ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಜಿಲ್ಲೆಯಲ್ಲಿ ಮೋಡ ಬಿತ್ತನೆ ಇಂದಿನಿಂದ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ, ರೈತರಿಗೆ ಸಮಾಧಾನ
Published 29 ಸೆಪ್ಟೆಂಬರ್ 2023, 6:15 IST
Last Updated 29 ಸೆಪ್ಟೆಂಬರ್ 2023, 6:15 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಲಗಮ್‌ ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ಸ್ವಂತ ಖರ್ಚಿನಲ್ಲಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ರಾಜ್ಯ ಸರ್ಕಾರ ಗುರುವಾರ ಅನುಮತಿ ನೀಡಿದೆ. ಸೆ‍ಪ್ಟೆಂಬರ್‌ 29ರಿಂದ ಮೂರು ದಿನ ಈ ಪ್ರಕ್ರಿಯೆ ನಡೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆಯ ವಿಮಾನ ಹಾರಲಿದೆ. ಎಲ್ಲೆಲ್ಲಿ ಮೋಡಗಳಿವೆಯೋ ಅಲ್ಲಿ ಬಿತ್ತನೆ ಮಾಡಲಾಗುವುದು’ ಎಂದು ತಿಳಿಸಿದರು.

ಬೆಳಗಾವಿ, ಖಾನಾಪುರವನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ, ‘ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಅವು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಲ್ಲ. ಬರದ ಸ್ಥಿತಿ ಅವಲೋಕಿಸಲು ಅವರು ಹಳೆಯ ಮಾನದಂಡಗಳನ್ನೇ ಅನುಸರಿಸುತ್ತಿದ್ದಾರೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹಾಗಾಗಿ ಆ ಮಾರ್ಗಸೂಚಿ ಬದಲಿಸಬೇಕೆಂಬ ಕೂಗು ಇದೆ. ಆದರೆ, ಎರಡೂ ತಾಲ್ಲೂಕುಗಳ ರೈತರಿಗೆ ಜಿಲ್ಲಾಡಳಿತದಿಂದ ಸಹಾಯ ಮಾಡುತ್ತೇವೆ’ ಎಂದರು.

‘ಜಿಲ್ಲೆಯಲ್ಲಿ ತಲೆದೋರಿದ ಬರ ಪರಿಸ್ಥಿತಿ ಕುರಿತು ಜಿಲ್ಲಾಡಳಿತ ಎರಡು ಬಾರಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಲ್ಲಿಂದ ಕೇಂದ್ರಕ್ಕೆ ವರದಿ ಸಲ್ಲಿಕೆಯಾದ ನಂತರ, ಕೇಂದ್ರ ಬರ ಅಧ್ಯಯನ ತಂಡದವರು ಪರಿಸ್ಥಿತಿ ಅವಲೋಕಿಸಲು ಬರಲಿದ್ದಾರೆ. ಆದರೆ, ಬರ ಮತ್ತು ನೆರೆ ಯಾವುದೇ ಪರಿಸ್ಥಿತಿಯಲ್ಲೂ ಕೇಂದ್ರದವರು ನಮಗೆ ನೆರವಾಗಿಲ್ಲ’ ಎಂದು ಸತೀಶ ದೂರಿದರು.

‘ನವಿಲುತೀರ್ಥ ಜಲಾಶಯದಲ್ಲಿ ನೀರು ಸಂಗ್ರಹ ಪ್ರಮಾಣ ಕಡಿಮೆಯಿದ್ದರೂ, ಕಾಲುವೆಗೆ ಹರಿಸುತ್ತಿರುವುದು ಸರಿಯೇ?’ ಎಂಬ ಪ್ರಶ್ನೆಗೆ, ‘ಈ ಜಲಾಶಯದಿಂದ ಒಂದೂವರೆ ಟಿ.ಎಂ.ಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಕಾಲುವೆಗಳಿಗೆ ಹರಿಸಲಾಗುತ್ತಿದೆ’ ಎಂದು ಸಮರ್ಥಿಸಿಕೊಂಡರು.

‘ಮೂರ್ನಾಲ್ಕು ತಿಂಗಳಿಗೊಮ್ಮೆ ಜನತಾದರ್ಶನ ಕಾರ್ಯಕ್ರಮ ನಡೆಸಬೇಕು ಎಂದುಕೊಂಡಿದ್ದೇವೆ. ಈಚೆಗೆ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 760 ಅರ್ಜಿ ಸ್ವೀಕಾರವಾಗಿವೆ. ಆ ಸಮಸ್ಯೆಗಳ ಇತ್ಯರ್ಥಕ್ಕೆ ಮೂರು ತಿಂಗಳು ಬೇಕಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT