ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಈದ್ ಮಿಲಾದ್ ಸರಳ ಆಚರಣೆ

Last Updated 30 ಅಕ್ಟೋಬರ್ 2020, 13:23 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್ ಆತಂಕದಿಂದಾಗಿ, ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಈದ್-ಮಿಲಾದ್ ಹಬ್ಬವನ್ನು ಮುಸ್ಲಿಮರು ಶುಕ್ರವಾರ ಸರಳವಾಗಿ ಆಚರಿಸಿದರು.

ಪ್ರತಿ ವರ್ಷ ಹಬ್ಬದ ಅಂಗವಾಗಿ ಅವರು ಅದ್ಧೂರಿಯಾಗಿ ಮೆರವಣಿಗೆ ನಡೆಸಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶ ಸಾರುತ್ತಿದ್ದರು. ಆದರೆ, ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಈ ಬಾರಿ ಮೆರವಣಿಗೆ ನಿಷೇಧಿಸಲಾಗಿತ್ತು.

ಮಸೀದಿಗಳಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಯಿತು. ಎಂದಿನಂತೆ ಐದು ಹೊತ್ತು ನಮಾಜ್ ಮಾಡಿದ ಮುಸ್ಲಿಮರು, ‘ಸರ್ವರಿಗೂ ಒಳಿತಾಗಲಿ ಮತ್ತು ಕೊರೊನಾ ಆತಂಕ ಬೇಗ ದೂರಾಗಲಿ’ ಎಂದು ದೇವರಲ್ಲಿ ಪ್ರಾರ್ಥಿಸಿದರು. ಮಸೀದಿಗಳು ಹಾಗೂ ಮುಸ್ಲಿಮರ ಮನೆಗಳಿಗೆ ದೀಪಾಲಂಕಾರ ಮಾಡಲಾಗಿತ್ತು.

ಶುಕ್ರವಾರ ಮಧ್ಯಾಹ್ನ ನಡೆದ ವಿಶೇಷ ಪ್ರಾರ್ಥನೆ ವೇಳೆ ಧರ್ಮಗುರುಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಬದುಕಿನ ಬಗ್ಗೆ ತಿಳಿಸಿದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕೋಟೆ ರಸ್ತೆಯ ಜಿನ್ನಾ ಚೌಕದಲ್ಲಿ ಮುಖಂಡರು ಧರ್ಮದ ಧ್ವಜಾರೋಹಣ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು.

ಧರ್ಮಗುರು ಮುಫ್ತಿ ಮಂಜೂರ್ ಅಲಂ ಮಾತನಾಡಿ, ‘ಕೋವಿಡ್ ಕಂಟಕದಿಂದ ಜಗತ್ತು ತತ್ತರಿಸಿದೆ. ಹೀಗಾಗಿ, ಸರಳವಾಗಿ ಹಬ್ಬ ಆಚರಿಸಿದ್ದೇವೆ. ಜಗತ್ತಿಗೆ ಬಂದಿರುವ ಸೋಂಕಿನ ಕಂಟಕ ದೂರ ಮಾಡುವಂತೆ ಮತ್ತು ಬೆಳಗಾವಿಯಲ್ಲಿ ಸಮೃದ್ಧಿ, ಶಾಂತಿ ಮತ್ತು ನೆಮ್ಮದಿ ನೆಲೆಸುವಂತೆ ಕರುಣಿಸುವಂತೆ ದೇವರನ್ನು ಪ್ರಾರ್ಥಿಸಿದ್ದೇವೆ’ ಎಂದು ತಿಳಿಸಿದರು.

ಹಜರತ್ ಕಟಗೇರಿ, ಮಹಮ್ಮದ್ ರಸೂಲ್ ಪೀರಜಾದೆ, ಸೀರತ್ ಸಮಿತಿಯ ಅಧ್ಯಕ್ಷ ಅತಾವುಲ್ಲಾ ದೇಸಾಯಿ, ಅಜೀಜ್ ಪಟ್ವೇಗಾರ, ಗೌಸ್‍ಲಾಲ್ ಶೇಖ್, ನಿಸಾರ್‌ ಹಜರತ್, ನಸ್ರುಲ್ಲಾ ಮೌಲಾನಾ, ಫೈಜಾನ್ ಪೀರಜಾದೆ, ಅಬ್ದುಲ್ ಪನ್ನಾಳಿ, ಮುಸ್ತಾಕ್ ಅಶ್ರಫಿ, ಅಕ್ಬರ್ ಬಾಗವಾನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT