ಬೈಲಹೊಂಗಲ: ಬಿಜೆಪಿಯ ಒಡಕಿನ ಲಾಭ ಪಡೆಯಬೇಕು ಎಂಬ ಯತ್ನದಲ್ಲಿ ಕಾಂಗ್ರೆಸ್, ಒಗ್ಗಟ್ಟಿನಿಂದ ಚುನಾವಣೆಗೆ ಹೋಗಬೇಕು ಎಂಬ ತವಕದಲ್ಲಿ ಬಿಜೆಪಿ. ಎರಡೂ ರಾಷ್ಟ್ರೀಯ ಪಕ್ಷಗಳ ಕಣ್ಣು ತಪ್ಪಿಸಿ ಲಾಭ ಮಾಡಿಕೊಳ್ಳಬೇಕು ಎಂಬ ತಂತ್ರಗಾರಿಕೆಯಲ್ಲಿ ಜೆಡಿಎಸ್.
ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಸದ್ಯದ ಸ್ಥಿತಿ ಇದು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಜತೆಗೆ ಪ್ರಾದೇಶಿಕ ಪಕ್ಷಗಳಿಗೂ ಮಣೆ ಹಾಕಿದ ಇತಿಹಾಸ ಇಲ್ಲಿದೆ.
ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ, ಕೆಜೆಪಿ, ಜನತಾಪಕ್ಷ, ಜನತಾದಳ, ಜೆಡಿಯು ಗೆಲುವು ಕಂಡಿವೆ. ಮೂರು ದಶಕಗಳ ನಂತರ, ಕಾಂಗ್ರೆಸ್ ಮತ್ತೆ ತನ್ನ ಖಾತೆ ತೆರೆದಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಂಡಾಯದ ಲಾಭ ಪಡೆದು ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ ಗೆದ್ದರು. ಹೀಗಾಗಿ, ಈ ಬಾರಿ ಬಂಡಾಯ ಶಮನನಗೊಳಿಸುವ ಯತ್ನಗಳು ಜೋರಾಗಿಯೇ ನಡೆದಿವೆ.
ಯಾರಿಗೆ ಟಿಕೆಟ್?: 2004, 2008ರ ಚುನಾವಣೆಗಳಲ್ಲಿ ಜಗದೀಶ ಮೆಟಗುಡ್ಡ ಬಿಜೆಪಿಯಿಂದ ಗೆದ್ದಿದ್ದರು. 2013ರ ಚುನಾವಣೆಯಲ್ಲಿ ಡಾ.ವಿಶ್ವನಾಥ ಪಾಟೀಲ ಅವರು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ಶಾಸಕರಾದರು. 2018ರಲ್ಲಿ ಕೆಜೆಪಿ ಕೂಡ ಬಿಜೆಪಿಯಲ್ಲೇ ವಿಲೀನವಾಯಿತು. ವಿಶ್ವನಾಥ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಜಗದೀಶ ಮೆಟಗುಡ್ಡ ಬಂಡಾಯದ ಬಾವುಟ ಹಾರಿಸಿದರು. ಇಬ್ಬರ ಜಗಳದ ಲಾಭವನ್ನು ಕೌಜಲಗಿ ಪಡೆದಿದ್ದರು. ಈ ಬಾರಿಯೂ ಜಗದೀಶ ಮೆಟಗುಡ್ಡ ಮತ್ತು ವಿಶ್ವನಾಥ ಪಾಟೀಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿ ವರಿಷ್ಠರು ಬಂಡಾಯ ಶಮನಗೊಳಿಸುತ್ತಾರೆಯೇ ಅಥವಾ ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬುದನ್ನು ಆಧರಿಸಿ ಚುನಾವಣಾ ಕಣ ರಂಗೇರಲಿದೆ.
ಕಾಂಗ್ರೆಸ್‌ನಿಂದ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ.
ಸದ್ಯಕ್ಕೆ ಬಿಜೆಪಿಯ ಇಬ್ಬರೂ ಆಕಾಂಕ್ಷಿಗಳು ‘ಭಾಯಿ...ಭಾಯಿ’ ಎಂದು ಹೊರಟಿದ್ದಾರೆ. ಟಿಕೆಟ್ ಘೋಷಣೆಯಾದ ಬಳಿಕವಷ್ಟೇ ರಾಣಿ ಚನ್ನಮ್ಮನ ಆಶೀರ್ವಾದ ಯಾರಿಗೆ ಸಿಗಲಿದೆ ಎಂಬುದು ನಿಚ್ಚಳವಾಗಲಿದೆ ಎನ್ನುವುದು ಮತದಾರರ ಲೆಕ್ಕಾಚಾರ.
*
ಏಳು ಬಾರಿ ಗೆದ್ದ ಕಾಂಗ್ರೆಸ್
ಬೈಲಹೊಂಗಲ ಕ್ಷೇತ್ರ
(ಸಂಪಗಾಂವ–1 ಕ್ಷೇತ್ರ ಇದ್ದಾಗಿನಿಂದ) ಈವರೆಗೆ 15 ಚುನಾವಣೆ ಕಂಡಿದೆ. ಈ ಪೈಕಿ 7 ಬಾರಿ ಕಾಂಗ್ರೆಸ್, ತಲಾ 2 ಬಾರಿ ಜನತಾದಳ, ಬಿಜೆಪಿ, ಜೆಡಿಯು, ತಲಾ ಒಂದು ಬಾರಿ ಜನತಾ ಪಕ್ಷ ಮತ್ತು ಕೆಜಿಪಿ ಗೆಲುವು ಸಾಧಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.