಕೆಲವು ಅತಿಥಿ ಉಪನ್ಯಾಸಕ ಸಹೋದರರು ಅಧ್ಯಕ್ಷರಾದ ಹನುಮಂತಗೌಡ ಕಲ್ಮನಿ ಹಾಗೂ ಕಾರ್ಯದರ್ಶಿ ಪೀಟರ್ ವಿನೋದಚಂದ, ಮಹಿಳಾ ಪ್ರತಿನಿಧಿ ಶಾಲಿನಿ ಕೆ. ಅವರುಗಳ ಮೇಲೆ ನೀಡಿದ ದೂರು, ಮಾಡಿದ ಆರೋಪ-ಪ್ರತ್ಯಾರೋಪಗಳು ಅವರವರ ವೈಯಕ್ತಿಕ ವ್ಯವಹಾರದ್ದಾಗಿದೆ. ರಾಜ್ಯದ ಸಹಸ್ರಾರು ಅತಿಥಿ ಉಪನ್ಯಾಸಕರು ಸ್ವಯಂ ಇಚ್ಛೆಯಿಂದ ದೇಣಿಗೆ ರೂಪದಲ್ಲಿ ಹಣ ನೀಡಿದ್ದು ವಿನಾ ಸಂಘದಿಂದ ಯಾವುದೇ ಒತ್ತಡವನ್ನು ಹಾಕಿಲ್ಲ ಎಂದರು.
ಅತಿಥಿ ಉಪನ್ಯಾಸಕರ ಭದ್ರತೆಗಾಗಿ ಹೊರಾಟ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಭವಿಷ್ಯದ ಬದುಕಿಗೆ ಹನಮಂತಗೌಡ ಕಲ್ಮನಿಯವರ ನಾಯಕತ್ವ ಇಂದಿಗೂ ಪ್ರಶ್ನಾತೀತ ಮತ್ತು ಅನಿವಾರ್ಯ ಎಂದು ಹೇಳಿದರು.
ವಿಜಯ ಕಾಂಬಳೆ, ಆರ್. ಎಸ್. ದೊಡ್ಡನಿಂಗಪ್ಪಗೋಳ, ಶ್ರೀಶೈಲ ದೇವರೆಡ್ಡಿ, ಆರ್.ಎಸ್.ಅಂಬಿ, ನಚಿಕೇತ ನೂಲಿ, ರಾಜೇಶ ಕೆರೂರ, ಸುನಂದಾ ಹಿಪ್ಪರಗಿ, ರೇಣುಕಾ ಕಾಂಬಳೆ, ರಾಜಾಹಮದ್ ಜುಮನಾಳ, ಭರತೇಶ ಅಸ್ಕಿ ಮತ್ತಿತರರು ಇದ್ದರು.