ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್‌ಸಿಯು ಘಟನೆಗೂ ನನಗೂ ಸಂಬಂಧವಿಲ್ಲ’

ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ
Last Updated 3 ಅಕ್ಟೋಬರ್ 2018, 9:13 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಈಚೆಗೆ ಕೆಲವರು ನಡೆಸಿದ ದಾಂದಲೆಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಇಲ್ಲಿ ಹೇಳಿದರು.

ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಹಳಷ್ಟು ವಿಷಯ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಲು ಸಾರ್ವಜನಿಕರು ಅಲ್ಲಿಗೆ ಹೋಗಿದ್ದರು. ಆದರೆ, ದಾಂದಲೆ ನಡೆಯಬಾರದಿತ್ತು’ ಎಂದು ಪ್ರತಿಕ್ರಿಯಿಸಿದರು.

‘ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ಅಲ್ಲಿ ಕೇಸರೀಕರಣ ಮಾಡಲು ಹೊರಟ್ಟಿದ್ದಾರೆ. ಅವರು ಮಾಡಿರುವ ಅವ್ಯವಹಾರಗಳ ವಿರುದ್ಧ ಹೋರಾಟ ನಡೆಸಲಾಗುವುದು; ಬಯಲಿಗೆ ಎಳೆಯಲಾಗುವುದು’ ಎಂದು ತಿಳಿಸಿದರು.

‘ಅವರು ಒಂದೂವರೆ ವರ್ಷದಿಂದ ಸಿಂಡಿಕೇಟ್ ಸದಸ್ಯರಾಗಿದ್ದಾರೆ. ಕಂಪ್ಯೂಟರ್ ಖರೀದಿಯಲ್ಲಿ ಹಗರಣ ಮಾಡಿದ್ದಾರೆ. ನೇಮಕಾತಿಯಲ್ಲಿ ಅಕ್ರಮ ಎಸಗಿದ್ದಾರೆ. ಅದು ನಮ್ಮ ಗಮನಕ್ಕೆ ಬಂದಿದೆ. ಎಬಿವಿಪಿ ಹಾಗೂ ಬಿಜೆಪಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರ ವಿರುದ್ಧ ಬಹಳಷ್ಟು ಮಂದಿ ಅಸಮಾಧಾನಗೊಂಡಿದ್ದಾರೆ’ ಎಂದು ಆರೋಪಿಸಿದರು.

ಈ ಸಂಸದರ ವ್ಯಾಪ್ತಿಯಲ್ಲ:‘ಸಂಸದ ಸುರೇಶ ಅಂಗಡಿ ನನ್ನ ವಿರುದ್ಧ ಹತ್ತು ವರ್ಷಗಳಿಂದಲೂ ಆರೋಪಿಸುತ್ತಲೇ ಬಂದಿದ್ದಾರೆ. ಅದು ಹೊಸತೇನಲ್ಲ. ಹಾಗೆ ನೋಡಿದರೆ, ವಿಶ್ವವಿದ್ಯಾಲಯ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದೇ ಇಲ್ಲ. ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಅವರ ವ್ಯಾಪ್ತಿಗೆ ಬರುತ್ತದೆ. ಹೀಗಿರುವಾಗ, ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸುವ ಕಾರ್ಯಕ್ರಮಕ್ಕೆ ಅವರು ನನಗೆ ಕರೆ ಮಾಡಿ ಆಹ್ವಾನಿಸುವ ಅವಶ್ಯಕತೆ ಏನಿದೆ?’ ಎಂದು ಪ್ರಶ್ನಿಸಿದರು.

‘ಕುಲಪತಿ ಪ್ರೊ.ಎಸ್.ಬಿ. ಹೊಸಮನಿ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ದೂರು ನೀಡಿಲ್ಲ. ಹೀಗಿರುವಾಗ ನಾನು ಪೊಲೀಸರ ಮೇಲೆ ಒತ್ತಡ ಹಾಕುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟವೇನಿದ್ದರೂ ಕೇಸರೀಕರಣ ಮಾಡುತ್ತಿರುವ ರಾಜು ಚಿಕ್ಕನಗೌಡರ ವಿರುದ್ಧ ಮಾತ್ರವೇ ಹೊರತು, ಕುಲಪತಿಯೊಂದಿಗಲ್ಲ’ ಎಂದು ಸ್ಪಷ್ಟಪಡಿಸಿದರು.

ನಾವೂ ಆರಂಭಿಸಬೇಕಾಗುತ್ತದೆ:‘ವಿಶ್ವವಿದ್ಯಾಲಯದಲ್ಲಿ ಅಕ್ರಮ, ಅವ್ಯವಹಾರಗಳು ನಡೆದಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದುಕೊಂಡು ಹತ್ತು ವರ್ಷದಿಂದ ಅಲ್ಲಿನ ವಿದ್ಯಮಾನಗಳಿಂದ ದೂರವಾಗಿದ್ದೆ. ಆದರೆ, ಬೇರೊಬ್ಬರು ರಾಜಕೀಯ ಮಾಡುವಾಗ ನಾವೂ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಶಾಸಕರೊಬ್ಬರು ಮುಖ್ಯ ಎಂಜಿನಿಯರ್, ಪೊಲೀಸ್ ಅಧಿಕಾರಿ ಸೇರಿದಂತೆ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ್ದರು. ಸಂಸದರು ಆಗೇಕೆ ಪ್ರಶ್ನಿಸಲಿಲ್ಲ?’ ಎಂದು ತಿರುಗೇಟು ನೀಡಿದರು.

‘ಗೋಕಾಕದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ ಎಂದು ಸಂಸದರು ಹೇಳುವುದು ಸರಿಯಲ್ಲ. ಅಧಿಕಾರಿಗಳನ್ನು ಕೇಳುವುದನ್ನು ಬಿಟ್ಟು ನಮ್ಮ ಹೆಸರು ತೆಗೆದುಕೊಂಡು ವಿತಂಡ ವಾದ ಮಾಡುವುದು ಸೂಕ್ತವಲ್ಲ’ ಎಂದರು.

**

ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯನ್ನು ಎಬಿವಿಪಿ ಕಾರ್ಯಕರ್ತರು ವೈಭವೀಕರಿಸುತ್ತಿದ್ದಾರೆ. ಕೇವಲ 35 ಮಂದಿ ಹೋರಾಟ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
-ಸತೀಶ ಜಾರಕಿಹೊಳಿ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT