ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ದಿನಕ್ಕಷ್ಟೆ ಸೀಮಿತವಾದ ಅಮೃತ ಮಹೋತ್ಸವ!

ವಿವಿಧ ಕಾರ್ಯಕ್ರಮಗಳ ಮೇಲೆ ಕೋವಿಡ್ ಕರಿನೆರಳು
Last Updated 12 ಜೂನ್ 2021, 7:35 IST
ಅಕ್ಷರ ಗಾತ್ರ

ಬೆಳಗಾವಿ: ದೇಶದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮವು ಜಿಲ್ಲೆಯಲ್ಲಿ ಒಂದು ದಿನವಷ್ಟೇ ನಡೆದು ನಂತರ ಸ್ಥಗಿತಗೊಂಡಿದೆ!

ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಜಿಲ್ಲಾಡಳಿತದಿಂದ ಮಾರ್ಚ್‌ 12ರಂದು ಉದ್ಘಾಟನೆ ಕಾರ್ಯಕ್ರಮ ನಡೆದಿತ್ತು. ಈ ಅವಕಾಶವು ಜಿಲ್ಲೆಗೆ ರಾಷ್ಟ್ರ ಮಟ್ಟದಲ್ಲಿ ದೊರೆತ ಗೌರವವಾಗಿತ್ತು. ಆದರೆ, ಸ್ಮರಣೆಯು ಮೊದಲ ದಿನಕ್ಕಷ್ಟೆ ಸೀಮಿತವಾಯಿತು.

75ನೇ ಸ್ವಾತಂತ್ರ್ಯೋತ್ಸವ ಸ್ಮರಣಾರ್ಥ ದೇಶದ ಪ್ರಗತಿ, ಹೊಸ ವಿಚಾರ, ಹೊಸ ಪ್ರಗತಿ, ರಾಷ್ಟ್ರದ ಜಾಗರಣೆಯ, ಆತ್ಮನಿರ್ಭರದ ಮಹೋತ್ಸವವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು. ಇಲ್ಲಿ ಉದ್ಘಾಟನೆ ಹೊರತುಪಡಿಸಿದರೆ ಬೇರೆ ಕಾರ್ಯಕ್ರಮಗಳು ನಡೆದಿಲ್ಲ.

‘ಮಹಾತ್ಮ ಗಾಂಧೀಜಿ ಆರಂಭಿಸಿದ್ದ ದಂಡಿಯಾತ್ರೆಯ ಪವಿತ್ರ ದಿನದಂದು ದೇಶದ 75 ಕಡೆಗಳಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮಗಳು ಜರುಗುತ್ತಿವೆ. ಇದರಲ್ಲಿ ಜಿಲ್ಲೆಯ ಕಿತ್ತೂರು, ಮಂಡ್ಯ ಜಿಲ್ಲೆಯ ಶಿವಪುರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶ್ವತ್ಥ ಈ ಮೂರು ಸ್ಥಳಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹೋರಾಟಗಾರರ ಸ್ಮರಣೆಯು 75 ವಾರಗಳವರೆಗೆ ನಡೆಯುತ್ತದೆ. ಈ ಸ್ಮರಣೆಯು ಜನಾಂದೋಲನ ಆಗಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಆಶಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡ ಸತ್ಕರಿಸಲಾಗಿತ್ತು.

ನಗರದಲ್ಲಿ

ನಗರದ ವೀರಸೌಧ (ಕಾಂಗ್ರೆಸ್‌ ಬಾವಿ)ದಲ್ಲಿ ಮಹಾನಗರ ಪಾಲಿಕೆಯಿಂದ ಮಹಾತ್ಮ ಗಾಂಧೀಜಿ ಅವರ ಫೋಟೊಗಳು ಹಾಗೂ ಮಹನೀಯರ ಕುರಿತ ಪುಸ್ತಕಗಳ ಪ್ರದರ್ಶನ ನಡೆಸಲಾಗಿತ್ತು. ಶಿಕ್ಷಣ ಇಲಾಖೆಯಿಂದ ಸರ್ದಾರ್‌ ಪ್ರೌಢಶಾಲೆಯಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲರ ಫೋಟೊಗಳನ್ನು ಪ್ರದರ್ಶಿಸಲಾಗಿತ್ತು. ಚನ್ನಮ್ಮನ ಕಿತ್ತೂರಿನಿಂದ ಸಂಗೊಳ್ಳಿ ರಾಯಣ್ಣನ ಸ್ಮಾರಕವಿರುವ ಖಾನಾಪುರ ತಾಲ್ಲೂಕಿನ ನಂದಗಡದವರೆಗೆ ಸೈಕ್ಲಿಸ್ಟ್‌ಗಳು ಸೈಕಲ್ ರ‍್ಯಾಲಿ ನಡೆಸಿದ್ದರು.

ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಸಬರಮತಿ ಆಶ್ರಮದಿಂದ ಚಾಲನೆ ನೀಡಿದ್ದರು. ವಿವಿಧ ಸ್ಪರ್ಧೆ, ಜಾಗೃತಿ ಕಾರ್ಯಕ್ರಮ, ಉಪನ್ಯಾಸ ಮತ್ತು ಛಾಯಾಚಿತ್ರಗಳ ಪ್ರದರ್ಶನದ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಯುವಜನರಿಗೆ ತಿಳಿಸಿಕೊಡುವುದು ಉತ್ಸವದ ಉದ್ದೇಶವಾಗಿತ್ತು.

ವಿಸ್ತರಣೆ ಆಗಿಲ್ಲ

‘ಜಿಲ್ಲೆಯ ವಿವಿಧ ಭಾಗಗಳಲ್ಲಿ 75 ವಾರ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು. 2021ರ ಮಾರ್ಚ್‌ 19ರಿಂದ 2022ರ ಆ.13ರವರೆಗೆ ಹಲವು ಕಾರ್ಯಕ್ರಮಗಳಿಗೆ ಯೋಜಿಸಲಾಗಿದೆ. ಎಲ್ಲಿ, ಯಾವ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಇದು ಗ್ರಾಮ ಪಂಚಾಯ್ತಿ ಮಟ್ಟಕ್ಕೆ ವಿಸ್ತರಣೆ ಆಗಲೇ ಇಲ್ಲ.

2022ರ ಆಗಸ್ಟ್ 12ರಂದು ಅಮೃತ ಮಹೋತ್ಸವದ 75ನೇ ವಾರದ ಕಾರ್ಯಕ್ರಮದೊಂದಿಗೆ ಸಮಾರೋಪಗೊಳ್ಳುತ್ತಿತ್ತು. ಆದರೆ, ಇದರ ಮೇಲೆ ಕೋವಿಡ್ ಕರಿನೆರಳು ಬಿದ್ದಿದ್ದು, ಎಲ್ಲವೂ ಸ್ಥಗಿತಗೊಂಡಿದೆ. ಲಾಕ್‌ಡೌನ್‌ ಕಾರಣ ಮಹೋತ್ಸವ ರಂಗು ಪಡೆದಿಲ್ಲ. ವರ್ಚುವಲ್‌ ವೇದಿಕೆ ಬಳಸಿಕೊಳ್ಳುವ ಕೆಲಸವೂ ವಿವಿಧ ಇಲಾಖೆಗಳಿಂದ ನಡೆದಿಲ್ಲ.

ಜಿಲ್ಲಾಧಿಕಾರಿ ಏನಂತಾರೆ?

ಕೋವಿಡ್ ಕಾರಣದಿಂದಾಗಿ, ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ನಡೆಸಲಾಗಿಲ್ಲ. ಲಾಕ್‌ಡೌನ್‌ ತೆರವಾದ ಬಳಿಕ ಮೊದಲಿಗೆ ವರ್ಚುವಲ್‌ ವೇದಿಕೆ ಮೂಲಕ ಆರಂಭಿಸಲಾಗುವುದು

-ಎಂ.ಜಿ. ಹಿರೇಮಠ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT