ಸೋಮವಾರ, ಆಗಸ್ಟ್ 15, 2022
24 °C
ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆ

ಜನರಿಗಾಗಿ ಸಂಕಷ್ಟ, ಸಂಘರ್ಷ ಸಹಿಸಿಕೊಳ್ಳುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಒಳ್ಳೆಯ ಕೆಲಸ ಮಾಡುವವರಿಗೆ ನೂರೆಂಟು ವಿಘ್ನಗಳು ಸಹಜ. ನಾನು ಕ್ಷೇತ್ರದ ಜನರಿಗಾಗಿ ದುಡಿಯುತ್ತಿರುವುದನ್ನು ಸಹಿಸದವರಿಂದ ನಿತ್ಯ ಸಂಕಷ್ಟ ಹಾಗೂ ಸಂಘರ್ಷಗಳು ಎದುರಾಗುತ್ತಿದೆ. ಆದರೆ, ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇನೆ. ಮುಂದೆಯೂ ಎಷ್ಟೇ ಕಷ್ಟ ಬಂದರೂ ಅವುಗಳನ್ನು ಜನರಿಗಾಗಿ ಎದುರಿಸಲು ಸಿದ್ಧವಿದ್ದೇನೆ’ ಎಂದು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ಸುಳೇಭಾವಿಯಲ್ಲಿ ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಗುರುವಾರ ಪೂಜೆ ಸಲ್ಲಿಸಿದ ಬಳಿಕ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚುವರಿಯಾಗಿ ₹ 50 ಲಕ್ಷ ವೆಚ್ಚದಲ್ಲಿ 4 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಶಾಸಕಿಯಾದ ನಂತರವೂ ನನಗೆ ಇಷ್ಟೊಂದು ಸಂಕಷ್ಟ ಎದುರಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನಿರಾತಂಕವಾಗಿ ಜನರ ಕೆಲಸ ಮಾಡಿಕೊಂಡು ಹೋಗಬಹುದು ಎಂದು ತಿಳಿದಿದ್ದೆ. ಆದರೆ, ಜನರಿಗಾಗಿ ಕೆಲಸ ಮಾಡುವುದನ್ನೂ ಸಹಿಸಿಕೊಳ್ಳದಿದ್ದರೆ ನಾನೇನು ಮಾಡಲು ಸಾಧ್ಯ? ಒಳ್ಳೆಯ ಕೆಲಸ ಮಾಡುವುದನ್ನು ಸಹಿಸಿಕೊಳ್ಳದವರನ್ನು ಏನನ್ನಬೇಕು?’ ಎಂದು ಕೇಳಿದರು.

‘ಎಲ್ಲ ಸಂಕಷ್ಟಗಳ ಮಧ್ಯೆಯೂ ಜಗ್ಗದೆ ಮತ್ತು ಕುಗ್ಗದೆ ಕೆಲಸ ಮಾಡುತ್ತಿದ್ದೇನೆ. ಇದನ್ನು ಯಾವುದೇ ಕಾರಣದಿಂದ ನಿಲ್ಲಿಸುವುದಿಲ್ಲ. ಕ್ಷೇತ್ರದ ಜನರ ದೊಡ್ಡ ಶಕ್ತಿ ನನ್ನ ಜೊತೆಗಿರುವಾಗ ನಾನೇಕೆ ಅಳುಕಬೇಕು’ ಎಂದು ಅವರು ಪ್ರಶ್ನಿಸಿದರು.

‘ರಾಜಕೀಯ ಚುನಾವಣೆಯ ಸಂದರ್ಭದಲ್ಲಿ ಮಾತ್ರವೇ ಇರಬೇಕು ಎಂದು ಬಯಸುವವಳು ನಾನು. ಚುನಾವಣೆ ನಂತರ ಅಭಿವೃದ್ಧಿಯಲ್ಲಿ ಪೈಪೋಟಿ ಮಾಡೋಣ. ಒಬ್ಬರಿಗಿಂತ ಒಬ್ಬರು ಹೆಚ್ಚು ಕೆಲಸಗಳನ್ನು ತರುವುದಕ್ಕೆ ಪ್ರಯತ್ನಿಸೋಣ. ಆದರೆ, ಇದರಲ್ಲೂ ರಾಜಕೀಯ ನೋಡಿ ಬೇಜಾರಾಗುತ್ತಿದೆ. ಅಂಥವರನ್ನು ಜನರು ಮತ್ತು ದೇವರೇ ನೋಡಿಕೊಳ್ಳುತ್ತಾನೆ. ನಾನು ಹೆಚ್ಚು ತಲೆಕೆಡಿಸಿಕೊಳ್ಳದೆ ಅಭಿವೃದ್ಧಿ ಕೆಲಸ ಮುಂದುವರಿಸುತ್ತೇನೆ’ ಎಂದರು.

ಕ್ಷೇತ್ರದ ಹೊನ್ನಿಹಾಳ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಗ್ರಾಮದ ಹಿರಿಯರು, ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.