ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸದ ಹೆಗಡೆಗೆ ಕಾರ್ಯಕರ್ತರ ತರಾಟೆ

‘ಚುನಾವಣೆ ಸಮೀಪಿಸುತ್ತಿದ್ದಂತೆ ಖಾನಾಪುರ–ಕಿತ್ತೂರು ನೆನಪಾದವೇ’
Published 18 ಜನವರಿ 2024, 15:52 IST
Last Updated 18 ಜನವರಿ 2024, 15:52 IST
ಅಕ್ಷರ ಗಾತ್ರ

ಖಾನಾಪುರ: ‘ಖಾನಾಪುರ-ಕಿತ್ತೂರು ವಿಧಾನಸಭಾ ಕ್ಷೇತ್ರಗಳ ಜನರ ಆಶೀರ್ವಾದದಿಂದ ಐದು ಬಾರಿ ಸಂಸದರಾಗಿ ಮತ್ತು ಒಮ್ಮೆ ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸಿರುವ ತಮಗೆ ಚುನಾವಣೆ ಸಮೀಪಿಸುತ್ತಿದ್ದಂತೆ ನಿಮಗೆ ಖಾನಾಪುರ–ಕಿತ್ತೂರು ನೆನಪಾದವೇ, ಇಷ್ಟು ದಿನ ಎಲ್ಲಿ ಮಾಯವಾಗಿದ್ರೀ ಸ್ವಾಮಿ’ ಎಂಬ ಹಲವು ಪ್ರಶ್ನೆಗಳು ಸಂಸದ ಅನಂತಕುಮಾರ ಹೆಗಡೆ ಅವರಿಗೆ ಎದುರಾದವು.

ಬುಧವಾರ ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರಿಗೆ ಸ್ಥಳೀಯ ವಕೀಲ ಚೇತನ ಮನೇರಿಕರ, ನೀಲಾವಡೆ ಗ್ರಾಮ ಪಂಚಾಯ್ತಿ ಸದಸ್ಯ ವಿನಾಯಕ ಮುತಗೇಕರ, ಪಕ್ಷದ ಹಿರಿಯ ಮುಖಂಡ ಜಯಂತ ತಿಣೈಕರ ಸೇರಿದಂತೆ ಹಲವು ಕಾರ್ಯಕರ್ತರು ಪ್ರಶ್ನೆಗಳ ಸುರಿಮಳೆ ಸುರಿಸಿದರು.

ಖಾನಾಪುರದಲ್ಲಿ ಪ್ರವಾಹ ಬಂದಾಗ, ಕೊರೊನಾ ಸಂದರ್ಭದಲ್ಲಿ ಕಿತ್ತೂರು-ಖಾನಾಪುರದ ಜನರು ಸಂಕಷ್ಟ ಅನುಭವಿಸಿದಾಗ, ಕಿತ್ತೂರಿನ ರೈತರ ಮೇಲೆ ಪೊಲೀಸರು ಹಲ್ಲೆ ನಡೆಸಿದಾಗ ನೀವು ಯಾಕೆ ಇತ್ತ ಸುಳಿಯಲಿಲ್ಲ? ಎರಡೂ ಕ್ಷೇತ್ರಗಳಲ್ಲಿ ನಿಮ್ಮಿಂದ ಯಾವುದೇ ಅಭಿವೃದ್ಧಿ ಕಾರ್ಯ ಏಕೆ ಆಗಲಿಲ್ಲ. ವರ್ಷಗಳಿಂದ ಕುಂಟುತ್ತ-ತೆವಳುತ್ತ ಸಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಸ್ಥಳೀಯ ಜನತೆ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ನಿಮಗೆ ಅರಿವಿದೆಯೇ? ವರ್ಷಗಟ್ಟಲೆ ಎರಡೂ ಕ್ಷೇತ್ರಗಳ ಜನತೆಗೆೇಕೆ ತಾವು ಮುಖ ತೋರಿಸಲಿಲ್ಲ. ನಮ್ಮ ಕ್ಷೇತ್ರದ ಹಿಂದಿನ ಕಾಂಗ್ರೆಸ್ ಶಾಸಕರು ನಿಮ್ಮ ಅನುಪಸ್ಥಿತಿಯ ಬಗ್ಗೆ ಬಹಿರಂಗ ಭಾಷಣಗಳನ್ನು ಮಾಡಿದಾಗ ನೀವೇಕೆ ಪ್ರತ್ಯುತ್ತರ ನೀಡಲಿಲ್ಲ ಎಂದು ಅವರು ಸಂಸದರನ್ನು ತರಾಟೆಗೆ ತೆಗೆದುಕೊಂಡರು.

‘ಕಿತ್ತೂರು-ಖಾನಾಪುರ ತಾಲ್ಲೂಕುಗಳ ಮತದಾರರು ತಮಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ. ಅಷ್ಟಾದರೂ ತಾವು ಈ ಭಾಗಕ್ಕೆ ಯಾವುದೇ ಹೇಳಿಕೊಳ್ಳುವ ಮಹತ್ತರವಾದ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ಕಾರಣದಿಂದಲೇ ಜನರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ. ಈಗ ನಿಮ್ಮ ಆರೋಗ್ಯವೂ ಸರಿಯಿಲ್ಲ. ಅದಕ್ಕಾಗಿ ಹೃದಯ ವೈಶಾಲ್ಯ ತೋರಿ ಮುಂಬರುವ ಲೋಕಸಭೆ ಚುನಾವಣೆಗೆ ಖಾನಾಪುರ ತಾಲ್ಲೂಕಿನ ಪಕ್ಷದ ಸ್ಥಳೀಯ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ಕೊಡಿಸುವ ಮೂಲಕ ಬೇರೆಯವರಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಇದೀಗ ಲೋಕಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ತಾವು ಇತ್ತೀಚೆಗೆ ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಲಾರಂಭಿಸಿದ್ದೀರಿ. ನಿಮ್ಮ ಕಾರ್ಯವೈಖರಿ ಬಗ್ಗೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ’ ಎಂದರು.

ಮೊದಮೊದಲು ಕಾರ್ಯಕರ್ತರ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸಿದ ಸಂಸದ ಹೆಗಡೆ, ಬಳಿಕ ಕೆಲ ಕಾರ್ಯಕರ್ತರು ಆಕ್ರೋಶದಿಂದ ಕೇಳಿದ ಪ್ರಶ್ನೆಗಳಿಗೆ ನಿರುತ್ತರರಾದರು. ಕ್ಷೇತ್ರದ ಅಭಿವೃದ್ಧಿಯ ವಿಷಯವಾಗಿ ಕೇಳಿದ ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಲು ನಿರಾಕರಿಸಿದರು. ಕೊನೆಯಲ್ಲಿ ಅವರು ಧಾರ್ಮಿಕ ವಿಷಯ, ಹಿಂದುತ್ವವಾದ, ರಾಮಮಂದಿರ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಹತ್ತು ನಿಮಿಷಗಳ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಹೊಗಳಿದರು.

ಶಾಸಕ ವಿಠ್ಠಲ ಹಲಗೇಕರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಧನಶ್ರೀ ದೇಸಾಯಿ, ಮುಖಂಡರಾದ ವಿಜಯ ಕಾಮತ, ಬಾಬುರಾವ್ ದೇಸಾಯಿ, ಗಜು ರೇಮಾಣಿ, ಸುರೇಶ ದೇಸಾಯಿ, ಸದಾನಂದ ಪಾಟೀಲ, ಪಂಡಿತ ಓಗಲೆ, ಕಿರಣ ಯಳ್ಳೂಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT