ಶುಕ್ರವಾರ, ಮೇ 14, 2021
27 °C
ಚಂದರಗಿ ವಿರಚಿತ ಕಿರುಹೊತ್ತಿಗೆ ಬಿಡುಗಡೆ

ಹಸಿದವರಿಗೆ ನೆರವಾದ ಕಾರ್ಯ ಶ್ಲಾಘನೀಯ: ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಾಹಿತ್ಯವು ಬದುಕನ್ನು ಸೃಷ್ಟಿಸಬೇಕು. ಸಾಹಿತ್ಯ ಸಾಹಿತ್ಯವಾಗಿಯೇ ಉಳಿದರೆ ಸಮಾಜದಲ್ಲಿ ತನ್ನ ಪ್ರಸ್ತುತತೆ ಕಳೆದುಕೊಳ್ಳುತ್ತದೆ’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹೊರವಲಯದ ಲಕ್ಷ್ಮೀಟೇಕ್‌ನಲ್ಲಿರುವ ಹುಕ್ಕೇರಿ ಶಾಖಾ ಮಠದಲ್ಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ಬರೆದ ‘ಹಸಿದವರತ್ತ ನಮ್ಮ ಚಿತ್ತ’ ಕಿರುಹೊತ್ತಿಗೆಯನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹಸಿದವರತ್ತ ನಮ್ಮ ಚಿತ್ತ’ ಕೃತಿಯು ಅಪೂರ್ವ ಕೃತಿಯಾಗಿದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಕೈಗೊಂಡ ನೂರು ದಿನಗಳ ಅಭಿಯಾನವು ಪುಸ್ತಕ ರೂಪದಲ್ಲಿ ಹೊರಬಂದಿರುವುದು ಅತ್ಯಂತ ಸಮಂಜಸ ಹಾಗೂ ಸಮಯೋಚಿತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಳೆದ ವರ್ಷ ಕೊರೊನಾ ಸ್ಫೋಟಿಸಿದಾಗ ಮನೆ ಬಿಟ್ಟು ಹೊರಬರಲಾಗದಂತಹ ಭಯದ ವಾರಾವರಣವಿದ್ದಾಗ ಕ್ರಿಯಾ ಸಮಿತಿ ತಂಡವು ಆಪತ್ತನ್ನು ಮೈಮೇಲೆ ಎಳೆದುಕೊಂಡು ಸತತವಾಗಿ ನೂರು ದಿನಗಳ ಕಾಲ ಆಹಾರ ವಿತರಿಸಿ, ಹಸಿದವರಿಗೆ ನೆರವಾಗಿದ್ದು ಐತಿಹಾಸಿಕ ದಾಖಲೆಯೇ ಸರಿ. ಒಳ್ಳೆಯ ಮನಸ್ಸಿನಿಂದ ಮಾಡುವ ಯಾವುದೇ ಕೆಲಸ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಈ ಅಭಿಯಾನ ಸಾಕ್ಷಿ’ ಎಂದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ, ‘ಕ್ರಿಯಾ ಸಮಿತಿ ತಂಡವು ಕೊರೊನಾ ಅಪಾಯವನ್ನೂ ಲೆಕ್ಕಿಸದೆ ಬಡವರು, ನಿರ್ಗತಿಕರಿಗೆ ಆಹಾರ ಪದಾಋ್ಥ ತಲುಪಿಸಿದ್ದು ನಿಜಕ್ಕೂ ಉತ್ತಮ ಸೇವೆಯಾಗಿದೆ. 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ನೆರೆ ಹಾವಳಿ ಸಂದರ್ಭದಲ್ಲೂ ಸಮಿತಿಯು ಪರಿಹಾರ ಕಾರ್ಯ ಕೈಗೊಂಡಿತ್ತು’ ಎಂದು ಸ್ಮರಿಸಿದರು.

ರೈತ ಮುಖಂಡ ಕಲ್ಯಾಣರಾವ ಮುಚಳಂಬಿ ಮಾತನಾಡಿ, ‘ಹೋರಾಟಗಾರರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಶೋಕ ಚಂದರಗಿ ಹಾಗೂ ತಂಡದವರು ಈ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗಕರ್ಮಿ ಬಿ.ಎಸ್. ಗವಿಮಠ, ‘ದಾರಿ ತಪ್ಪುತ್ತಿರುವ ಇಂದಿನ ಕನ್ನಡ ಹೋರಾಟದ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ರಿಯಾ ಸಮಿತಿಯು ನಾಡು, ನುಡಿ, ಗಡಿಗಳ ವಿಷಯವಲ್ಲದೇ ಇನ್ನಿತರ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಸ್ಪಂದಿಸುತ್ತಿರುವದು ಅನುಕರಣೀಯವಾಗಿದೆ’ ಎಂದು ಶ್ಲಾಘಿಸಿದರು.

ಸಮಿತಿಯ ಕಾರ್ಯದರ್ಶಿ ಶಂಕರ ಬಾಗೇವಾಡಿ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು