ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಕರೆತರುವೆ: ರಮೇಶ ಜಾರಕಿಹೊಳಿ

ಗ್ರಾ.ಪಂ. ಸದಸ್ಯರನ್ನು ಸನ್ಮಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ
Last Updated 14 ಫೆಬ್ರುವರಿ 2021, 13:55 IST
ಅಕ್ಷರ ಗಾತ್ರ

ಬೆಳಗಾವಿ: ‘ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಯಾರ ವಿರುದ್ಧವೂ ನಾವು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಬೇರೆಯವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿಲ್ಲ. ಪಕ್ಷ ಗೆಲ್ಲಿಸುವುದು ನಮ್ಮ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ನವರನ್ನು ಬಿಜೆಪಿಗೆ ಕರೆತರುವುದು ನನ್ನ ಜವಾಬ್ದಾರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಬಿಜೆಪಿ ಗ್ರಾಮೀಣ ಮಂಡಲದಿಂದ ನಗರದ ಸಿಪಿಇಡಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಮೀಣ ಮತಕ್ಷೇತ್ರದ ಗ್ರಾಮ ಪಂಚಾಯ್ತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜಕಾರಣದಲ್ಲಿ ಬಹಳ ಅನುಭವ ಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹುಷಾರಾಗಿ ಮಾತಾಡಬೇಕು. ತಲೆಕೆಡಿಸಿಕೊಂಡು ಮಾತನಾಡಿದರೆ ಕಷ್ಟ ಆಗುತ್ತದೆ. ಮಹಿಳೆಯರಿಗೆ ಹೆಚ್ಚಿನ ಗೌರವ ಕೊಡುತ್ತೇವೆ. ಕೆಟ್ಟದಾಗಿ ಮಾತನಾಡುವುದಿಲ್ಲ. ಅವರನ್ನು ಸೋಲಿಸುವುದೊಂದೇ ನಮ್ಮ ಗುರಿ. ರಾಜಕೀಯವಾಗಿ ಮಾತ್ರ ವಿರೋಧಿಸುತ್ತೇವೆ’ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೆಸರು ಪ್ರಸ್ತಾಪಿಸದೆ ವಾಗ್ಬಾಣ ಪ್ರಯೋಗಿಸಿದರು.

ಮಾದರಿಯಾಗಿಸುವೆ:

‘ಮುಂದಿನ ದಿನಗಳಲ್ಲಿ ಗ್ರಾಮೀನ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಮಾದರಿಯಾಗಿಸುವ ದೃಢ ಸಂಕಲ್ಪ ಮಾಡಿದ್ದೇನೆ. ಗ್ರಾ.ಪಂ. ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಬೇಕು. ಸೋತವರು, ಗೆದ್ದವರು ನಮ್ಮವರೆ ಎಂಬ ಪರಂಪರೆ ಗೋಕಾಕ ಹಾಗೂ ಅರಭಾವಿ ಕ್ಷೇತ್ರದಲ್ಲಿ ಬೆಳೆದುಕೊಂಡು ಬಂದಿದ್ದೇವೆ. ಇದು ಗ್ರಾಮೀಣಲ್ಲೂ ಇರಬೇಕು’ ಎಂದು ಪಕ್ಷದವರಿಗೆ ತಿಳಿಸಿದರು.

‘ಕಳೆದ ಚುನಾವಣೆಯಲ್ಲಿ ಬಹಳಷ್ಟು ಮಂದಿ ನನ್ನನ್ನು ನಂಬಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಅವರೆಲ್ಲರನ್ನು ಮತ್ತೆ ಬಿಜೆಪಿಗೆ ಕರೆ ತರುತ್ತೇನೆ. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ನನ್ನವರು. ಮುಂದಿನ ಚುನಾವಣೆಯಲ್ಲಿ 60ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು. ಐವತ್ತು ಸಾವಿರಕ್ಕಿಂತ ಕಡಿಮೆ ಅಂತರದಲ್ಲಿ ಬಿಜೆಪಿ ಗೆದ್ದರೆ ಅದು ಸೋಲು ಎಂದುಕೊಳ್ಳುತ್ತೇನೆ’ ಎಂದು ಹೇಳಿದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಗೋಕಾಕಕ್ಕಿಂತ ಹೆಚ್ಚಿನ ಅನುದಾನ ಗ್ರಾಮೀಣ ಕ್ಷೇತ್ರಕ್ಕೆ ನೀಡಬೇಕು. ಹಿಂದುಳಿದ ಕ್ಷೇತ್ರವನ್ನು ಬಲಪಡಿಸಬೇಕು’ ಎಂದು ಸಚಿವರನ್ನು ಕೋರಿದರು.

ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ, ‘ಮುಂದಿನ ಚುನಾವಣೆಯಲ್ಲಿ ಗ್ರಾಮೀಣದಲ್ಲಿ ಬಿಜೆಪಿ ಗೆಲ್ಲಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಕ್ಷದ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮತ್ತು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಯುವರಾಜ ಜಾಧವ ಮಾತನಾಡಿದರು. ಮುಖಂಡರಾದ ರಂಜನಾ ಕೋಲಕಾರ, ವೀರಭದ್ರ ಪೂಜಾರಿ, ಮನೋಹರ ಕಡೋಲಕರ, ಕಿರಣ ಜಾಧವ, ಶಿವಾಜಿ ಸುಂಠಕರ, ಪೃಥ್ವಿ ಸಿಂಗ್ ಇದ್ದರು.

‘ಜಾರಕಿಹೊಳಿ ಹುಲಿಯೊಂದಿಗೆ ಇರಿ’

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ರಮೇಶ ಜಾರಕಿಹೊಳಿ ಹೇಳಿದ್ದನ್ನು ಮಾಡಿ ತೋರಿಸುತ್ತಾರೆ. ಎಲ್ಲರೂ ಜಾರಕಿಹೊಳಿ ಎಂಬ ಹುಲಿಯೊಂದಿಗೆ ಇರಬೇಕು. ಕುರಿ ಜೊತೆಗೆ ಇರಬಾರದು. ಗ್ರಾಮೀಣ ಶಾಸಕಿ ಕೇವಲ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಇನ್ನೆರಡು ವರ್ಷ ಮಾಡಲಿ. ನಾವೇನು ಎನ್ನುವುದನ್ನು 2023ರಲ್ಲಿ ತೋರಿಸುತ್ತೇವೆ’ ಎಂದು ಹೇಳಿದರು.

‘ರಮೇಶ ಜಾರಕಿಹೊಳಿ ಬಗ್ಗೆ ಜಾಸ್ತಿ ಮಾತನಾಡಿದರೆ ಶಾಸಕನಾಗುವುದಕ್ಕೆ ಹೊಗಳುತ್ತಿದ್ದಾನೆ ಎನ್ನುತ್ತಾರೆ. ನಾನು ಸದ್ಯಕ್ಕೆ ಶಾಸಕನಾಗುವ ಕನಸು ಬಿಟ್ಟಿದ್ದೇನೆ. ಹೀಗೆ ಹೇಳಿದರೆ ಧನಂಜಯ, ಶಿವಾಜಿ ಸುಂಠಕರ ಖುಷಿ ಪಡುತ್ತಾರೆ. ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಡಿ ಎಂದು ಜಾರಕಿಹೊಳಿ ಕಾಲು ಹಿಡಿಯಲು ಸಿದ್ಧರಿದ್ದೇವೆ’ ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕೃಷಿ ಕಾಯ್ದೆ ವಿರೋಧಿಸಿ ಹೋರಾಡುತ್ತಿರುವವರಲ್ಲಿ ನಿಜವಾದ ರೈತರು ಯಾರೂ ಇಲ್ಲ.
ಅನಿಲ ಬೆನಕೆ, ಶಾಸಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT