ಹುಕ್ಕೇರಿ: ತಾಲ್ಲೂಕಿನ ಬಡಕುಂದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಯರನಾಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 2023ರ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇದ್ರದ ವೈದ್ಯಾಧಿಕಾರಿ ಡಾ.ರವೀಂದ್ರ ಮಾತನಾಡಿ, ಪ್ರತಿಯೊಬ್ಬ ಪ್ರಜೆಯು ಜನಸಂಖ್ಯೆ ಬಗ್ಗೆ ಅರಿತು ಒಳ್ಳೆಯ ನಿರ್ಣಯ ಕೈಗೊಳ್ಳಬೇಕು. ಎಲ್ಲರೂ ಉತ್ತಮ ಆರೋಗ್ಯ ಹೊಂದಿ ನೆಮ್ಮದಿ ಜೀವನ ಸಾಗಿಸಲು ಚಿಕ್ಕ ಕುಟುಂಬ ಹೊಂದಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಿ.ಎ.ಕರಗುಪ್ಪಿ ಮಾತನಾಡಿ, ಜನರಿಗೆ ವಿವಿಧ ರೋಗಗಳು ಬರಲು ಕಾರಣ ಮತ್ತು ಉತ್ತಮ ಆರೋಗ್ಯ ಹೊಂದಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದರು.
ಮಣಗುತ್ತಿಯಲ್ಲಿ: ಗ್ರಾಮ ಆರೋಗ್ಯ ಶಿಬಿರದಡಿ ನರೇಗಾ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ ತಾಲ್ಲೂಕಿನ ಮಣಗುತ್ತಿ ಗ್ರಾಮ ಪಂಚಾಯ್ತಿಯಲ್ಲಿ ಶುಕ್ರವಾರ ಜರುಗಿತು.
ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಜಿ.ಎ.ಕರಗುಪ್ಪಿ ‘ಆರೋಗ್ಯ ಶಿಕ್ಷಣ ನೀಡಿ’ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರತಿಜ್ಞಾವಿಧಿ ಬೋಧಿಸಿದರು. ಟಿ.ಪಿ.ಐಇಸಿ ಸಮನ್ವಯಾಧಿಕಾರಿ ಮಹಾಂತೇಶ ಬಾಗವಾನಮಠ, ಕರ್ನಾಟಕ ಆರೋಗ್ಯ ಅಭಿವೃದ್ಧಿ ಟ್ರಸ್ಟ್ (ಕೆ.ಎಚ್.ಪಿ.ಟಿ) ಸದಸ್ಯರು, ಕಾಯಕ ಬಂಧು ಮತ್ತು ಮಿತ್ರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.