ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಇಲಾಖೆ ಡಮ್ಮಿ ಮಾಡಿದ್ದ ಸಿದ್ದರಾಮಯ್ಯ ಪ್ರಮಾಣಪತ್ರ ಬೇಕಿಲ್ಲ: ಆರಗ ವಾಗ್ದಾಳಿ

Last Updated 11 ಏಪ್ರಿಲ್ 2022, 16:01 IST
ಅಕ್ಷರ ಗಾತ್ರ

ಬೆಳಗಾವಿ: ‘ಮುಖ್ಯಮಂತ್ರಿಯಾಗಿದ್ದಾಗ ಗೃಹ ಇಲಾಖೆಯನ್ನು ಡಮ್ಮಿ ಮಾಡಿದ್ದ ಸಿದ್ದರಾಮಯ್ಯ ಅವರಿಂದ ಪ್ರಮಾಣಪತ್ರದ ಅಗತ್ಯ ನನಗಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ನಾನು ಅಸಮರ್ಥ ಎನ್ನಲು ಅವರ‍್ಯಾರು?’ ಎಂದು ಆಕ್ರೋಶದಿಂದ ಕೇಳಿದರು.

‘ಅವರು ಇಡೀ ಪೊಲೀಸ್ ಇಲಾಖೆಯನ್ನು ನಿವೃತ್ತ ಅಧಿಕಾರಿಗೆ ಕೊಟ್ಟಿದ್ದರು. ಗೃಹ ಸಚಿವರು–ಅಧಿಕಾರಿಗಳಿಗೆ ಬೆಲೆ ಇಲ್ಲದಂತೆ ಮಾಡಿದ್ದರು. ಅವರ ಕಾಲದಲ್ಲಿ ಪೊಲೀಸರು ಧರಣಿ ನಡೆಸಿದ್ದರು. ಮೂವರು ಆತ್ಮಹತ್ಯೆ ಮಾಡಿಕೊಂಡರು. ವರ್ಗಾವಣೆಗೆ ಇಂತಿಷ್ಟು ಸಂಗ್ರಹಿಸಲು ಬ್ರೋಕರ್‌ಗಳನ್ನು ಇಟ್ಟುಕೊಂಡಿದ್ದರು. ನನ್ನ ಕಾಲದಲ್ಲಿ ಇಂತಹ ಘಟನೆಗಳಾಗಿಲ್ಲ. ಅವರು ನನಗೆ ಪ್ರಮಾಣಪತ್ರ ಕೊಡ್ತಾರಾ?’ ಎಂದು ಕೇಳಿದರು.

‘ಸರಳವಾಗಿ ಬದುಕುತ್ತಿದ್ದೇನೆ. ಅದಕ್ಕೆ ಸಲುಗೆ ತೆಗೆದುಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತ‍ಪಡಿಸಿದರು.

‘ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿ ಹಲವರ ಕೊಲೆಗೆ ಕಾರಣವಾದರು. ಯಾರು ಅಸಮರ್ಥರು? ಚಿತ್ರನಟ ರಾಜಕುಮಾರ್‌ ಸಾವಿಗೀಡಾದಾಗ ಎಷ್ಟು ಜನ ಸತ್ತರು ಗೊತ್ತಾ? ಪುನೀತ್ ರಾಜ್‍ಕುಮಾರ್ ನಿಧನವಾದಾಗ ನಾವು ಹೇಗೆ ನಿರ್ವಹಿಸಿದೆವು? ಯಾವುದೇ ಅಹಿತಕರ ಘಟನೆಗಳು ಆಗಿಲ್ಲ. ರಾತ್ರಿಯೆಲ್ಲಾ ಅಲ್ಲೇ ಇದ್ದು ಕೆಲಸ ಮಾಡಿದ್ದೇವೆ. ನನ್ನ ಬದ್ಧತೆ ಬಗ್ಗೆ ಸಿದ್ದರಾಮಯ್ಯ ಪ್ರಶ್ನಿಸಬೇಕಿಲ್ಲ’ ಎಂದು ತಿರುಗೇಟು ನೀಡಿದರು.

‘ಅವರು, ಆರ್‌ಎಸ್ಎಸ್‌ ಬಗ್ಗೆ ‌ಮಾತನಾಡದಿದ್ದರೆ ತಿಂದದ್ದು ಜೀರ್ಣವಾಗುವುದಿಲ್ಲ ಅಧಿಕಾರ ಸಿಕ್ಕರೆ ಸಾಕು, ದೇಶ ಹಾಳಾಗಿ ಹೋಗಲಿ ಎಂದು ಕಾಂಗ್ರೆಸ್‌ನವರಂತೆ ಆರ್‌ಎಸ್‌ಎಸ್‌ ಆಲೋಚಿಸುವುದಿಲ್ಲ’ ಎಂದರು.

‘ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗುತ್ತದೆ. ಚುನಾವಣೆ ಸಮೀಪಿಸಿದ್ದರಿಂದ ಕಾಂಗ್ರೆಸ್‌ನವರು ಪ್ರಚೋದಿಸುತ್ತಾರೆ. ಯಾರೂ ಪ್ರಚೋದನೆಗೆ ಒಳಗಾಗಬಾರದು. ಎಲ್ಲರೂ ಸೌಹಾರ್ದದಿಂದ ಇರಬೇಕು. ಸಂವಿಧಾನ ಕಾಪಾಡುವವರ ಜೊತೆ ಸರ್ಕಾರ ಇರಲಿದೆ’ ಎಂದು ಪ್ರತಿಕ್ರಿಯಿಸಿದರು.

‘ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ನನ್ನ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ನಾನು ಮತ್ತಿ‌ನಲ್ಲಿ ಮಾತನಾಡಿದ್ದೇನೆ ಎಂದಿದ್ದಾರೆ. ಅವರ ಮಾತುಗಳನ್ನು ನೋಡಿದರೆ ಅವರು ಸಹಜವಾಗಿಲ್ಲ ಎನಿಸುತ್ತದೆ. ನನ್ನ ಬಗ್ಗೆ ಟೀಕಿಸಲು ನಾಚಿಕೆಯಾಗಬೇಕು’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT