ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಭೀಕರ ಬರ, ಇಳುವರಿ ಕುಸಿತದಿಂದ ಎಳನೀರಿನ ದರ ₹35ಕ್ಕೆ ಹೆಚ್ಚಳ

Published 27 ಅಕ್ಟೋಬರ್ 2023, 7:11 IST
Last Updated 27 ಅಕ್ಟೋಬರ್ 2023, 7:11 IST
ಅಕ್ಷರ ಗಾತ್ರ

ಬೆಳಗಾವಿ: ಭೀಕರ ಬರ ಮತ್ತು ಕೀಟಬಾಧೆಯಿಂದ ಈ ಬಾರಿ ಎಳನೀರಿನ ಇಳುವರಿ ಕುಸಿತವಾಗಿದೆ. ಮತ್ತೊಂದೆಡೆ ಬಿಸಿಲಿನ ಬೇಗೆ ಹೆಚ್ಚುತ್ತಿರುವುದರಿಂದ ಚಳಿಗಾಲದಲ್ಲೂ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಇಲ್ಲಿನ ಮಾರುಕಟ್ಟೆಯಲ್ಲಿ ಪ್ರತಿ ಎಳನೀರಿನ ದರ ₹35ಕ್ಕೆ ಏರಿಕೆಯಾಗಿದೆ.

‘ಬಾಗಲಕೋಟೆ, ದಾವಣಗೆರೆ ಮತ್ತಿತರ ಜಿಲ್ಲೆಗಳಿಂದ ಎಳನೀರು ತರಿಸುತ್ತಿದ್ದೆವು. ಎರಡು ತಿಂಗಳ ಹಿಂದೆ ಪ್ರತಿ 100 ಎಳನೀರಿಗೆ ₹1,800(ಸಾರಿಗೆ ವೆಚ್ಚ ಸೇರಿ) ದರವಿತ್ತು. ಈಗ ₹2,400ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಭೂಬಾಡಿಗೆ ತುಂಬುವುದು, ಇತರೆ ಖರ್ಚುಗಳಿವೆ. ಹಾಗಾಗಿ ಎಳನೀರಿನ ದರವನ್ನು ₹30ರಿಂದ ₹35ಕ್ಕೆ ಹೆಚ್ಚಿಸಿದ್ದೇವೆ. ಒಂದುವೇಳೆ ಪೂರೈಕೆ ಹೆಚ್ಚಿದರೆ, ದರ ಇಳಿಸುತ್ತೇವೆ’ ಎಂದು ಸ್ಥಳೀಯ ವ್ಯಾಪಾರಿ ಮಹಮ್ಮದ್‌ಹನೀಫ್‌ ಬಾಬಾಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರೈಕೆಯಾಗುತ್ತಿಲ್ಲ: ‘ಮಂಡ್ಯ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಂದ ನಿಯಮಿತವಾಗಿ ಎಳನೀರು ಪೂರೈಕೆಯಾಗುತ್ತಿತ್ತು. ಆದರೆ, ಮಳೆ ಕೈಕೊಟ್ಟ ಕಾರಣ ಈ ಸಲ ತೆಂಗಿನಕಾಯಿ ಸರಿಯಾಗಿ ಬೆಳೆದಿಲ್ಲ. ಎಷ್ಟೇ  ಬೇಡಿಕೆ ಸಲ್ಲಿಸಿದರೂ ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ. ಒಂದುವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ, ಎಳನೀರಿನ ದರ ₹40ಕ್ಕೆ ಏರುವ ಸಾಧ್ಯತೆ ಇದೆ’ ಎಂದು ಮತ್ತೊಬ್ಬ ವ್ಯಾಪಾರಿ ಅಕ್ಬರ್‌ ಹೇಳಿದರು.

‘ಪ್ರತಿವರ್ಷ ಈ ಅವಧಿಯಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇರುತ್ತಿರಲಿಲ್ಲ. ಮಳೆ–ಚಳಿ ಕಾರಣಕ್ಕೆ ಜನರೂ ಅಷ್ಟಾಗಿ ಸೇವಿಸುತ್ತಿರಲಿಲ್ಲ. ಈ ಸಲ ಅಕ್ಟೋಬರ್‌ನಲ್ಲೇ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್‌ ಇದ್ದು, ಚಳಿಯ ಪ್ರಮಾಣ ಕಡಿಮೆಯಿದೆ. ಹಾಗಾಗಿ ಸಮೃದ್ಧ ಪೋಷಕಾಂಶಗಳಿರುವ ಎಳನೀರಿನ ಸೇವನೆಗೆ ಜನರು ಆದ್ಯತೆ ನೀಡಿದ್ದಾರೆ’ ಎಂದರು.

‘ತಿಂಗಳ ಹಿಂದಷ್ಟೇ ಬೆಳಗಾವಿಯಲ್ಲಿ ₹25ರಿಂದ ₹30ಕ್ಕೆ ಒಂದು ಎಳನೀರು ಸಿಗುತ್ತಿತ್ತು. ಈಗ ₹35ಕ್ಕೆ ಏರಿಕೆಯಾಗಿದೆ. ಆದರೆ, ಬಿಸಿಲಿನ ಝಳದಿಂದ ಪಾರಾಗಲು ತಂಪುಪಾನೀಯ ಸೇವಿಸುವುದಕ್ಕಿಂತ, ಇದನ್ನು ಸೇವಿಸುತ್ತಿದ್ದೇವೆ’ ಎನ್ನುತ್ತಾರೆ ಗ್ರಾಹಕ ಹರೀಶ ಕರಿಗನ್ನವರ.

ಬೆಳಗಾವಿಯಲ್ಲಿ ಎಳನೀರು ಖರೀದಿಸುತ್ತಿರುವ ಗ್ರಾಹಕರು–ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಎಳನೀರು ಖರೀದಿಸುತ್ತಿರುವ ಗ್ರಾಹಕರು–ಪ್ರಜಾವಾಣಿ ಚಿತ್ರ

ಇಳುವರಿ ಕುಸಿತದಿಂದ ದರ ಹೆಚ್ಚಳ

‘ಉತ್ತರ ಕರ್ನಾಟಕಕ್ಕಿಂತ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಳನೀರಿನ ಗಿಡಗಳಿವೆ. ಈ ಬಾರಿ ಬರದ ಪರಿಸ್ಥಿತಿಯಿದೆ. ಜತೆಗೆ ಕಪ್ಪುತಲೆಯ ಹುಳುವಿನ ಕಾಟದಿಂದ ಇಳುವರಿ ಕುಸಿದಿದೆ. ಇದೇ ದರ ಹೆಚ್ಚಳಕ್ಕೆ ಕಾರಣ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT