ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ಕಾಡಿನ ಮಡಿಲಲ್ಲಿ ಬಂಡಾಯದ ಬೇಗುದಿ

ಎಂಇಎಸ್‌ ಪ್ರಾಬಲ್ಯ ಮಣ್ಣು ಮಾಡಿದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ ಮಿಂಚಿನ ಸಂಚಾರ
Last Updated 26 ಮಾರ್ಚ್ 2023, 8:54 IST
ಅಕ್ಷರ ಗಾತ್ರ

ಖಾನಾಪುರ: ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್‌ಗಾಗಿ ಇನ್ನಿಲ್ಲದ ಪೈಪೋಟಿ ನಡೆದಿದೆ. ಮರಾಠಿ ಸಾಂಪ್ರದಾಯಿಕ ಮತಗಳೇ ನಿರ್ಣಾಯವಾಗಿರುವ ಈ ಕ್ಷೇತ್ರದಲ್ಲಿ ಮರಾಠಿ ಭಾಷಿಕ ಆಕಾಂಕ್ಷಿಗಳೇ ಹೆಚ್ಚು. ಒಂದೆಡೆ ಬಂಡಾಯ–ಇನ್ನೊಂದೆಡೆ ಒಳಬೇಗುದಿ; ಈ ಎರಡೂ ಅಗ್ನಿಪರೀಕ್ಷೆಗಳನ್ನು ದಾಟುವುದು ಪಕ್ಷಗಳಿಗೆ ಅನಿವಾರ್ಯವಾಗಿದೆ.

ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದು ನಿರೀಕ್ಷಿತ. ಆದರೆ, ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯೂ ಆಗಿದ್ದ ಇರ್ಫಾನ್‌ ತಾಳಿಕೋಟಿ ಬಂಡಾಯ ಏಳುವ ಮುನ್ಸೂಚನೆ ನೀಡಿದ್ದಾರೆ. ಉದ್ಯಮಿ ಇರ್ಫಾನ್‌ ಕರೀಂ ಲಾಲಾ ತೆಲಗಿ ಅವರ ಅಳಿಯ.

ಕಳೆದ ಬಾರಿ ಬಿಜೆಪಿ ಹಾಗೂ ಎಂಇಎಸ್‌ನಲ್ಲಿ ಉಂಟಾದ ಬಂಡಾಯವೇ ಅಂಜಲಿ ಅವರಿಗೆ ನೆರವಾಗಿತ್ತು. ಈ ಬಾರಿ ಕಾಂಗ್ರೆಸ್‌ನಲ್ಲಿಯೇ ಬಂಡಾಯ ಏಳುವ ಸೂಚನೆಗಳು ಸವಾಲಾಗಿ ಪರಿಣಮಿಸಿವೆ. 2013ರಲ್ಲಿ ಸ್ವತಃ ಅಂಜಲಿ ಅವರೇ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಆಗಿ ಸೋಲುಂಡಿದ್ದು ಇಲ್ಲಿ ಗಮನಾರ್ಹ.

‘ಡಾ.ಅಂಜಲಿ ಹೆಚ್ಚಿನ ಸಮಯ ಕ್ಷೇತ್ರದಲ್ಲಿ ಇರುವುದಿಲ್ಲ. ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಸಾಮಾನ್ಯರು ಸಮಸ್ಯೆ ಹೇಳಿಕೊಳ್ಳಲು ಸಿಗುವುದಿಲ್ಲ. ಚುನಾವಣೆ ಹತ್ತಿರ ಬಂದಾಗ ಕ್ಷೇತ್ರಕ್ಕೆ ಬಂದಿದ್ದಾರೆ’ ಎಂಬ ಆರೋಪ ರಾಜಕೀಯ ವಲಯದಲ್ಲಿದೆ.

‘ಖಾನಾಪುರ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಒಬ್ಬ ಶಾಸಕಿ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಎಂಇಎಸ್‌ನಿಂದ ಆಯ್ಕೆಯಾದ ಬಹುಪಾಲು ಶಾಸಕರು ವಿಧಾನಸಭೆಯಲ್ಲಿ ಪ್ರತಿಭಟನೆಯಲ್ಲಿ ಕಳೆಯುತ್ತಿದ್ದರು. ಖಾನಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಬೇಡಿಕೆಯ ಗಲಾಟೆ ಮಾಡುತ್ತಿದ್ದರು. ಆದರೆ, ಡಾ.ಅಂಜಲಿ ಆ ಸಂಪ್ರದಾಯ ಮುರಿದಿದ್ದಾರೆ’ ಎಂಬುದು ಕ್ಷೇತ್ರದಲ್ಲಿ ಕೇಳಿಬರುವ ಮಾತು.

ಬಿಜೆಪಿಯಲ್ಲೇ ಹೆಚ್ಚಿನ ಪೈಪೋಟಿ: ಈ ಬಾರಿ ಬಿಜೆಪಿ ಟಿಕೆಟ್‌ ತಮಗೇ ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ ಡಾ.ಸೋನಾಲಿ ಸರನೋಬತ್‌. ಖ್ಯಾತ ವೈದ್ಯರಾಗಿರುವ ಸೋನಾಲಿ ಕಳೆದ ಐದು ವರ್ಷಗಳಿಂದ ಖಾನಾಪುರದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಬಿಜೆಪಿ ಹಿರಿಯ ನಾಯಕರೊಂದಿಗೆ ಗುರುತಿಸಿಕೊಂಡ ಅವರು, ಅಂಜಲಿ ವಿರುದ್ಧ ಕಣಕ್ಕಿಳಿಯುವ ಉಮೇದಿನಲ್ಲಿದ್ದಾರೆ. ಜಿಲ್ಲೆಯ ಹಲವು ಬಿಜೆಪಿ ಮುಖಂಡರೂ ಡಾ.ಸೋನಾಲಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ವಿಶೇಷ.

ಎಂಇಎಸ್‌ ಬಿಟ್ಟು ಬಿಜೆಪಿ ಸೇರಿರುವ, ಮಾಜಿ ಶಾಸಕ ಅರವಿಂದ ಪಾಟೀಲ, ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಆಗಿದ್ದ ವಿಠಲ ಹಲಗೇಕರ, ಬಿಜೆಪಿ ಕಟ್ಟಾ ಕಾರ್ಯಕರ್ತ, ಉದ್ಯಮಿ ಪ್ರಮೋದ ಕೊಚೇರಿ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಎಲ್ಲರೂ ತಮ್ಮ ತಮ್ಮ ಆತ್ಮವಿಶ್ವಾಸ
ದೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ.

ಏಕಮಾತ್ರ ಕನ್ನಡಿಗ: ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಆಗಿರುವ ನಾಸಿರ್‌ ಬಾಗವಾನ ಖಾನಾಪುರ ಕ್ಷೇತ್ರದ ಏಕಮಾತ್ರ ಕನ್ನಡಿಗ. ಉಳಿದವರೆಲ್ಲರೂ ಮರಾಠಿಗರು. ಜೆಡಿಎಸ್‌ನಿಂದಲೇ ಐದು ಬಾರಿ ಕಣಕ್ಕಿಳಿದು ಸೋಲುಂಡಿದ್ದಾರೆ. ಆದರೂ ಉತ್ಸಾಹ ಕಳೆದುಕೊಳ್ಳದ ಅವರು ಆರನೇ ಬಾರಿಗೆ ಮರಳಿ ಯತ್ನ ಮಾಡುತ್ತಿದ್ದಾರೆ. ಈ ಬಾರಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಚೇರ್ಮನ್‌ ಆಗಿದ್ದು ಅವರಿಗೆ ‘ಪ್ಲಸ್‌ ಪಾಯಿಂಟ್‌’ ಆಗಲಿದೆ ಎಂಬುದು ಲೆಕ್ಕಾಚಾರ.

ಈ ಹಿಂದೆ ಪ್ರಾಬಲ್ಯ ಸಾಧಿಸಿದ್ದ ಎಂಇಎಸ್‌ ಸೋಲುವುದುಕ್ಕೆ ಬಂಡಾಯವೇ ಕಾರಣವಾಗಿತ್ತು. ಕಳೆದ ಬಾರಿ ಬಿಜೆಪಿ ಸೋಲುವುದಕ್ಕೂ ಬಂಡಾಯವೇ ದಾರಿಯಾಗಿತ್ತು. ಈ ಬಾರಿ ಕಾಂಗ್ರೆಸ್‌, ಬಿಜೆಪಿ, ಎಂಇಎಸ್‌; ಮೂರೂ ಕಡೆಗಳಲ್ಲಿ ಬಂಡಾಯದ ಸೂಚನೆಗಳಿವೆ. ಹಾಗಾಗಿ, ಮತದಾರನಿಂದ ಫಲಿತಾಂಶವನ್ನು ಅಂದಾಜಿಸುವುದಕ್ಕೂ ಸಾಧ್ಯವಾಗುತ್ತಿಲ್ಲ.

12 ಬಾರಿ ಗೆದ್ದ ಎಂಇಎಸ್‌

ಖಾನಾಪುರ ಕ್ಷೇತ್ರದಲ್ಲಿ ಒಟ್ಟು 14 ಬಾರಿ ಚುನಾವಣೆ ನಡೆಸಿದ್ದು, ಇದರಲ್ಲಿ 12 ಬಾರಿ ಎಂಇಎಸ್‌ ಬೆಂಬಲಿತರೇ ಚುನಾಯಿತರಾಗಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಪ್ರಹ್ಲಾದ ರೇಮಾನಿ ಹಾಗೂ 2018ರಲ್ಲಿ ಕಾಂಗ್ರೆಸ್‌ನಿಂದ ಡಾ.ಅಂಜಲಿ ಆಯ್ಕೆಯಾಗಿದ್ದಾರೆ.

ಶೇಕಡ 70ರಷ್ಟು ಅರಣ್ಯ ಪ್ರದೇಶ ಹೊಂದಿದ ಖಾನಾಪುರ, ರಾಜ್ಯದ ವಿಶೇಷ ವಿಧಾನ ಸಭಾ ಕ್ಷೇತ್ರ. ಶೇ 60ರಷ್ಟು ಮರಾಠಿ ಭಾಷಿಗರೇ ಇರುವ ಈ ಕ್ಷೇತ್ರದಲ್ಲಿ ಇದೂವರೆಗೆ ಒಬ್ಬ ಕನ್ನಡಿಗ ಕೂಡ ಶಾಸಕರಾಗಿ ಆಯ್ಕೆಯಾಗಿಲ್ಲ. ಬಿಜೆಪಿ, ಕಾಂಗ್ರೆಸ್‌, ಎಂಇಎಸ್‌ನಿಂದ ಆಯ್ಕೆಯಾದವರೆಲ್ಲರೂ ಮರಾಠಿಗರೇ ಆಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT