ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಉಚಿತ ಚಿಕಿತ್ಸೆ: ಕ್ರಮಕ್ಕೆ ಸೂಚನೆ

ಅಧಿಕಾರಿಗಳ ಸಭೆ ನಡೆಸಿದ ಕವಟಗಿಮಠ
Last Updated 2 ಜೂನ್ 2021, 15:42 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್ ಸೋಂಕುಪೀಡಿತ ಬಡ ಜನರಿಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಉಚಿತವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಸೂಚಿಸಿದರು.

ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಸಾಮಾನ್ಯ ಬಡವರಿಗಾಗಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಶೇ 50ರಷ್ಟು ಹಾಸಿಗೆಗಳನ್ನು ಆಯುಷ್ಮಾನ್‌ ಭಾರತ ಯೋಜನೆಯಲ್ಲಿ ಬಡವರಿಗೋಸ್ಕರ ಕಾಯ್ದಿರಿಸಲು ಸರ್ಕಾರದ ಆದೇಶವಾಗಿದೆ. ಅದನ್ನು ಅನುಷ್ಠಾನಗೊಳಿಸಬೇಕು. ಹಾಸಿಗೆಗಳೊಂದಿಗೆ ಆಮ್ಲಜನಕ ವ್ಯವಸ್ಥೆಯನ್ನೂ ಕಲ್ಪಿಸಬೇಕು’ ಎಂದು ತಾಕೀತು ಮಾಡಿದರು.

‘ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಗಮನಹರಿಸಬೇಕು. ಯಾವ್ಯಾವ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಲಭ್ಯ ಇದೆ ಎನ್ನುವ ಮಾಹಿತಿ ಸಾರ್ವಜನಿಕರಿಗೆ ನೀಡಬೇಕು. ಕೊರೊನಾ ಬಾಧಿತರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ದೊರೆಯುವಂತಾಗಲಿ. ಇದಕ್ಕೆ ನಗರದ 21 ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಪಡೆಯಬೇಕು’ ಎಂದರು.

‘ಇತರ ರೋಗಗಳಿಂದ ಮತ್ತು ವಯೋಸಹಜ ಕಾಯಿಲೆಯಿಂದ ಮೃತಪಟ್ಟವರನ್ನು ತಪಾಸಣೆಗೆ ಒಳಪಡಿಸಿದ ಬಳಿಕವಷ್ಟೆ ಶವಸಂಸ್ಕಾರ ನೆರವೇರಿಸಬೇಕು. ಅಂತ್ಯಸಂಸ್ಕಾರದ ವೇಳೆ ಹೆಚ್ಚಿನ ಜನರು ಸೇರುವುದನ್ನು ನಿಯಂತ್ರಿಸಬೇಕು. ಗ್ರಾಮಗಳಲ್ಲಿ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ಬೇಗನೆ ಔಷಧೋಪಚಾರ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಗರ್ಭಿಣಿ ಮತ್ತು ಬಾಣಂತಿಯರಿಗೆ ಸರ್ಕಾರದಿಂದ ನೀಡುವ ಪೌಷ್ಟಿಕ ಆಹಾರ ಕಿಟ್‌ಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಮುಂಗಾರು ಹಂಗಾಮು ಶುರುವಾಗಲಿದ್ದು, ಕೃಷಿ ಇಲಾಖೆಯಿಂದ ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಸಮರ್ಪಕವಾಗಿ ವಿತರಿಸಬೇಕು. ವಿತರಣೆ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಆಗುವಂತೆ ನಿಗಾ ವಹಿಸಬೇಕು. ಹೂ, ಹಣ್ಣು ಮತ್ತು ತರಕಾರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನ ಅವರು ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಫಲಾನುಭವಿಗಳ ಪಟ್ಟಿಯನ್ನು ಕೂಡಲೇ ಸಿದ್ಧಪಡಿಸಿ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಟಿಎಚ್‌ಒ ಐ.ಪಿ. ಗಡಾದ, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ಚಾಂದನಿ ದೇವಡಿ, ಉಪ ಕೃಷಿ ನಿರ್ದೇಶಕ ಎಚ್.ಡಿ. ಕೊಳೇಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT