ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಕೊರತೆ: ಸಮ್ಮೇಳನಗಳು ಮುಂದೂಡಿಕೆ

ಮಂಡ್ಯದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೂ ಸೇರಿ ಎಲ್ಲ ಸಮ್ಮೇಳನಗಳ ಮುಂದೂಡಿಕೆ
ಸಂತೋಷ ಈ. ಚಿನಗುಡಿ
Published 30 ನವೆಂಬರ್ 2023, 5:23 IST
Last Updated 30 ನವೆಂಬರ್ 2023, 5:23 IST
ಅಕ್ಷರ ಗಾತ್ರ

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ರಾಜ್ಯ ಸರ್ಕಾರದಿಂದ ಅನುದಾನ ಸಿಗುವುದು ವಿಳಂಬವಾಗಿದೆ. ಇದರ ಪರಿಣಾಮ ಮಂಡ್ಯದಲ್ಲಿ ಈ ವರ್ಷ ನಡೆಯಬೇಕಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಲಾಗಿದೆ. ಜಿಲ್ಲಾ, ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳಿಗೂ ಹಿನ್ನಡೆಯಾಗಿದೆ.

ಕಾಂಗ್ರೆಸ್ ಸರ್ಕಾರ ಬಂದ ಬಳಿಕ ₹5 ಕೋಟಿ ಅನುದಾನ ಘೋಷಿಸಿದೆ. ಅದರಲ್ಲಿ ನವೆಂಬರ್‌ 2ರಂದು ಮೊದಲ ಕಂತು ₹1.67 ಕೋಟಿ ಬಂದಿದೆ. ಇದರಲ್ಲಿ ಪರಿಷತ್ತಿನ ಸಿಬ್ಬಂದಿ ವೇತನ, ನಿರ್ವಹಣೆಗೆ ವೆಚ್ಚ ಮಾಡಬೇಕಿದೆ. ಎರಡನೇ ಕಂತಿನ ಅನುದಾನ ಬಂದ ಬಳಿಕವೇ ಉಳಿದ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ.

‘2021–22ರ ಸಾಲಿನಲ್ಲಿ ₹10 ಕೋಟಿ ಅನುದಾನ ನೀಡಲಾಗಿತ್ತು. ಅದರಲ್ಲಿ ₹5 ಕೋಟಿ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಳಸಲಾಯಿತು. ಆದರೆ, 2023–24ನೇ ಸಾಲಿನಲ್ಲಿ ಅರ್ಧದಷ್ಟು ಅಂದರೆ; ₹5 ಕೋಟಿ ಮಾತ್ರ ನೀಡಲಾಗಿದೆ. ಹೀಗಾಗಿ, ಈ ವರ್ಷ ಮಂಡ್ಯದ ಸಮ್ಮೇಳನ ಮಾಡದಿರಲು ನಿರ್ಧರಿಸಲಾಗಿದೆ’ ಎಂದು ಪರಿಷತ್ತಿನ ಮೂಲಗಳು ತಿಳಿಸಿವೆ.

‘₹5 ಕೋಟಿ ಅನುದಾನ ನಾಲ್ಕು ಕಂತುಗಳಲ್ಲಿ ಬರಬೇಕಿದೆ. ಜೂನ್‌ನಲ್ಲಿ ಮೊದಲ ಕಂತು, ಆಗಸ್ಟ್‌ನಲ್ಲಿ ಎರಡನೇ, ನವೆಂಬರ್‌ಗೆ ಮೂರು ಮತ್ತು ಫೆಬ್ರುವರಿಗೆ ನಾಲ್ಕನೇ ಕಂತಿನ ಹಣ ಬರಬೇಕು. ಎರಡನೇ ಮತ್ತು ಮೂರನೇ  ಕಂತಿನ ಹಣ ಶೀಘ್ರ ನೀಡಲು ಕೋರಲಾಗಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

‘ಈ ವರ್ಷ ಆರ್ಥಿಕ ಮುಗ್ಗಟ್ಟಿನ ಮಧ್ಯೆಯೂ ಕೆಲ ಚಟುವಟಿಕೆಗಳನ್ನು ನಿಭಾಯಿಸಲಾಗಿದೆ. ಸಮ್ಮೇಳನ, ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವ ಆಚರಿಸಲು ಆಗಲಿಲ್ಲ. ಕೇಂದ್ರ ಸಮಿತಿ ಸೂಚಿಸುವವರೆಗೆ ಯಾವುದೇ ಚಟುವಟಿಕೆ ಹಮ್ಮಿಕೊಳ್ಳಬಾರದು. ಒಂದು ವೇಳೆ ಸ್ಥಳೀಯ ಸಂಪನ್ಮೂಲ ಕ್ರೂಢೀಕರಿಸಿ ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳನ್ನು ಮಾಡುವುದಾದರೆ ಅಭ್ಯಂತರವಿಲ್ಲ. ಇದಕ್ಕೆ ಕೇಂದ್ರ ಸಮಿತಿಯಿಂದ ಅನುಮತಿ ಪಡೆಯಬೇಕು’ ಎಂದು ಅವರು ಜಿಲ್ಲಾ ಘಟಕಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಅನ್ನ ಇಲ್ಲದಿರುವಾಗ ಸಮ್ಮೇಳನ ಸಲ್ಲ’ ‘ರಾಜ್ಯದ ಬಹುತೇಕ ಕಡೆ ಬರ ಬಿದ್ದಿದೆ. ರೈತರ ಮನೆಯಲ್ಲಿ ಅನ್ನವಿಲ್ಲ. ಇಂಥ ಸಂದರ್ಭದಲ್ಲಿ ಸಾಹಿತ್ಯದ ಹೋಳಿಗೆ ಸವಿಯಬಾರದು ಎಂಬ ಕಾರಣಕ್ಕೆ ಸ್ವಯಂ ಪ್ರೇರಿತವಾಗಿ ತಾತ್ಕಾಲಿಕವಾಗಿ ಸಮ್ಮೇಳನ ನಿಲ್ಲಿಸಿದ್ದೇವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು. ‘ಅನ್ನ ಇದ್ದಾಗ ಸಂತಸ ಸಂತಸ ಇದ್ದಾಗ ಸಂಭ್ರಮ ಸಂಭ್ರಮ ಇದ್ದಾಗ ಸಾಹಿತ್ಯ. ಈಗ ರೈತರು ಅನ್ನಕ್ಕಾಗಿ ಹಾಗೂ ಜಾನುವಾರುಗಳ ಮೇವಿಗಾಗಿ ಪರದಾಡುವ ಸ್ಥಿತಿ ಇದೆ. ಪರಿಷತ್ತು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಇದನ್ನು ಇನ್ನಷ್ಟು ಜನಪರ ಮಾಡುವ ಉದ್ದೇಶದಿಂದ ಹೀಗೆ ನಿರ್ಧರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT