ಗುರುವಾರ , ಫೆಬ್ರವರಿ 9, 2023
30 °C
ಮಹಾರಾಷ್ಟ್ರದ ಗರ್ವಭಂಗಕ್ಕೆ ಆನ್‌ಲೈನ್‌ ಅಭಿಯಾನ

ಕರ್ನಾಟಕ ಹೊಸ ನಕಾಶೆ ಹರಿಬಿಟ್ಟ ‘ಮಹಾ’ ಕನ್ನಡಿಗರು

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೊಲ್ಹಾಪುರ, ಸಾಂಗಲಿ, ಸೊಲ್ಲಾಪುರ, ಜತ್ತ, ಉಸ್ಮನಾಬಾದ್‌, ಲಾತೂರ್‌ ಪ್ರದೇಶಗಳನ್ನು ಒಳಗೊಂಡಂತೆ ಕರ್ನಾಟಕದ ಹೊಸ ನಕಾಶೆ ಸಿದ್ಧಪಡಿಸಿದ ಅಲ್ಲಿನ ಕನ್ನಡಿಗರು, ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಭಿಯಾನ ಆರಂಭಿಸಿದ್ದಾರೆ.

ಮರಾಠಿಗರ ‘ಝಾಲಾಚ್‌ ಪಾಹಿಜೆ (ಆಗಲೇ ಬೇಕು)’ ಘೋಷಣೆಗೆ ಪ್ರತ್ಯುತ್ತರವಾಗಿ ಕನ್ನಡಿಗರೂ ಈ ಅಭಿಯಾನ ಆರಂಭಿಸಿ, ತಿರುಗೇಟು ನೀಡಿದ್ದಾರೆ. ಹೊಸ ನಕಾಶೆ ಹರಿಬಿಟ್ಟು ‘ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ’ ಎಂದು ಗಟ್ಟಿ ಕೂಗು ಹಾಕಿದ್ದಾರೆ.

ಬೆಳಗಾವಿ, ಬೀದರ್‌, ಭಾಲ್ಕಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಆರು ದಶಕಗಳಿಂದ ಎಂಇಎಸ್‌, ಶಿವಸೇನೆ ಕಾರ್ಯಕರ್ತರು ಹೋರಾಟ ನಡೆಸಿದ್ದಾರೆ. ಇದಕ್ಕೆ ಸೆಡ್ಡು ಹೊಡೆದ ಅಲ್ಲಿನ ಕನ್ನಡಿಗರು ಕೂಡ, ಮಹಾರಾಷ್ಟ್ರದ ಐದು ಪ್ರಮುಖ ಜಿಲ್ಲೆಗಳಲ್ಲಿ ಕನ್ನಡಿಗರಿದ್ದು ಅವುಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಅಭಿಯಾನ ಆರಂಭಿಸಿದ್ದಾರೆ.

ಶನಿವಾರ ಇಡೀ ದಿನ ಈ ನಕಾಶೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಹರಿದಾಡಿತು. ಕನ್ನಡಿಗರೇ ಹೆಚ್ಚಾಗಿರುವ ಜತ್ತ ತಾಲ್ಲೂಕು ಕರ್ನಾಟಕದಲ್ಲಿ ಸೇರ್ಪಡೆ ಮಾಡುವಂತೆ ಅಲ್ಲಿನ ಕನ್ನಡಿಗರು ಒತ್ತಾಯಿಸಿದ್ದಾರೆ.

ಉದ್ಧವ್‌ ಠಾಕ್ರೆ ಆರೋಪ

ಮುಂಬೈ: ‘ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿ ವಿವಾದವನ್ನು ಕೆದಕಿದ್ದಾರೆ’ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಆರೋಪಿಸಿದ್ದಾರೆ.

ಗಡಿ ವಿವಾದ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಅವಮಾನಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಹೇಳಿಕೆ ಕುರಿತು ಶಿಂದೆ ಮೌನವಹಿಸಿದ್ದಾರೆ ಎಂದು ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು