ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ: ನಾವೇ ಅಡಿಗಲ್ಲು ಹಾಕುತ್ತೇವೆ ಎಂದ ಕೋಡಿಹಳ್ಳಿ ಚಂದ್ರಶೇಖರ್‌

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ
Last Updated 25 ಆಗಸ್ಟ್ 2021, 11:16 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಮಂಡಳಿ ಐತೀರ್ಪು ನೀಡಿದೆ. ಅದರಂತೆ ನಮ್ಮ ಪಾಲಿನ ನೀರು ಪಡೆದುಕೊಳ್ಳುವ ನಿಟ್ಟಿನಲ್ಲಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಕೂಡಲೇ ಮುಂದಾಗಬೇಕು. ಇಲ್ಲವಾದಲ್ಲಿ ನಾವೇ ಅಡಿಗಲ್ಲು ಹಾಕಿ ಕೆಲಸ ಶುರು ಮಾಡುತ್ತೇವೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿಚಂದ್ರಶೇಖರ್‌ ಎಚ್ಚರಿಕೆ ನೀಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಮಹದಾಯಿ ಅಥವಾ ಕಾವೇರಿ ನದಿ ನೀರಿನ ವಿಚಾರ ರಾಜಕೀಯ ನಾಟಕ ಆಗಬಾರದು’ ಎಂದರು.

‘ಕೃಷ್ಣಾ ನದಿ ನೀರು ಬಳಕೆ ಮಾಡಿಕೊಳ್ಳುವುದಕ್ಕೆ ಈವರೆಗೂ ನಮ್ಮಿಂದ ಸಾಧ್ಯವಾಗಿಲ್ಲ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಂಭೀರವಾಗಿ ಪರಿಗಣಿಸಬೇಕು. ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಿ ಕಾಮಗಾರಿ ಪ್ರಾರಂಭ ಮಾಡಬೇಕು. ಮಹದಾಯಿ ಯೋಜನೆಯನ್ನು ಅಂತರ ರಾಜ್ಯ ಸಮಸ್ಯೆಯಾಗಿ ಮಾರ್ಪಾಡು ಮಾಡಿದ್ದಾರೆ. ಗೋವಾದವರು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಸರ್ಕಾರವು ಅನಗತ್ಯವಾಗಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ’ ಎಂದರು.

ಸಾರಿಗೆ ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸತ್ಯಾಗ್ರಹ ವಾಪಸ್ ಪಡೆಯುವಂತೆ ನ್ಯಾಯಾಲಯ ಹೇಳಿದ್ದಕ್ಕೆ ಆದೇಶ ಪಾಲಿಸಿದ್ದೇವೆ. ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಷ್ಕರವನ್ನು ಆಗ ನಿಲ್ಲಿಸಬೇಕಾಯಿತು. ಈ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡುತ್ತೇವೆ. ಆ.27ರಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಭೆ ಕರೆದಿದ್ದೇವೆ. ಸಾರಿಗೆ ನೌಕರರು ಹಾಗೂ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ. ಸೆ. 6ರ ನಂತರ ಮುಂದಿನ ಹೋರಾಟ ನಡೆಸುವ ಕುರಿತು ಚರ್ಚಿಸಲಾಗುವುದು. ಹೋರಾಟ ಯಾವ ರೀತಿ ಇರಬೇಕು ಎನ್ನುವುದನ್ನು ಎಲ್ಲರೂ ಸೇರಿ ನಿರ್ಧರಿಸುತ್ತೇವೆ’ ಎಂದರು.

‘ಮುಷ್ಕರದಲ್ಲಿ ಭಾಗಿಯಾದ ನೌಕರರನ್ನು ವಜಾಗೊಳಿಸುವ ಮೂಲಕ ಸರ್ಕಾರ ತಪ್ಪು ನಿರ್ಧಾರ ಕೈಗೊಳ್ಳುತ್ತಿದೆ. ವಜಾಗೊಳಿಸುವಂತಹ ಅಪರಾಧ ಏನಾಗಿದೆ ಎನ್ನುವುದನ್ನು ಹೇಳಬೇಕು. ಸಂಘಟನಾ ಶಕ್ತಿ ದಮನ ಮಾಡಲು ಈ ರೀತಿ ಕ್ರಮ ತೆಗೆದುಕೊಳ್ಳುವುದು ಖಂಡನೀಯ. ನೂತನ ಮುಖ್ಯಮಂತ್ರಿಯು ಸಾರಿಗೆ ನೌಕರರ ಜೊತೆ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಬೇಕು’ ಎಂದು ಒತ್ತಾಯಿಸಿದರು.

‘ನೆರೆ ಸಂತ್ರಸ್ತರು ಹಾಗೂ ಬೆಳೆ ಹಾನಿ ಅನುಭವಿಸಿದ ರೈತರ ಪರವಾಗಿ ಸದಾ ನಿಲ್ಲುತ್ತೇನೆ. ಮೊದಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ. ಇದಾದ ಬಳಿಕವೂ ಸ್ಪಂದಿಸದಿದ್ದರೆ ಚಾಟಿ ಬೀಸುವ ಕೆಲಸ ಮಾಡುತ್ತೇವೆ. ರೈತರ ಸಮಸ್ಯೆಗಳನ್ನು ಆಲಿಸಬೇಕಾದ ಮುಖ್ಯಮಂತ್ರಿ, ಸಂಭ್ರಮದಲ್ಲಿ ಓಡಾಡುತ್ತಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಕೊಡಲು ವಿಫಲವಾದರೆ ನಾವೆಲ್ಲರೂ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT