ಮಂಗಳವಾರ, ಫೆಬ್ರವರಿ 7, 2023
26 °C

ಪಕ್ಷಕ್ಕೆ ಹಾನಿ ಆಗಬಾರದೆಂದು ಹೇಳಿಕೆ ಹಿಂದಕ್ಕೆ ಪಡೆದಿದ್ದೇನೆ: ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಹಿಂದೂ’ ಪದದ ಕುರಿತು   ನಾನು ನೀಡಿದ್ದ ಹೇಳಿಕೆ ಹಿಂದಕ್ಕೆ ಪಡೆಯಲು ಸರ್ಕಾರ ಅಥವಾ ಯಾರ ಒತ್ತಡವೂ ಇರಲಿಲ್ಲ. ಪಕ್ಷಕ್ಕೆ ಹಾನಿ  ಆಗಬಾರದೆಂದು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ, ನಾನೇ ಈ ನಿರ್ಣಯ ಕೈಗೊಂಡಿದ್ದೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ನೀಡಿದ್ದ ಹೇಳಿಕೆಯನ್ನು ಬೇರೆ ರೀತಿ ತಿರುಚಿ ಹೇಳುವ ಕೆಲಸವಾಯಿತು. ಹಾಗಾಗಿ ಇದನ್ನು ಹಿಂದಕ್ಕೆ ಪಡೆದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ನಿಪ್ಪಾಣಿಯಲ್ಲಿ ನಡೆದಿದ್ದು ಖಾಸಗಿ ಕಾರ್ಯಕ್ರಮ. ಇದೂ ನನ್ನ ವೈಯಕ್ತಿಕ ಹೇಳಿಕೆ. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಆದರೆ, ನನ್ನ ಹೇಳಿಕೆಯಿಂದ ಪಕ್ಷಕ್ಕೆ ಹಾನಿ  ಆಗಬಾರದು ಎಂಬುದು ನನ್ನ ಉದ್ದೇಶ’ ಎಂದರು.

‘ಈ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿ, ನನ್ನ ಮೇಲೆಯೇ ಆರೋಪ ಬಂತು. ಆದರೆ, ನನ್ನ ಸಿದ್ಧಾಂತದಿಂದ ಹಿಂದೆ ಸರಿದಿಲ್ಲ. ಮುಂದಿನ ದಿನಗಳಲ್ಲಿ ನನ್ನ ಹೇಳಿಕೆ ಸಾಬೀತುಗೊಳಿಸುವ ಯತ್ನ ಮುಂದುವರಿಸುತ್ತೇನೆ. ಪೂರಕ ದಾಖಲೆಗಳೊಂದಿಗೆ ವಿವಿಧ ವೇದಿಕೆಗಳ ಮೇಲೆ ಇದರ ಬಗ್ಗೆ ತಿಳಿಸುತ್ತೇನೆ. ನೈಜ ಸ್ಥಿತಿ ವಿವರಿಸದೆ, ಅವಾಂತರ ಸೃಷ್ಟಿಸಿದವರ ವಿರುದ್ಧ ತನಿಖೆಗಾಗಿ ಸಮಿತಿ ರಚಿಸಬೇಕು. ಈ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಸರ್ಕಾರದ ಮೇಲೆ ಒತ್ತಡ ತರುತ್ತೇವೆ’ ಎಂದು ಹೇಳಿದರು.

‘ಸತೀಶ ಜಾರಕಿಹೊಳಿ ದುಡುಕುವವರಲ್ಲ. ಕಾಂಗ್ರೆಸ್ ಸಹವಾಸದಿಂದ ಅವರಿಗೆ ಹೀಗಾಗಿದೆ’ ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಎಂದಿಗೂ ದುಡುಕಿಲ್ಲ. ನನ್ನ ಹೇಳಿಕೆಯನ್ನೇ ಸೂಕ್ಷ್ಮವಾಗಿ ಗಮನಿಸಿ ಎಂದಿದ್ದೇನೆ. ಆದರೆ, ಸರ್ಕಾರದ ಮಟ್ಟದಲ್ಲಿ ಮತ್ತು  ಸಮಾಜದಲ್ಲಿ ಗೊಂದಲವಾಗಬಾರದೆಂದು ಹೇಳಿಕೆ ವಾಪಸ್ ಪಡಿದಿದ್ದೇನೆ’ ಎಂದು ಉತ್ತರಿಸಿದರು.

‘ನಿಮ್ಮ ನಡೆ ಯಾರೊಂದಿಗೆ?’ ಎಂಬ ಪ್ರಶ್ನೆಗೆ, ‘ಎಲ್ಲರೊಂದಿಗೆ ನಮ್ಮ ನಡೆ’ ಎಂದು ಉತ್ತರಿಸಿದರು.

ಮುಖಂಡರಾದ ಲಕ್ಷ್ಮಣರಾವ್‌ ಚಿಂಗಳೆ, ವಿನಯ ನಾವಲಗಟ್ಟಿ, ವೀರಕುಮಾರ್‌ ಪಾಟೀಲ, ಶಾಸಕ ಗಣೇಶ ಹುಕ್ಕೇರಿ ಇತರರಿದ್ದರು.

‘ಇದನ್ನು ಇಲ್ಲಿಯೇ ಮುಗಿಸಿಬಿಡಿ’

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಸತೀಶ ಜಾರಕಿಹೊಳಿ ತಮ್ಮ ಹೇಳಿಕೆ ವಾಪಸ್ ಪಡೆದು, ಈ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಎಲ್ಲ ವಿಚಾರಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಈ ವಿವಾದವನ್ನು ಇಲ್ಲಿಯೇ ಮುಗಿಸಿಬಿಡಿ’ ಎಂದು ಕೈ ಮುಗಿದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು