ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಣ್ಣ ಪ್ರತಿಮೆ ಸ್ಥಾಪನೆಗೆ ಅಡ್ಡಿಪಡಿಸಿದರೆ ಹೋರಾಟ : ಭೀಮಾಶಂಕರ ಪಾಟೀಲ ಎಚ್ಚರಿಕೆ

Last Updated 27 ಆಗಸ್ಟ್ 2018, 10:16 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಸ್ಥಾಪನೆಗೆ ಅವಕಾಶ ಸಿಗದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಎಚ್ಚರಿಕೆ ನೀಡಿದರು.

‘ಕನ್ನಡ ಪ್ರೇಮಿಗಳು ಅಲ್ಲಿ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ. ಅವರಿಗೆ ಮರಾಠಿ ಸಂಘಟನೆಯ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಜಿಲ್ಲಾಡಳಿತ ಇತ್ತ ಗಮನಹರಿಸಬೇಕು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಕನ್ನಡದ ನೆಲದಲ್ಲಿಯೇ ಚನ್ನಮ್ಮ, ಸಂಗೊಳ್ಳಿರಾಯಣ್ಣ ಪ್ರತಿಮೆ ಸ್ಥಾಪನೆಗೆ ಅಡ್ಡಿಯಾಗುತ್ತದೆ ಎನ್ನುವುದಾದರೆ, ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ನಾವು ಬಿಡಬೇಕೇಕೆ? ಸಮಸ್ಯೆ ಪರಿಹರಿಸದಿದ್ದಲ್ಲಿ ಸಂಘಟನೆಯಿಂದಲೇ ಅಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಬೇಕಾಗುತ್ತದೆ. ಆಗ ಆಗಬಹುದಾದ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೇರು ಸಮೇತ ಕಿತ್ತು ಹಾಕುವುದು ಕನ್ನಡ ಸಂಘಟನೆಗಳ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ರಾಜ್ಯ ವಿಭಜನೆಯ ದನಿಗಳು ಕೇಳಿಬರುತ್ತಿರುವುದು ವಿಷಾದನೀಯ. ಪ್ರತ್ಯೇಕ ರಾಜ್ಯ ಅಭಿವೃದ್ಧಿಗಾಗಿ ಬೇಕೋ ಅಥವಾ ಅಧಿಕಾರಕ್ಕೋ ಎನ್ನುವುದನ್ನು ಹೋರಾಟಗಾರರು ಸ್ಪಷ್ಟಪಡಿಸಬೇಕು. ಅಧಿಕಾರಿದಲ್ಲಿ ಇದ್ದಾಗ ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳದೇ, ಈಗ ಮಾತನಾಡುತ್ತಿರುವುದು ಸರಿಯಲ್ಲ. ಅಖಂಡ ಕರ್ನಾಟಕ ಒಡೆಯುವ ಹುನ್ನಾರ ನಡೆಸುವುದು ಖಂಡನೀಯ. ಜನಪ್ರತಿನಿಧಿಗಳು, ಅಭಿವೃದ್ಧಿಗೆ ಒತ್ತು ಕೊಡದೇ ಕುಟುಂಬ ರಾಜಕಾರಣ ಮಾಡಿದರು. ಇದರಿಂದ, ಈ ಭಾಗ ಹಿಂದುಳಿದಿದೆ’ ಎಂದು ಆರೋಪಿಸಿದರು.

‘ಬೆಳಗಾವಿ ಕರ್ನಾಟಕದ ಆಸ್ತಿ. ಅದನ್ನು ಯಾರಿಗೋ ಅಡವಿಡುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬಾರದು. ಅಖಂಡ ಕರ್ನಾಟಕದ ಉಳಿವಿಗಾಗಿ ಸಂಕಲ್ಪ ಕಾರ್ಯಕ್ರಮಗಳನ್ನು ಬೀದರ್‌ನಿಂದ ಹಮ್ಮಿಕೊಳ್ಳಲಾಗುವುದು. ಪ್ರತ್ಯೇಕ ರಾಜ್ಯದ ಪರ ಹೋರಾಟಕ್ಕೆ ಬೆಂಬಲವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಗಡಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಪ್ರಮುಖ ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿ ಮುಖಂಡರಾದ ಉಮೇಶ್ ಕತ್ತಿ, ಬಿ. ಶ್ರೀರಾಮುಲು ಹಾಗೂ ಎ.ಎಸ್. ಪಾಟೀಲ ನಡಹಳ್ಳಿ ಮೈಯಲ್ಲಿ ಕನ್ನಡದ ರಕ್ತ ಹರಿಯುತ್ತಿದ್ದರೆ, ಅವರು ರಾಜ್ಯ ವಿಭಜನೆ ಬಗ್ಗೆ ಮಾತನಾಡಬಾರದಿತ್ತು. ಸ್ವಾರ್ಥಕ್ಕಾಗಿ ಅವರು ಒಡಕಿನ ದನಿ ಎತ್ತುತ್ತಿದ್ದಾರೆ. ರಾಷ್ಟ್ರೀಯತೆಯನ್ನು ಹೇರಿ ಕನ್ನಡಿಗರ ಮನಸ್ಸು ಒಡೆಯುವುದು ಸರಿಯಲ್ಲ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಸಂಗೋಡಿ, ಸುನೀಲ್ ಪಾಟೀಲ, ಪ್ರವೀಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT