ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸು, ಎಮ್ಮೆಗಳಿಗೆ ವಿಮಾ ಭದ್ರತೆ: ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Last Updated 18 ನವೆಂಬರ್ 2020, 11:30 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದ 12 ಲಕ್ಷ ಹಸು ಹಾಗೂ ಎಮ್ಮೆಗಳಿಗೆ ವಿಮಾ ಭದ್ರತೆ ಒದಗಿಸಲಾಗುವುದು. ವಿಮೆಗೆ ಒಳಪಟ್ಟ ರಾಸು ಮೃತಪಟ್ಟಲ್ಲಿ ₹ 40ರಿಂದ ₹ 50ಸಾವಿರ ಪರಿಹಾರವನ್ನು ಹೈನುಗಾರರಿಗೆ ನೀಡಲಾಗುವುದು’ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನೇತೃತ್ವದಲ್ಲಿ ಇಲ್ಲಿನ ಮಹಾಂತೇಶ ನಗರದ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಆವರಣದಲ್ಲಿ ಬುಧವಾರ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಎಂಎಫ್‌ ಪ್ರಸ್ತುತ ವಾರ್ಷಿಕ ₹ 15ಸಾವಿರ ಕೋಟಿ ವಹಿವಾಟು ಹೊಂದಿದ್ದು, ಇದನ್ನು 4 ವರ್ಷಗಳಲ್ಲಿ ₹ 25ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಇದೆ. ಕೆಎಂಎಫ್‌ ಹಾಗೂ 14 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಮೂಲಕ ವರ್ಷದಲ್ಲಿ ಸಾವಿರ ಮಂದಿಗೆ ನೌಕರಿ ನೀಡಲಾಗುವುದು’ ಎಂದು ಹೇಳಿದರು.

ದಾಖಲೆಯಾಗಿದೆ:‘ಕೆಎಂಎಫ್ ಎಂದರೆ ಹಾಲು ಮಾರೋರು, ಖರೀದಿಸೋರು ಎಂದಷ್ಟೇ ಭಾವನೆ ಹಿಂದೆ ಇತ್ತು. ಆದರೆ, ಈಗ ಅದು ಬದಲಾಗಿದೆ. ಬಹಳಷ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ಗುಜರಾತ್‌ನ ‘ಅಮೂಲ್’ ಹಾಗೂ ಕೆಎಂಎಫ್ ದೇಶದಲ್ಲಿ ಗಟ್ಟಿಯಾಗಿ ನಿಂತಿದೆ. ರೈತರನ್ನು ಮತ್ತಷ್ಟು ಆಕರ್ಷಿಸಿ ಸಹಕಾರ ಕ್ಷೇತ್ರದ ಕಡೆಗೆ ಕರೆದುಕೊಂಡು ಬರುತ್ತೇವೆ. ನಾನು ಅಧ್ಯಕ್ಷನಾಗುವುದಕ್ಕಿಂತ ಮುಂಚೆ, ನಿತ್ಯ 83 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಈಗ 89 ಲಕ್ಷ ಲೀಟರ್‌ಗೆ ಏರಿದೆ. ಇಷ್ಟು ಪ್ರಮಾಣದ ಸಂಗ್ರಹ ಹೊಸ ದಾಖಲೆಯೇ ಸರಿ. ಇದನ್ನು ಕೋಟಿಗೆ ಹೆಚ್ಚಿಸುವ ಗುರಿ ಇದೆ’ ಎಂದರು.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ‘ಪ್ರಸಕ್ತ ಸಾಲಿನಲ್ಲಿ ಎಲ್ಲ ಡಿಸಿಸಿ ಬ್ಯಾಂಕ್‌ಗಳ ಮೂಲಕ ರೈತರಿಗೆ ₹ 15,300 ಕೋಟಿ ಸಾಲ ವಿತರಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ವಾರ್‌ ರೂಂ ಸ್ಥಾಪನೆ:ಪಶುಸಂಗೋಪನಾ ಸಚಿವ ಪ್ರಭು ಚವಾಣ್, ‘ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹೈನುಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರಿನಲ್ಲಿ ವಾರ್‌ ರೂಂ ಸ್ಥಾಪಿಸಲಾಗುತ್ತಿದೆ. ಅದು 24x7 ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಿಯೇ ತೀರುತ್ತೇವೆ’ ಎಂದು ತಿಳಿಸಿದರು.

‘ಕ್ಷೀರ ಸಂಜೀವಿನಿ’ ಯೋಜನೆ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ‘ಸ್ತ್ರೀ ಶಕ್ತಿ ಸಂಘಗಳು ತಯಾರಿಸಿದ ವಸ್ತುಗಳನ್ನು ಸರ್ಕಾರದ ಮೂಲಕ ಮಾರುವ ಯೋಜನೆ ಸಿದ್ಧವಾಗುತ್ತಿದೆ’ ಎಂದು ಹೇಳಿದರು.

ಸಹಕಾರಿ ಧುರೀಣ ಬಿ.ಆರ್. ಪಾಟೀಲ ಅವರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಜಿಲ್ಲೆಯ 17 ಸಾಧಕ ಹೈನುಗಾರರನ್ನು ಸತ್ಕರಿಸಲಾಯಿತು.

***

ವಿವಿಧ ಉತ್ಪನ್ನ ಬಿಡುಗಡೆ

ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಸಾಮಾನ್ಯ ಸೇವಾ ಕೇಂದ್ರಕ್ಕೆ ಹಾಗೂ ರಾಸುಗಳಿಗೆ ವಿಮೆ ವಿತರಣೆಗೆ ಚಾಲನೆ ನೀಡಲಾಯಿತು. ಕೆಎಂಎಫ್‌ನ ‘ನಂದಿನಿ’ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳಾದ ಚಾಕೊಲೆಟ್, ಬಾದಾಮ್‌ ಹಲ್ವಾ, ಐದು ಬಗೆಯ ಬ್ರೆಡ್‌ಗಳು, ನೈಸರ್ಗಿಕ ಐಸ್ ಕ್ರೀಂ, ಶ್ರೀಖಂಡ್ ಅನ್ನು ಗಣ್ಯರು ಸವಿಯುವ ಮೂಲಕ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT