ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲೋಳ ಬ್ಯಾರೇಜ್: ಪ್ರಸ್ತಾವಕ್ಕೆ ಶೀಘ್ರ ಮಂಜೂರಾತಿ- ಗೋವಿಂದ ಕಾರಜೋಳ

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ
Last Updated 18 ಜುಲೈ 2021, 14:45 IST
ಅಕ್ಷರ ಗಾತ್ರ

ಬೆಳಗಾವಿ: ‘ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ 40 ವರ್ಷಗಳು ಹಳೆಯದಾಗಿದ್ದು, ಹೊಸದಾಗಿ ನಿರ್ಮಿಸುವ ₹ 35 ಕೋಟಿ ವೆಚ್ಚದ ಪ್ರಸ್ತಾವಕ್ಕೆ ತಕ್ಷಣವೇ ಮಂಜೂರಾತಿ ನೀಡಬೇಕು’ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು.

ಇಲ್ಲಿನ ಪ್ರವಾಸಿಮಂದಿರದಲ್ಲಿ ಭಾನುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘1980ರಲ್ಲಿ ನಿರ್ಮಿಸಲಾಗಿರುವ 0.60 ಟಿ.ಎಂ.ಸಿ. ಸಾಮರ್ಥ್ಯದ ಈ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಆಗುತ್ತಿಲ್ಲ. ಹೊಸದಾಗಿ ನಿರ್ಮಾಣದ ಪ್ರಸ್ತಾವ ಬಾಕಿ ಇದೆ’ ಎಂದು ನೀರಾವರಿ ಇಲಾಖೆ ಎಂಜಿನಿಯರ್ ಸಿ.ಡಿ. ಪಾಟೀಲ ತಿಳಿಸಿದರು. ಮೊಬೈಲ್‌ ಫೋನ್ ಮೂಲಕ ಆ ಇಲಾಖೆಯ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ ಸಚಿವರು ಮಂಜೂರಾತಿ ನೀಡುವಂತೆ ಸೂಚಿಸಿದರು.

‘ಕಲ್ಲೋಳ ಬ್ಯಾರೇಜ್ ನಿರ್ಮಾಣದಿಂದ ರಾಜಾಪುರ ಹಾಗೂ ಕಾಳಮ್ಮವಾಡಿ ಬ್ಯಾರೇಜ್‌ನಿಂದ ಬಿಡುಗಡೆಯಾಗುವ ನೀರು ಸಂಗ್ರಹಕ್ಕೆ ಅನುಕೂಲ ಆಗುತ್ತದೆ’ ಎಂದರು.

‘ಮಹಾರಾಷ್ಟ್ರದಲ್ಲೂ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ’ ಎಂದು ಹೇಳಿದರು.

₹ 2,100 ಕೋಟಿ ಮಂಜೂರು:

‘ಜಲಜೀವನ ಅಭಿಯಾನ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿದ್ದು, ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಕ್ಟೋಬರ್ ಮೊದಲ ವಾರದ ಚಾಲನೆ ನೀಡಬೇಕು. 8.52 ಲಕ್ಷ ಮನೆಗಳಿಗೆ ನಳಗಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರ ₹ 2,100 ಕೋಟಿ ಮಂಜೂರು ಮಾಡಿದೆ. 918 ಜನವಸತಿಗಳಿಗೆ ಡಿಪಿಆರ್‌ ಆಗಿದೆ. ₹ 147 ಕೋಟಿ ಬಿಡುಗಡೆಯಾಗಿದ್ದು, ₹ 106 ಕೋಟಿ ಖರ್ಚಾಗಿದೆ’ ಎಂದು ತಿಳಿಸಿದರು.

‘ಹೊಸ ಕೊಳವೆಬಾವಿ ಬದಲು ಇರುವ ಕೊಳವೆಬಾವಿಗಳ ದುರಸ್ತಿ, ಮರುಪೂರಣಕ್ಕೆ ಆದ್ಯತೆ ನೀಡಬೇಕು. ನದಿಗಳ ನೀರು ಬಳಕೆ ಮಾಡಿಕೊಳ್ಳಬೇಕು. ಕುಡಿಯುವ ನೀರು ಯೋಜನೆ ಅನುಷ್ಠಾನದ ಬಳಿಕ ವಿದ್ಯುತ್ ಬಿಲ್ ಪಾವತಿ ಕುರಿತು ಗೊಂದಲ ಉಂಟಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು’ ಎಂದು ಸೂಚಿಸಿದರು.

ಮುರಗೋಡ ನೀರು ಸರಬರಾಜು ಯೋಜನೆಗೆ ಎಕ್ಸಪ್ರೆಸ್ ಫೀಡರ್ ಲೈನ್ ಮೂಲಕ ವಿದ್ಯುತ್ ಸಂಪರ್ಕ ವಿಳಂಬಕ್ಕೆ ಕಾರಣವಾದ ಹೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ತಕ್ಷಣವೇ ಸಂಪರ್ಕ ಕಲ್ಪಿಸಿ ವರದಿ ಸಲ್ಲಿಸಬೇಕು’ ಎಂದು ತಾಕೀತು ಮಾಡಿದರು.

ಲಸಿಕೆಗೆ ಸೂಚನೆ:

‘ಸಂಭವನೀಯ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಿದರೆ ಅವರಿಗೆ ಚಿಕಿತ್ಸೆ ನೀಡುವಾಗ ತಾಯಂದಿರಿಗೂ ಅವಕಾಶ ನೀಡಬೇಕಾಗುತ್ತದೆ. ಆದ್ದರಿಂದ ತಾಯಂದಿರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಅಗತ್ಯವಿದೆ’ ಎಂದು ಜಿ.ಪಂ. ಸಿಇಒ ಎಚ್.ವಿ. ದರ್ಶನ್ ಪ್ರತಿಪಾದಿಸಿದರು.

ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೊತೆ ಮೊಬೈಲ್‌ ಫೋನ್‌ನಲ್ಲಿ ಚರ್ಚಿಸಿದ ಸಚಿವರು, ‘15 ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ತಾಯಂದಿರಿಗೂ ಲಸಿಕಾಕರಣದ ಆದ್ಯತಾ ಗುಂಪಿನಲ್ಲಿ ಸೇರ್ಪಡೆಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಈ ವಿಷಯ ಮುಖ್ಯಮಂತ್ರಿ ಜೊತೆ ಚರ್ಚಿಸಿ ಸುತ್ತೋಲೆ ಹೊರಡಿಸಲಾಗುವುದು’ ಎಂದು ತಿಳಿಸಿದರು.

ಆಮ್ಲಜನಕ ಘಟಕ ಅಗತ್ಯ:

‘ಆಮ್ಲಜನಕ ಉತ್ಪಾದನಾ ಘಟಕಗಳನ್ನು ಇನ್ನೂ ಕೆಲ ತಾಲ್ಲೂಕುಗಳಲ್ಲಿ ಆರಂಭಿಸುವ ಅಗತ್ಯವಿದೆ. ಚಿಕ್ಕೋಡಿ ಕೋವಿಡ್ ತಪಾಸಣಾ ಪ್ರಯೋಗಾಲಯ ಸದ್ಯದಲ್ಲೇ ಕಾರ್ಯಾರಂಭಿಸಲಿದೆ. ತಜ್ಞ ಸಿಬ್ಬಂದಿಯನ್ನು ರಾಜ್ಯಮಟ್ಟದಿಂದ ಒದಗಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಡಿಎಚ್ಒ ಡಾ.ಎಸ್.ವಿ. ಮುನ್ಯಾಳ ಮಾಹಿತಿ ನೀಡಿದರು.

‘ಮೊದಲ ಹಾಗೂ 2ನೇ ಡೋಸ್ ಸೇರಿ ಒಟ್ಟಾರೆ 14.74 ಲಕ್ಷ ಕೋವಿಡ್ ಲಸಿಕೆ ನೀಡಲಾಗಿದೆ’ ಎಂದು ಜಿಲ್ಲಾ ಲಸಿಕಾಧಿಕಾರಿ ಡಾ.ಐ.ಪಿ. ಗಡಾದ ವಿವರಿಸಿದರು.

ಪ್ರಾದೇಶಿಕ ಆಯುಕ್ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎಎಸ್ಪಿ ಅಮರನಾಥ್ ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT