ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ -ದರ್ಜೆ ದೇವಸ್ಥಾನಗಳ ಅಭಿವೃದ್ಧಿಗೆ ಅಭಿಯಾನ: ಸಚಿವೆ ಶಶಿಕಲಾ ಜೊಲ್ಲೆ

Last Updated 22 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದಲ್ಲಿರುವ 34,219 ‘ಸಿ’ ದರ್ಜೆಯ ದೇವಾಲಯಗಳನ್ನು ಭಕ್ತರ ಸಹಕಾರದಲ್ಲಿ ಅಭಿವೃದ್ಧಿಪಡಿಸಲು ವಿಶೇಷ ಅಭಿಯಾನ ರೂಪಿಸಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಬಿಜೆಪಿಯ ಡಾ.ತೇಜಸ್ವಿನಿ ಗೌಡ ಪ್ರಶ್ನೆಗೆ ಅವರು, ‘ರಾಜ್ಯದಲ್ಲಿ ‘ಎ’ ದರ್ಜೆಯ 205, ‘ಬಿ’ ದರ್ಜೆಯ 139 ಮತ್ತು ‘ಸಿ’ ದರ್ಜೆಯ 34,219 ದೇವಸ್ಥಾನಗಳಿವೆ. ‘ಸಿ’ ದರ್ಜೆಯ ದೇವಸ್ಥಾನಗಳಿಗೆ ಹೆಚ್ಚು ಆದಾಯವಿಲ್ಲ. ಆದ್ದರಿಂದ ವಾರ್ಷಿಕ ₹ 48,000 ತಸ್ತೀಕ್‌ ಅನುದಾನ ನೀಡಲಾಗುತ್ತಿದೆ’ ಎಂದರು.

‘ಎ’ ಮತ್ತು ‘ಬಿ’ ದರ್ಜೆಯ ದೇವಸ್ಥಾನಗಳಿಗೆ ಸಾಕಷ್ಟು ವರಮಾನವಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಸಾಮಾನ್ಯ ಸಂಗ್ರಹಣ ನಿಧಿಯಿಂದ ಅನುದಾನ ನೀಡಲಾಗುತ್ತಿದೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ‘ಸಿ’ ದರ್ಜೆಯ ದೇವಸ್ಥಾನಗಳನ್ನು ಭಕ್ತರ ಸಹಕಾರ ಪಡೆದು ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿಯೇ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

‘ಅರ್ಚಕರಿಗೆ ನೀಡುತ್ತಿರುವ ತಸ್ತೀಕ್‌ ಮೊತ್ತ ಹೆಚ್ಚಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಕಾಶಿಯಾತ್ರೆಗೆ ಸಹಾಯಧನ: ‘ಕಾಶಿ ಯಾತ್ರೆ ಕೈಗೊಳ್ಳುವ ರಾಜ್ಯದ ಜನರಿಗೆ ಸಹಾಯಧನ ನೀಡಲು ವಿಶೇಷ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

ಎಂಟು ಮಸೂದೆಗಳಿಗೆ ಮೇಲ್ಮನೆ ಅಸ್ತು
ಬೆಳಗಾವಿ (ಸುವರ್ಣ ವಿಧಾನಸೌಧ):
ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ಎಂಟು ಮಸೂದೆಗಳಿಗೆ ವಿಧಾನ ಪರಿಷತ್‌ ಬುಧವಾರ ಅಂಗೀಕಾರ ನೀಡಿತು.

ಕರ್ನಾಟಕ ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ಮಸೂದೆ–2021, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ–2021, ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ–2021, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ–2021, ಕರ್ನಾಟಕ ನಗರ ಪಾಲಿಕೆಗಳ ಮತ್ತು ಇತರ ಕೆಲವು ಕಾನೂನುಗಳ (ತಿದ್ದುಪಡಿ) ವಿಧೇಯಕ–2021, ಕರ್ನಾಟಕ ರಾಜ್ಯ ಆಯುಷ್‌ ಮಸೂದೆ–2021, ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ಎರಡನೇ ತಿದ್ದುಪಡಿ) ಮಸೂದೆ–2021 ಮತ್ತು ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯ ಮಸೂದೆ–2021ಕ್ಕೆ ವಿಧಾನ ಪರಿಷತ್‌ ಒಪ್ಪಿಗೆ ನೀಡಿತು.

ಹೊಸದಾಗಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಜೆಡಿಎಸ್‌ನ ಮರಿತಿಬ್ಬೇಗೌಡ ಸೇರಿದಂತೆ ಕೆಲವರು ವಿರೋಧಿಸಿದರು. ಕರ್ನಾಟಕ ನಗರ ಪಾಲಿಕೆಗಳು ಮತ್ತು ಇತರ ಕೆಲವು ಕಾನೂನುಗಳ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT