ಶುಕ್ರವಾರ, ಫೆಬ್ರವರಿ 21, 2020
19 °C

ಸರ್ಕಾರದ ವಿರುದ್ಧ ಮಾತನಾಡಿದರೆ ದೇಹದ್ರೋಹಿ ಪಟ್ಟ: ಡಾ.ಯಲ್ಲಪ್ಪ ಹಿಮ್ಮಡಿ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಪ್ರಸ್ತುತ ಸರ್ಕಾರದ‌ ವಿರುದ್ಧ ಮಾತನಾಡುವ ಹಕ್ಕು ‌ನಮಗೆ ಇಲ್ಲದಾಗಿದೆ. ಒಂದು ವೇಳೆ ಮಾತನಾಡಿದರೆ, ದೇಶ ವಿರೋಧಿಗಳೆಂದು ಬಿಂಬಿಸುತ್ತಾರೆ’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕ ಭಾನುವಾರ ಹಮ್ಮಿಕೊಂಡಿದ್ದ ‘ನಾವು-ನಮ್ಮತನ’  ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೆಲವು ದಿನಗಳ ಹಿಂದೆ ಸಿರಾಜ್‌ ಬಿಸ್ರಳ್ಳಿ ಅವರು ತಮ್ಮ ಕವಿತೆಯಲ್ಲಿ ಕೇಂದ್ರ ‌ಸರ್ಕಾರದ ನಡೆಯನ್ನು ವಿಮರ್ಶಿಸಿದರು. ಆದರೆ, ಕೆಲವರು  ಅವರ ವಿರುದ್ಧ ದೂರು ನೀಡಿದರು‌. ನಾವೇ ಆಯ್ಕೆ ಮಾಡಿ ಕಳುಹಿಸಿದ ನಾಯಕರಿಂದ ರಚನೆಗೊಂಡ ಸರ್ಕಾರದ ವಿರುದ್ಧ ಮಾತಾಡದೆ ಇರುವ ಪರಿಸ್ಥಿತಿ ಇದೆ’ ಎಂದರು.

'ಸರ್ಕಾರವು ಸಾಹಿತಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವಿರುವುದನ್ನೇ ಮರೆತಿದೆ. ಆದ ಕಾರಣ ಸಾಹಿತಿಗಳು ಬರೆಯುವುದರೊಂದಿಗೆ ದನಿ ಇಲ್ಲದವರಿಗೆ ದನಿಯಾಗಬೇಕು’ ಎಂದು ತಿಳಿಸಿದರು.

‘ನಮ್ಮ ಕಾವ್ಯ, ಕವಿತೆಗಳನ್ನು ಬೇರೆಯವರಿಗೆ ಮಾರಿಕೊಳ್ಳಬಾರದು. ನಮ್ಮೊಳಗಿನ ಭಾವನೆ, ಸಾಮಾಜಿಕ ಕಳಕಳಿ ನಮ್ಮ ಸಾಹಿತ್ಯದಲ್ಲಿ ವ್ಯಕ್ತವಾಗಬೇಕು. ಲೇಖನಿ ಖಡ್ಗದಂತೆ ಕೆಲಸ ಮಾಡಬೇಕು. ಅಹಿಂಸೆ ಮಾರ್ಗ ಸಾಹಿತಿಗಳದಾಗಬೇಕು’ ಎಂದರು.

‘ಪ್ರತಿಭೆಗಳಿಗೆ ವೇದಿಕೆ ಸಿಗುತ್ತಿಲ್ಲ. ವೇದಿಕೆಗಳು ಕೂಡ ಜಾತಿಗಳಿಗೆ ಸೀಮಿತವಾಗಿವೆ. ಆದರೆ ನಿಮ್ಮ ಬೆಳವಣಿಗೆ, ಪ್ರೋತ್ಸಾಹಕ್ಕೆ ಬಂಡಾಯ ಸಂಘಟನೆ ನಿಮ್ಮೊಂದಿಗೆ ಇದೆ’ ಎಂದು ಭರವಸೆಯ ಮಾತುಗಳನ್ನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ.ಅನಸೂಯಾ ಕಾಂಬಳೆ ವಹಿಸಿ ಮಾತನಾಡಿ, ‘ಖಡ್ಗವಾಗಲಿ ಕಾವ್ಯ, ಜನರ ನೋವಿಗೆ‌ ಮಿಡಿಯುವ ಪ್ರಾಣ ‌ಮಿತ್ರ, ಎಂಬ ಘೋಷ ವಾಕ್ಯವಿದೆ. ಕವಿತೆಯು ಸಹ ಅಹಿಂಸಾತ್ಮಕವಾಗಿ ಯುದ್ಧ, ಚಳವಳಿ ನಡೆಸುತ್ತಿದೆ ಎಂದರ್ಥ. ಅದೇ ‌ರೀತಿ ‌ಕಾಲದಿಂದ ಕಾಲಕ್ಕೆ ಪ್ರಭುದ್ವ ಹಾಗೂ ಜನರ ನಡುವೆ ಅಂತರ್ಯುದ್ಧವನ್ನು ಕಾವ್ಯ ಇವತ್ತಿಗೂ ಮಾಡುತ್ತಿದೆ’ ಎಂದು ತಿಳಿಸಿದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾವ್ಯ ಸದ್ದು ಮಾಡುತ್ತಿದೆ. ಕವಿತೆ ರಾಜಕೀಯ ಪರ್ಯಾಯ ದನಿ ಎತ್ತುತಿದೆ ಎಂದರೆ ಕಾವ್ಯಕ್ಕೆ ಇರುವ ಶಕ್ತಿ  ಏನು ಎನ್ನುವುದು ತಿಳಿಯುತ್ತದೆ. ‌ಜತೆಗೆ ಸಂವಿಧಾನ, ಕಾನೂನು ಅಲ್ಲ ನಮ್ಮ ರಕ್ಷಣೆಗೆ ಇದೆ. ಎಲ್ಲಿ ನಮ್ಮ ಸಂವಿಧಾನದ ಮೇಲೆ ದಾಳಿಯಾಗುತ್ತದೆಯೋ, ಅಲ್ಲಿ ಪ್ರತಿದಾಳಿಯನ್ನು ಕವಿತೆ ಮಾಡುತ್ತಿದೆ’ ಎಂದು ವಿಶ್ಲೇಷಿಸಿದರು.

‘ಸಾಹಿತಿಗಳಿಗೆ ಹಿಂದಿನ ಓದಿನ ಪರಂಪರೆಯೊಂದಿಗೆ ಇಂದಿನ ರಾಜಕೀಯ ಬೆಳೆವಣಿಗೆ, ಸಾಮಾಜಿಕ ಬದಲಾವಣೆಯ ಬಗ್ಗೆ ಅರಿವು ಇರಬೇಕಾಗುತ್ತದೆ’ ಎಂದು ಹೇಳಿದರು.

‘ಓ ನನ್ನ ಚೇತನ, ಆಗುವ ನೀ ಅನಿಕೇತನ’ ಎಂಬ ಹಾಡಿನ ಮೂಲಕ ಕವಿಗೋಷ್ಠಿ ಆರಂಭಗೊಂಡಿತು. ಗುಲಾಬಿ ‌ಸಸಿ ನಟ್ಟು ಕಾರ್ಯಕ್ರಮಕ್ಕೆ ಚಾಲನೆ ‌ನೀಡಿದರು.

ಅಡಿವೆಪ್ಪ ಇಟಗಿ, ಅಪೂರ್ವಾ ಕಾಂಬಳೆ, ನದೀಮ್ ಸನದಿ, ಉಮೇಶ್ ಮೇಲ್ಕರಿ, ವಿಠ್ಠಲ ದಳವಾಯಿ, ಶಬಾನಾ ಅಣ್ಣಿಗೇರಿ, ವೀರಶ್ರೀ ಸಮಾಜೆ, ಪಲ್ಲವಿ ಕಾಂಬಳೆ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು