ಶುಕ್ರವಾರ, ಜನವರಿ 15, 2021
21 °C

ಎಲ್ಲಮ್ಮ ದೇಗುಲ ಆವರಣದಲ್ಲಿ ಕಟ್ಟಡ: ಹೈಕೋರ್ಟ್ ಶೋಕಾಸ್ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಳಗಾವಿ ಜಿಲ್ಲೆ ಸವದತ್ತಿಯ ರೇಣುಕಾ ಎಲ್ಲಮ್ಮ ದೇವಿ ದೇವಾಲಯದ‌ ಆವರಣದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ ಸಂಬಂಧ ದೇವಸ್ಥಾನ‌ದ ಕಾರ್ಯ ನಿರ್ವಹಣಾಧಿಕಾರಿಗೆ ಹೈಕೋರ್ಟ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಬೈಲಹೊಂಗಲದ ಮಹೇಂದ್ರಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ,‌‌ ‘ಕಟ್ಟಡಗಳ ನಿರ್ಮಾಣಕ್ಕೆ ಅ.12ರಂದು ತಡೆಯಾಜ್ಞೆ ನೀಡಿದ್ದರೂ ಕಾಮಗಾರಿ ಮುಂದುವರಿಸಲಾಗಿದೆ. ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಬಾರದೇಕೆ ಎನ್ನುವ ಬಗ್ಗೆ ವಿವರಣೆ ನೀಡಬೇಕು’ ಎಂದು ತಿಳಿಸಿದೆ.

‘ಕಾಮಗಾರಿ ನಡೆಸಿಲ್ಲ ಎಂಬುದಾಗಿ ಕಾರ್ಯ ನಿರ್ವಹಣಾಧಿಕಾರಿ ಹೇಳುತ್ತಿದ್ದಾರೆ. ಹೀಗಾಗಿ, ತಹಶೀಲ್ದಾರ್ ದರ್ಜೆಯ ಅಧಿಕಾರಿಯಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಬೆಳಗಾವಿ ಜಿಲ್ಲಾಧಿಕಾರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು 2021ರ ಜ.18ಕ್ಕೆ ಮುಂದೂಡಿತು.

ಕಾಮಗಾರಿ ನಡೆಯುತ್ತಿರುವ ಕುರಿತ ಫೋಟೊಗಳನ್ನು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಕಾರ್ಯನಿರ್ವಹಣಾಧಿಕಾರಿ ಪರ ವಕೀಲರು ಇದಕ್ಕೆ ಆಕ್ಷೇಪಿಸಿ, ಇದನ್ನು ಪ್ರಮಾಣೀಕರಿಸಿ ಪ್ರಮಾಣಪತ್ರ ಸಹ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಪುರಾತನವಾದ ಈ ದೇವಾಲಯ ಪುರಾತತ್ವ ಇಲಾಖೆ ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ನಿಯಮದಂತೆ 100 ಮೀಟರ್ ಸುತ್ತಳತೆಯಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಆದರೂ, ನಿಯಮಾವಳಿ ಉಲ್ಲಂಘಿಸಿ ಅಕ್ರಮ ಕಟ್ಟಡ ನಿರ್ಮಿಸಲಾಗುತ್ತಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.