ಗುರುವಾರ , ಸೆಪ್ಟೆಂಬರ್ 23, 2021
26 °C

ಜನರ ಪರ ಧ್ವನಿ ಎತ್ತುವ ಕರ್ತವ್ಯ ನಿರ್ವಹಿಸಿದ್ದೇವೆ: ಹನುಮಂತಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಮೇಲ್ಮನೆಯಲ್ಲಿ ವಿರೋಧ ಪಕ್ಷ ಸದಸ್ಯರ ವರ್ತನೆ ಬಗ್ಗೆ ಟೀಕೆ ಮಾಡಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿರೋಧಪಕ್ಷದವರ ವಿರುದ್ಧ ಆರೋಪಿಸಿರುವ ಆಡಳಿತ ಪಕ್ಷದ ಸಂಸದರ ನಡೆ ಖಂಡನೀಯ’ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಹೇಳಿದರು.

ಇಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ರಾಜ್ಯ ವಿಧಾನಸಭೆಯ ಅಧ್ಯಕ್ಷರ ಸ್ಥಾನದಲ್ಲಿರುವವರು ವಿರೋಧ ಪಕ್ಷಗಳ ಬಗ್ಗೆ ಟೀಕೆಗಳನ್ನು ಮಾಡಿದ ಉದಾಹರಣೆಯನ್ನು ಹಿಂದೆಂದೂ ನೋಡಿಲ್ಲ. ಆದರೆ, ಕಾಗೇರಿ ಅವರು ತಮ್ಮ ಹುದ್ದೆಯ ಘನತೆ ಮರೆತು ವಿರೋಧ ಪಕ್ಷದ ವಿರುದ್ಧ ಹೀನಾಯವಾಗಿ ಟೀಕೆ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೃಷಿಗೆ ಮಾರಕವಾದ ಕಾಯ್ದೆಗಳ ವಿರುದ್ಧ, ಹಲವು ತಿಂಗಳಿಂದ ನೂರಾರು ರೈತರು ದೆಹಲಿಯ ಗಡಿಗಳಲ್ಲಿ ಧರಣಿ ಮಾಡುತ್ತಿದ್ದಾರೆ. 500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಸರ್ಕಾರ ಗಮನಕ್ಕೆ ತೆಗೆದುಕೊಂಡಿಲ್ಲ. ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಎನ್ನುವುದು ನಮ್ಮ ಬೇಡಿಕೆಯಾಗಿತ್ತು. ಆದರೆ ಸ್ಪಂದಿಸಲಿಲ್ಲ. ಜನರ ಧ್ವನಿಯಾಗಿ ರಾಜ್ಯಸಭೆಯಲ್ಲಿ ಧ್ವನಿ ಎತ್ತಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಆದ ಕಾರಣ ಪ್ರಶ್ನಿಸಿದ್ದೇವೆ’ ಎಂದು ತಿಳಿಸಿದರು.

‘ಪ್ರಶ್ನೆ ಕೇಳುವುದು ವಿರೋಧ ಪಕ್ಷದವರ ಹಕ್ಕು, ಉತ್ತರ ನೀಡುವುದು ಆಡಳಿತ ಪಕ್ಷದವರ ಜವಾಬ್ದಾರಿ. ಆಡಳಿತ ಪಕ್ಷ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆಯೇ ವಿರೋಧ ಪಕ್ಷದ ಕೊನೆಯ ಅಸ್ತ್ರವಾಗಿದೆ. ಅದನ್ನು ಮಾಡಿದ್ದೇವೆ. ಜನರ ಪರವಾಗಿ ಮಾತನಾಡಿದ್ದು ತಪ್ಪೇ?’ ಎಂದು ಕೇಳಿದರು.

‘ಅಧಿವೇಶನದ ಸಮಯ ಹಾಳಾಗಲು ಬಿಜೆಪಿ ಸರ್ಕಾರದ ವರ್ತನೆಯೇ ಕಾರಣ. ಉಭಯ ಸದನದಲ್ಲಿದ್ದವರು ಮಾರ್ಷಲ್‌ಗಳಲ್ಲ. ವಿರೋಧಪಕ್ಷಗಳ ನಾಯಕರನ್ನು ನಿಯಂತ್ರಿಸಲು ಹೊರಗಿನವರನ್ನು ಕರೆತರಲಾಗಿತ್ತು. ಗೂಂಡಾಗಳ ಮೂಲಕ ನಮ್ಮನ್ನು ನಿಯಂತ್ರಿಸುವ ಯತ್ನ ನಡೆದಿದೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು