ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಿರಿಯ ನಾಗರಿಕರ ಹಿತರಕ್ಷಣೆಗೆ ಸಹಾಯವಾಣಿ

ಕುಂದುಕೊರತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಹಿರೇಮಠ ಭರವಸೆ
Last Updated 11 ಫೆಬ್ರುವರಿ 2022, 12:48 IST
ಅಕ್ಷರ ಗಾತ್ರ

ಬೆಳಗಾವಿ: ‘ಸಮಾಜದಲ್ಲಿ ನೊಂದ, ನಿರ್ಲಕ್ಷಿತ, ನಿರ್ಗತಿಕ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುವ ಹಿರಿಯ ನಾಗರಿಕರ ಹಿತರಕ್ಷಣೆಯ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಸಹಾಯವಾಣಿ ಕೇಂದ್ರ ಸ್ಥಾಪಿಸುವ ಕುರಿತು ಪರಿಶೀಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭರವಸೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಹಿರಿಯ ನಾಗರಿಕರ ಕುಂದುಕೊರತೆ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಿರಿಯ ನಾಗರಿಕರ ಸಂಘದ ಜತೆಗೂಡಿ ಸಹಾಯವಾಣಿ ಆರಂಭಿಸಲಾಗುವುದು’ ಎಂದರು.

‘ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡಿದ‌ ಬಳಿಕ ಒಂದು ವೇಳೆ ತಂದೆ-ತಾಯಂದಿರ ಪಾಲನೆ-ಪೋಷಣೆಯನ್ನು ಸರಿಯಾಗಿ ಮಾಡದಿದ್ದರೆ ಆಸ್ತಿಯನ್ನು ಮರಳಿ ಪಡೆಯಲು ಪೋಷಕರಿಗೆ ಕಾಯ್ದೆಯಲ್ಲಿ ಅವಕಾಶಗಳಿವೆ. ನೊಂದ ಪಾಲಕರು ಬಿಳಿಹಾಳೆಯ ಮೇಲೆ ದೂರು ನೀಡಿದರೂ ಸಂಬಂಧಿಸಿದ ಉಪ ವಿಭಾಗಾಧಿಕಾರಿ ಆದ್ಯತೆ ಮೇರೆಗೆ ಪ್ರಕರಣವನ್ನು ವಿಚಾರಣೆ ನಡೆಸಿ ನ್ಯಾಯ ಒದಗಿಸಲಿದ್ದಾರೆ’ ಎಂದು ತಿಳಿಸಿದರು.

‘ಆಸ್ಪತ್ರೆಗಳು ಹಾಗೂ ಇತರ ಸರ್ಕಾರಿ ಕಚೇರಿಗಳಿಗೆ ಹಿರಿಯ ನಾಗರಿಕರು ಬಂದಾಗ ಅವರ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಿಕೊಡಬೇಕು. ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸೇವಾ ಕೌಂಟರ್ ಆರಂಭಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಲಾಗುವುದು’ ಎಂದು ಹೇಳಿದರು.

‘ಬಿಮ್ಸ್ ಮತ್ತು ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಕಲ್ಪಿಸಬೇಕು. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ನೀಡಲಾಗಿರುವ ಗುರುತಿನ ಚೀಟಿಗಳನ್ನು ಕೂಡ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು’ ಎಂದು ತಿಳಿಸಿದರು.

‘ನಿರ್ಗತಿಕ ಹಿರಿಯ‌ ನಾಗರಿಕರಿಗೆ ಆಶ್ರಯ ಒದಗಿಸುವುದು; ದೌರ್ಜನ್ಯಕ್ಕೆ ಒಳಗಾದವರ ರಕ್ಷಣೆ; ಕಾನೂನು ನೆರವು ಸೇರಿದಂತೆ ವಿವಿಧ ಬಗೆಯ ನೆರವು ನೀಡುವ ಕೆಲಸವನ್ನು ಸದ್ಯದ ಸಹಾಯವಾಣಿ (14567) ಮೂಲಕ ಮಾಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕೋರಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ, ಹಿರಿಯ ನಾಗರಿಕರಾದ ಮಲ್ಲೇಶಪ್ಪ ಚೌಗಲೆ, ಸುರೇಶ ಉರಬಿನಹಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬ್ಯಾಂಕ್ ಖಾತೆಗೆ...

ಸಾಮಾಜಿಕ ಭದ್ರತಾ ಪಿಂಚಣಿ ಸೌಲಭ್ಯ ಪಡೆಯುತ್ತಿರುವವರ ಅನುಕೂಲಕ್ಕಾಗಿ ಸರ್ಕಾರ ಹೊಸ ತಂತ್ರಜ್ಞಾನ ವ್ಯವಸ್ಥೆ ಮಾಡಿದೆ. ಆ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ.

– ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT