ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ, ಮಹಾರಾಷ್ಟ್ರದಿಂದ ಬಂದವರ ಪರೀಕ್ಷೆ- ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚನೆ

Last Updated 7 ಜನವರಿ 2022, 14:23 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್–19 ರೂಪಾಂತರವೈರಾಣು ಓಮೈಕ್ರಾನ್‌ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಗಡಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆ ಆಗುತ್ತಿವೆ. ಹೀಗಾಗಿ ಗೋವಾ, ಮಹಾರಾಷ್ಟ್ರ ಹಾಗೂ ಕೇರಳದಿಂದ ಬಂದ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ ಇರುವಂತೆ ಸೂಚನೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಶುಕ್ರವಾರ ‘ಕೋವಿಡ್-19 ನಿಯಂತ್ರಣಕ್ಕಾಗಿ ನಿಯೋಜಿಸಿದ ವಿವಿಧ ಕಾರ್ಯ ತಂಡಗಳ’ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲೂ ಓಮೈಕ್ರಾನ್ ವೈರಾಣು ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ, ಹಾಸಿಗೆ, ಅಗತ್ಯ ಔಷಧಿಗಳ ವ್ಯವಸ್ಥೆ ಮೊದಲಾದ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಬೇಕು’ ಎಂದು ಸೂಚಿಸಿದರು.

‘ಗ್ರಾಮಗಳಲ್ಲಿ ಕೋವಿಡ್ ನಿರ್ವಹಣಾ ತಂಡಗಳಿವೆ. ಅವು ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿಕೊಳ್ಳಲು ತಿಳಿಸಬೇಕು. ಗ್ರಾಮೀಣ ಭಾಗದಲ್ಲಿ ಹೋಂ ಐಸೊಲೇಷನ್‌ ಸಿದ್ಧತೆ ಕುರಿತು ಜನರಿಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

55 ಪ್ರಕರಣ:‘ಜಿಲ್ಲೆಯಲ್ಲಿ ಈವರೆಗೆ 55 ಓಮೈಕ್ರಾನ್‌ ಪ್ರಕರಣಗಳು ದಾಖಲಾಗಿವೆ. ಕ್ರಮೇಣ ಹೆಚ್ಚುವ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚು ಭಕ್ತರು ದರ್ಶನಕ್ಕೆ ಬರುವ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದರು.

‘ಸರ್ಕಾರದ ಆದೇಶದಂತೆ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗೆಳ ವ್ಯವಸ್ಥೆಯನ್ನು ಕೋವಿಡ್ ಚಿಕಿತ್ಸೆಗೆ ಕಲ್ಪಿಸಬೇಕು. ಈ ಕುರಿತು ಐಎಂಒ ಪದಾಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ಸಿಇಒಗಳ ಸಭೆ ಕರೆದು ಸರ್ಕಾರದ ಆದೇಶದ ಕುರಿತು ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ತೊಂದರೆ ಆಗದಂತೆ ನೋಡಿಕೊಳ್ಳಿ:‘ಕೋವಿಡ್, ಓಮೈಕ್ರಾನ್‌ ಸೋಂಕಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸಾಕಷ್ಟು ಕಾಳಜಿ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಕೋವಿಡ್ ನಿರ್ವಹಣೆಗೆ ಅಧಿಕಾರಿಗಳು ಹೆಚ್ಚಿನ ಸಹಕಾರ ನೀಡಬೇಕು. ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಸ್ಥಳೀಯ ಹಾಸ್ಟೆಲ್‌ಗಳನ್ನು ಬಳಸಿಕೊಳ್ಳಬೇಕು. ಎಲ್ಲ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಯೋಜನೆ ಮೂಲಕ ಉಚಿತ ಸೇವೆ ಒದಗಿಸಬೇಕು. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಹಾಗೂ ಆಮ್ಲಜನಕ ಕೊರತೆ ಆಗದಂತೆ ತಡೆಯಬಹುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ತಿಳಿಸಿದರು.

ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಡಿಎಚ್‌ಒ ಡಾ.ಶಶಿಕಾಂತ ಮುನ್ಯಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಬಸವರಾಜ ವರವಟ್ಟಿ ಉಪಸ್ಥಿತರಿದ್ದರು.

***

ಘಟಕ ಸ್ಥಾಪನೆ

ಆಮ್ಲಜನಕ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಈಗಾಗಲೇ 5 ತಾಲೂಕುಗಳಲ್ಲಿ ಘಟಕ ಸ್ಥಾಪಿಸಲಾಗಿದೆ. ಅಲ್ಲಿ ಡ್ರೈ ರನ್ (ಅಣಕು ಕಾರ್ಯಾಚರಣೆ)ಗೆ ಸೂಚಿಸಲಾಗಿದೆ.

–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT